
ಎಲ್ಒಸಿಯಲ್ಲಿ ಪಾಕ್ ಸೇನೆಯಿಂದ ಅಪ್ರಚೋದಿತ ಗುಂಡಿನ ದಾಳಿ ನಡೆದ ಬೆನ್ನಲ್ಲೇ ಭಾರತೀಯ ಸೇನೆಯಿಂದ ಪ್ರತಿ ದಾಳಿ ನಡೆಸಲಾಗಿದೆ. ಭಾರತೀಯ ಸೇನೆಯಿಂದ ಪಾಕ್ ಸೇನಾ ಶಿಬಿರಗಳನ್ನು ಧ್ವಂಸ ಮಾಡಲಾಗಿದೆ. ಪಾಕಿಸ್ತಾನ ಸೇನೆಗೆ ತಕ್ಕ ಪ್ರತ್ಯುತ್ತರ ನೀಡಿರುವ ಭಾರತೀಯ ಸೇನೆ ಸೇಡು ತೀರಿಸಿಕೊಂಡಿದೆ. ಕುಪ್ವಾರ, ಉರಿ, ಅಖ್ನೂರು ಪ್ರದೇಶದಲ್ಲಿ ಫೈರಿಂಗ್ ನಡೆಸಿದ್ದ ಪಾಕ್ ಸೇನೆಯ ದಾಳಿಗೆ ಪ್ರತಿದಾಳಿ ನಡೆಸಿ ಬಿಎಸ್ಎಫ್ ತಿರುಗೇಟು ನೀಡಿದೆ.

ಪಹಲ್ಗಾಮ್ ದಾಳಿಗೆ ಕಾರಣರಾದ ಒಬ್ಬ ಭಯೋತ್ಪಾದಕನನ್ನು ಕೂಡ ಬಿಡುವುದಿಲ್ಲ. ಅವರು ಎಲ್ಲೇ ಅಡಗಿದ್ದರೂ ಹುಡುಕಿ ಹುಡುಕಿ ಹೊಡೆಯುತ್ತೇವೆ. ಮೋದಿ ಸರ್ಕಾರದಲ್ಲಿ ಯಾವ ಉಗ್ರರನ್ನೂ ಬಿಡುವ ಮಾತೇ ಇಲ್ಲ. ಭಯೋತ್ಪಾದನೆಯನ್ನ ನಾವು ಮಟ್ಟ ಹಾಕುತ್ತೇವೆ. ಪಹಲ್ಗಾಮ್ ದಾಳಿಯಲ್ಲಿ ಬಲಿಯಾದ ಪ್ರತಿಯೊಬ್ಬರ ಸಾವಿಗೂ ಪ್ರತೀಕಾರ ತೀರಿಸಿಕೊಳ್ಳುತ್ತೇವೆ. ಅಲ್ಲಿಯವರೆಗೂ ನಾವು ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ ಎಂಬುದನ್ನು ಉಗ್ರರು ಮರೆಯಬಾರದು. ನಾವು ಭಯೋತ್ಪಾದನೆ ವಿರುದ್ಧ ಹೋರಾಟ ಮಾಡುತ್ತೇವೆ. ನಾವು ಭಯೋತ್ಪಾದನೆಯನ್ನ ಬೇರುಸಹಿತ ಕಿತ್ತುಹಾಕುತ್ತೇವೆ ಎಂದು ಪಹಲ್ಗಾಮ್ ದಾಳಿಕೋರರಿಗೆ ಅಮಿತ್ ಶಾ ಕಠಿಣ ಎಚ್ಚರಿಕೆ ನೀಡಿದ್ದಾರೆ.

ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿತು. ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ನಡೆದ ಹತ್ಯೆಗಳ ತನಿಖೆಯನ್ನು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ನಡೆಸಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಲಾಗಿತ್ತು. ಪಿಐಎಲ್ ಸಲ್ಲಿಸಿದ್ದ ವ್ಯಕ್ತಿಗೆ ತರಾಟೆ ತೆಗೆದುಕೊಂಡ ಸುಪ್ರೀಂಕೋರ್ಟ್ ಉಗ್ರರ ದಾಳಿಯ ಬಗ್ಗೆ ತನಿಖೆ ನಡೆಸುವುದು ಜಡ್ಜ್‌ಗಳ ಜವಾಬ್ದಾರಿಯಲ್ಲ. ಉಗ್ರರ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಒಗ್ಗಟ್ಟಾಗಿರಬೇಕು. ಸೇನಾ ಪಡೆಗಳ ಆತ್ಮಸ್ಥೈರ್ಯ ಕುಗ್ಗಿಸುವ ಪಿಐಎಲ್ ಸಲ್ಲಿಸಬೇಡಿ ಎಂದು ಹೇಳಿದೆ.

ಪಾಕಿಸ್ತಾನದ ನಿವಾಸಿಗಳು ಭಾರತದಿಂದ ವಾಪಸಾಗದಂತೆ ವಾಘಾ ಗಡಿ ಬಂದ್ ಮಾಡಲಾಗಿದೆ. ಪಾಕಿಸ್ತಾನ ಸರ್ಕಾರ ತನ್ನ ದೇಶದ ಪ್ರಜೆಗಳಿಗೇ ಗಡಿಯನ್ನು ಮುಚ್ಚಿರುವುದರಿಂದ ಪಾಕಿಸ್ತಾನದ ಪ್ರಜೆಗಳು ಅತಂತ್ರರಾಗಿದ್ದಾರೆ. ಹೀಗಾಗಿ, ಭಾರತದಿಂದ ಪಾಕಿಸ್ತಾನಿಯರು ವಾಪಸಾಗಲು ಕೇಂದ್ರ ಸರ್ಕಾರ ಅವಧಿ ವಿಸ್ತರಿಸಿದೆ. ಪಾಕಿಸ್ತಾನಿ ನಾಗರಿಕರು ದೇಶ ಬಿಡಲು ಮುಂದಿನ ಸೂಚನೆ ಬರುವವರೆಗೆ ಭಾರತ ಗಡುವನ್ನು ವಿಸ್ತರಿಸಿದೆ.

ಪಾಕಿಸ್ತಾನ ಸೇನೆಯ ಆದೇಶದ ಮೇರೆಗೆ ತೀವ್ರ ಆತಂಕಗೊಂಡ ಅಮೆರಿಕದಲ್ಲಿರುವ ಪಾಕಿಸ್ತಾನದ ರಾಯಭಾರಿ ರಿಜ್ವಾನ್ ಸಯೀದ್ ಶೇಖ್, ಭಾರತದೊಂದಿಗೆ ಉದ್ವಿಗ್ನತೆಯನ್ನು ಕಡಿಮೆ ಮಾಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮನವಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ ನಂತರ, ಪಾಕಿಸ್ತಾನವು ಭಯಭೀತವಾಗಿದೆ. ಈ ಹಿನ್ನೆಲೆಯಲ್ಲಿ ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಡೊನಾಲ್ಡ್ ಟ್ರಂಪ್ ಅವರ ಬಳಿ ಮೋದಿಯ ಜೊತೆ ಮಾತನಾಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಪಹಲ್ಗಾಮ್ ಜೊತೆ ಉಗ್ರರು ಇನ್ನೂ 3 ಸ್ಥಳಗಳನ್ನು ಕೂಡ ದಾಳಿಗೆ ಶಾರ್ಟ್ ಲಿಸ್ಟ್ ಮಾಡಿಕೊಂಡಿದ್ದರು. 2 ದಿನದಿಂದ ಕಾಶ್ಮೀರ ಕಣಿವೆಯಲ್ಲಿ ಓಡಾಡಿದ್ದ ಉಗ್ರರು ಕೊನೆಗೆ ತಮ್ಮ ದಾಳಿಗೆ ಪಹಲ್ಗಾಮ್ ಅನ್ನು ಆಯ್ಕೆ ಮಾಡಿಕೊಂಡಿದ್ದರು. ಭಯೋತ್ಪಾದಕರು ಆರಂಭದಲ್ಲಿ ಅರು ಕಣಿವೆ, ಮನೋರಂಜನಾ ಉದ್ಯಾನವನ ಮತ್ತು ಬೇತಾಬ್ ಕಣಿವೆ ಸೇರಿದಂತೆ ಇತರ ಮೂರು ಸ್ಥಳಗಳ ಮೇಲೆ ದಾಳಿ ಮಾಡಲು ಯೋಜಿಸಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ, ಆ ಸ್ಥಳಗಳಲ್ಲಿ ಭದ್ರತಾ ಪಡೆಗಳು ಇದ್ದುದರಿಂದ ಅವರ ಯೋಜನೆ ವಿಫಲವಾಯಿತು.

ಭಾರತದ ಮಿಲಿಟರಿ ಸಿದ್ಧತೆಗಳಿಂದ ಭಯಭೀತರಾಗಿರುವ ಪಾಕಿಸ್ತಾನ, ತನ್ನ ಗುಪ್ತಚರ ಸಂಸ್ಥೆ ಐಎಸ್‌ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಅಸೀಮ್ ಮಲಿಕ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರಾಗಿ (ಎನ್‌ಎಸ್‌ಎ) ಹೆಚ್ಚುವರಿ ಜವಾಬ್ದಾರಿಯನ್ನು ನೀಡಿದೆ.

ಭಾರತ ಸರ್ಕಾರವು ಪಾಕಿಸ್ತಾನಿ ಕಲಾವಿದರು, ಪಾಕಿಸ್ತಾನ ದೇಶದ ಯೂಟ್ಯೂಬ್ ಚಾನೆಲ್‌ಗಳು ಮತ್ತು ಅವರ ಸೆಲೆಬ್ರಿಟಿಗಳ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿಷೇಧಿಸಿದ ನಂತರ, ಪಾಕಿಸ್ತಾನ ಕೂಡ ಇಂದು ಎಫ್‌ಎಂ ರೇಡಿಯೋ ಕೇಂದ್ರಗಳಲ್ಲಿ ಭಾರತದ ಹಾಡುಗಳನ್ನು ಪ್ರಸಾರ ಮಾಡುವುದನ್ನು ನಿಷೇಧಿಸುವುದಾಗಿ ಘೋಷಿಸಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದೊಂದಿಗಿನ ಉದ್ವಿಗ್ನತೆಯ ನಡುವೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು (ಮೇ 1) ಅಮೆರಿಕ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೇತ್ ಅವರೊಂದಿಗೆ ಮಾತನಾಡಿದರು. ವರದಿಗಳ ಪ್ರಕಾರ, ಪಹಲ್ಗಾಮ್ ದಾಳಿಯ ಬಗ್ಗೆ ಅವರು ಫೋನ್ ಸಂಭಾಷಣೆಯಲ್ಲಿ ಚರ್ಚಿಸಿದ್ದಾರೆ ಎನ್ನಲಾಗಿದೆ.
Published On - 10:14 pm, Thu, 1 May 25