
2024ರ ಹುರುನ್ ಇಂಡಿಯಾ ರಿಚ್ ಲಿಸ್ಟ್ ಪ್ರಕಟವಾಗಿದೆ. ಭಾರತದ ಅತಿ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿ ಗೌತಮ್ ಅದಾನಿ ಅಗ್ರಸ್ಥಾನಕ್ಕೇರಿದ್ದಾರೆ. ಹಿಂಡನ್ಬರ್ಗ್ ರಿಸರ್ಚ್ ವರದಿ ಪ್ರಕಟವಾದ ಬಳಿಕ ಇದೇ ಮೊದಲ ಬಾರಿಗೆ ಅದಾನಿ ಅಂಡ್ ಫ್ಯಾಮಿಲಿ ಭಾರತದ ನಂಬರ್ ಒನ್ ಶ್ರೀಮಂತರೆನಿಸಿದೆ. ಷೇರುಗಳ ಈಗಿನ ಮೌಲ್ಯದ ಪ್ರಕಾರ ಒಟ್ಟಾರೆ ಮಾರುಕಟ್ಟೆ ಸಂಪತ್ತು ಸೇರಿಸಿದ ಆಸ್ತಿಯನ್ನು ಪರಿಗಣಿಸಿ ಪಟ್ಟಿ ಮಾಡಲಾಗಿದೆ. ಭಾರತದ ಟಾಪ್-10 ಶ್ರೀಮಂತರ ಪಟ್ಟಿ ಮುಂದಿದೆ ನೋಡಿ...

ಅತೀ ಶ್ರೀಮಂತ ಭಾರತೀಯರ ಪಟ್ಟಿ: 1)ಗೌತಮ್ ಅದಾನಿ ಕುಟುಂಬ, 2)ಮುಕೇಶ್ ಅಂಬಾನಿ ಕುಟುಂಬ, 3)ಶಿವ್ ನಾದರ್ ಕುಟುಂಬ, 4)ಸೈರಸ್ ಪೂನಾವಾಲ ಕುಟುಂಬ, 5)ದಿಲೀಪ್ ಶಾಂಘವಿ, 6)ಕುಮಾರಮಂಗಲಂ ಬಿರ್ಲಾ ಕುಟುಂಬ, 7)ಗೋಪಿಚಂದ್ ಹಿಂದೂಜಾ ಕುಟುಂಬ, 8)ರಾಧಾಕಿಶನ್ ದಮಾನಿ ಕುಟುಂಬ, 9)ಅಜೀಮ್ ಪ್ರೇಮ್ಜಿ ಕುಟುಂಬ, 10)ನೀರಜ್ ಬಜಾಜ್ ಕುಟುಂಬ.

ಗೌತಮ್ ಅದಾನಿ ಮತ್ತು ಕುಟುಂಬದ ಬಳಿ ಇರುವ ಒಟ್ಟಾರೆ ಸಂಪತ್ತು 11.61 ಲಕ್ಷ ಕೋಟಿ ರೂ. ಹಾಗೆಯೇ, ಮುಕೇಶ್ ಅಂಬಾನಿ ಬಳಿ ಇರುವ ಸಂಪತ್ತಿನ ಮೌಲ್ಯ 10.14 ಲಕ್ಷ ಕೋಟಿ ರೂ. ಹತ್ತನೇ ಸ್ಥಾನದಲ್ಲಿರುವ ನೀರಜ್ ಬಜಾಜ್ ಮತ್ತು ಕುಟುಂಬ ಹೊಂದಿರುವ ಆಸ್ತಿ ಮೌಲ್ಯ 1.62 ಲಕ್ಷ ಕೋಟಿ ರೂ.

2011ರಿಂದ ಹುರುನ್ ಇಂಡಿಯಾ ರಿಚ್ ಲಿಸ್ಟ್ ಪ್ರಕಟವಾಗುತ್ತಿದೆ. ಇದೇ ಮೊದಲ ಬಾರಿಗೆ ಈ ಪಟ್ಟಿಯಲ್ಲಿರುವ ಶ್ರೀಮಂತರ ಸಂಖ್ಯೆ 1,500 ಗಡಿ ದಾಟಿದೆ. ಕನಿಷ್ಠ 1,000 ಕೋಟಿ ರೂ ಆಸ್ತಿ ಹೊಂದಿರುವವರ ಪಟ್ಟಿ ಇದು. 2024ರ ಹುರುನ್ ಇಂಡಿಯಾ ಪಟ್ಟಿಯಲ್ಲಿ 1,539 ವ್ಯಕ್ತಿಗಳಿದ್ದಾರೆ. ಬಿಲಿಯನೇರ್ಗಳ ಸಂಖ್ಯೆ 334ಕ್ಕೆ ಏರಿದೆ. ಬಿಲಿಯನೇರ್ ಎಂದರೆ ಒಂದು ಬಿಲಿಯನ್ ಡಾಲರ್ಗಿಂತ ಹೆಚ್ಚು ಆಸ್ತಿ ಹೊಂದಿರುವವರು.

ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಮೊದಲ ಬಾರಿಗೆ ಬಿಲಿಯನೇರ್ ಎನಿಸಿದ್ದಾರೆ. ಬಾಲಿವುಡ್ನ ಕೆಲ ಪ್ರಮುಖ ಹೆಸರುಗಳು ಹುರುನ್ ಪಟ್ಟಿಯಲ್ಲಿ ಕಾಣಿಸಿವೆ. ಶಾರುಖ್ ಖಾನ್ ಮುಂಚೂಣಿಯಲ್ಲಿದ್ದಾರೆ. ಜೂಹಿ ಚಾವ್ಲಾ, ಹೃತಿಕ್ ರೋಷನ್, ಅಮಿತಾಭ್ ಬಚ್ಚನ್, ಕರಣ್ ಜೋಹರ್ ಅವರು ಪಟ್ಟಿಯಲ್ಲಿದ್ದಾರೆ.

ಹುರುನ್ ಇಂಡಿಯಾ ರಿಚ್ ಲಿಸ್ಟ್ನಲ್ಲಿ ಅತಿಹೆಚ್ಚು ಮಂದಿ ಹೊಂದಿರುವ ನಗರಗಳ ಪಟ್ಟಿಯಲ್ಲಿ ಮುಂಬೈ ಮತ್ತು ದೆಹಲಿ ಅಗ್ರಸ್ಥಾನಗಳನ್ನು ಆಕ್ರಮಿಸಿವೆ. ಹೈದರಾಬಾದ್ ನಗರ ಬೆಂಗಳೂರನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದೆ. ಅಂದರೆ, ಹೈದರಾಬಾದ್ನಲ್ಲಿ ಶ್ರೀಮಂತರ ಸಂಖ್ಯೆ ಬೆಂಗಳೂರಿನದಕ್ಕಿಂತ ಹೆಚ್ಚಿದೆ.

ಹುರುನ್ ಇಂಡಿಯಾ ರಿಚ್ ಲಿಸ್ಟ್ನಲ್ಲಿ ಇರುವ 1,539 ವ್ಯಕ್ತಿಗಳ ಒಟ್ಟಾರೆ ಸಂಪತ್ತು 159 ಲಕ್ಷ ಕೋಟಿ ರೂ. ಇದು ಶ್ರೀಮಂತ ದೇಶಗಳಾದ ಸ್ವಿಟ್ಜರ್ಲ್ಯಾಂಡ್ ಮತ್ತು ಸೌದಿ ಅರೇಬಿಯಾದ ಜಿಡಿಪಿಗಳನ್ನು ಒಟ್ಟಿಗೆ ಸೇರಿಸಿದರೆ ಆಗುವ ಮೊತ್ತಕ್ಕಿಂತ ಹೆಚ್ಚು.