
ಚಿಕ್ಕಬಳ್ಳಾಪುರ, ಫೆಬ್ರವರಿ 14: ಜಗತ್ತಿನಾದ್ಯಂತ ಜೀವನೋತ್ಸಾಹ ತುಂಬುವ ವ್ಯಾಲೆಂಟೆನ್ಸ್ ಡೆ ಧಾಂಧೂಮ್ ಅಂತಾ ನಡೆಯುತ್ತಿದ್ದರೆ ಇತ್ತ ಮುಂದಿನ ಜೀವನ ಹೇಗಪ್ಪಾ? ಎಂಬಂತೆ ಜೀವನದ ಸತ್ವವನ್ನೇ ಕಳೆದುಕೊಂಡವರಂತೆ ಮಸಣ ಕಾರ್ಮಿಕರು ಚಿಕ್ಕಬಳ್ಳಾಪುರದಲ್ಲಿ ಪ್ರತಿಭಟನೆ ಇಂದು ನಡೆಸಿದರು.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹೆಣಗಳೇ ನಾಚುವ ಹಾಗೆ ಅಣಕು ಶವಯಾತ್ರೆ ಮೆರವಣಿಗೆ ಮಾಡಿ, ನಂತರ ಸ್ಮಶಾನದಲ್ಲಿ ಅತ್ಯಂತ ಶಾಸ್ತ್ರೋಕ್ತವಾಗಿ ಅಣಕು ಶವಸಂಸ್ಕಾರ ಮಾಡುವುದರ ಮೂಲಕ ಮಸಣ ಕಾರ್ಮಿಕರು ಚಿಕ್ಕಬಳ್ಳಾಪುರ ಹೊರವಲಯದಲ್ಲಿ ವಿನೂತನ ಪ್ರತಿಭಟನೆ ಮಾಡಿದ್ರು. ಈ ಕುರಿತು ಒಂದು ವರದಿ.

ಅಣಕು ಶವಯಾತ್ರೆ ನಡೆಸಿ ತಮ್ಮ ಆಕ್ರೋಶ ಅಸಮಾಧಾನ ಹೊರ ಹಾಕಿದವರು ಯಾವುದೇ ರಾಜಕೀಯ ಪಕ್ಷದವರಲ್ಲ, ಬೇರೆ ರೀತಿಯ ಸಾಮಾನ್ಯ ಹೋರಾಟಗಾರರು ಅಲ್ಲವೆ ಅಲ್ಲ. ಆದ್ರೆ ಪ್ರತಿದಿನ ಸ್ಮಶಾನದಲ್ಲಿ ಕೆಲಸ ಮಾಡುವ ಕಾರ್ಮಿಕರು ಅಸಹಾಯಕ ಸ್ಥಿತಿ ತಲುಪಿದ್ದಾರೆ.

ಈ ಹಿನ್ನೆಲೆಯಲ್ಲಿ ತಮ್ಮ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಿಂದ ಚಿಕ್ಕಬಳ್ಳಾಪುರ ತಾಲೂಕಿನ ಪೂಜನಹಳ್ಳಿ ಗ್ರಾಮದ ಸ್ಮಶಾನದ ವರೆಗೂ ಮೆರವಣಿಗೆ ನಡೆಸಿ ನಂತರ ಸ್ಮಶಾನದಲ್ಲಿ ಅಣಕು ಶವಸಂಸ್ಕಾರ ನಡೆಸಿದ್ರು.

ಇನ್ನು ಸ್ಮಶಾನ ಕಾರ್ಮಿಕರಿಗೆ ನರೇಗಾ ಯೋಜನೆಯಡಿ ಸಾಮಾಗ್ರಿ ಖರೀದಿ ಮಾಡುವುದು, ಪ್ರತಿ ತಿಂಗಳ ಐದು ಸಾವಿರ ರೂಪಾಯಿ ಮಾಸಾಶಸನ ನೀಡುವುದು, ಕಾರ್ಮಿಕರನ್ನು ಸ್ಥಳೀಯ ಪಂಚಾಯತಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ಚಿಕ್ಕಬಳ್ಳಾಪುರ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿಗೆ ಮನವಿ ನೀಡಿದ್ರು.

ಒಟ್ನಲ್ಲಿ ಪ್ರತಿದಿನ ಒಂದಿಲ್ಲೊಂದು ಸ್ಮಶಾನದಲ್ಲಿ ಕೆಲಸ ಮಾಡುವ ಸ್ಮಶಾನ ಕಾರ್ಮಿಕರು, ಇಂದು ಬಿಡುವು ಮಾಡಿಕೊಂಡು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿನೂತನ ಮಾದರಿಯಲ್ಲಿ ಶಾಸ್ತ್ರೋಕ್ತವಾಗಿ ಅಣಕು ಶವಯಾತ್ರೆ ನಡೆಸಿದ್ದು ವಿಶೇಷವಾಗಿತ್ತು.
Published On - 4:49 pm, Wed, 14 February 24