Updated on: Aug 01, 2022 | 4:09 PM
ಭಾರತದ ಪ್ರತಿಷ್ಠಿತ ಕಂಪೆನಿ ಟಾಟಾ ಗ್ರೂಪ್ನ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (TASL ) ಭಾರತೀಯ ಸೇನೆಗಾಗಿ ವಿಶೇಷ ಕ್ವಿಕ್ ರಿಯಾಕ್ಷನ್ ಫೈಟಿಂಗ್ ವೆಹಿಕಲ್-ಮೀಡಿಯಂ (QRFV) ವಾಹನಗಳನ್ನು ನಿರ್ಮಿಸಿದೆ. ಈ ವಿಶೇಷ ವಾಹನಗಳನ್ನು ಈಗಾಗಲೇ ಭಾರತೀಯ ಸೇನೆಗೆ ಪೂರೈಸಲಾಗಿದ್ದು, ಇದು ಭವಿಷ್ಯದ ಸಂಘರ್ಷಗಳಲ್ಲಿ ಭಾರತೀಯ ಸೇನೆಯ ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು TASL ಟ್ವಿಟರ್ ಮೂಲಕ ತಿಳಿಸಿದೆ.
ಮಾಹಿತಿಯ ಪ್ರಕಾರ, ಟಾಟಾ ಅಡ್ವಾನ್ಸ್ ಸಿಸ್ಟಮ್ಸ್ ಕಡೆಯಿಂದ 10 ವಿಶೇಷ ಯುದ್ಧ ವಾಹನಗಳನ್ನು ಭಾರತೀಯ ಸೇನೆಗೆ ತಲುಪಿಸಲಾಗಿದೆ. ಇವು ಆಧುನಿಕ ತಂತ್ರಜ್ಞಾನ ಹಾಗೂ ಬಲಿಷ್ಠ ಬಾಡಿಯನ್ನು ಹೊಂದಿರುವುದು ವಿಶೇಷ. ಹಾಗಿದ್ರೆ ಕ್ವಿಕ್ ರಿಯಾಕ್ಷನ್ ಫೈಟಿಂಗ್ ವೆಹಿಕಲ್ ಎಂದರೇನು ನೋಡೋಣ...
ಕ್ವಿಕ್ ರಿಯಾಕ್ಷನ್ ಫೈಟಿಂಗ್ ವೆಹಿಕಲ್‌ಗಳನ್ನು ರಣರಂಗಕ್ಕಾಗಿ ಸಿದ್ಧಪಡಿಸಲಾದ ವಿಶೇಷ ವಾಹನ. ಅಂದರೆ ಯುದ್ಧ ಭೂಮಿಯಲ್ಲಿ ಸೈನಿಕರ ಸುರಕ್ಷತೆ ಹಾಗೂ ಇನ್ನಿತರ ಚಟುವಟಿಕೆಗಳನ್ನು ಮತ್ತಷ್ಟು ಸುಲಭಗೊಳಿಸುವಂತೆ ಈ ವಾಹನವನ್ನು ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಮುಖ್ಯವಾಗಿ ಈ ವಾಹನವು ಬುಲೆಟ್ ಪ್ರೂಫ್ ಎಂಬುದು ವಿಶೇಷ. ಅಷ್ಟೇ ಅಲ್ಲದೆ ಇದರಲ್ಲಿ 4X4 ಡ್ರೈವ್‌ಟ್ರೇನ್ ನೀಡಲಾಗಿದ್ದು, ಇದರಿಂದ ಗುಡ್ಡಗಾಡು ಪ್ರದೇಶಗಳಲ್ಲೂ ಈ ವಾಹನವನ್ನು ನಿರಾಯಾಸವಾಗಿ ಓಡಿಸಬಹುದು.
ಟಾಟಾ ನಿರ್ಮಿಸಿರುವ ಈ ವಾಹನಗಳ ಮತ್ತೊಂದು ವಿಶೇಷತೆ ಎಂದರೆ, ಇದರಲ್ಲಿ ಸ್ಟ್ಯಾನ್ನಾಗ್ 4 ಬ್ಲಾಸ್ಟ್ ಪ್ರೊಟಕ್ಷನ್ ನೀಡಲಾಗಿದೆ. ಅದರಂತೆ ಈ ವಾಹನಗಳು 14 ರಿಂದ 21 ಕೆಜಿಯಷ್ಟು ಸ್ಫೋಟವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಅಂದರೆ 21 ಕೆ.ಜಿವರೆಗಿನ ಗ್ರೆನೇಡ್ಗಳೂ ಸ್ಪೋಟಗೊಂಡರೂ ವಾಹನಕ್ಕೆ ಯಾವುದೇ ಹಾನಿಯಾಗುವುದಿಲ್ಲ.
ಅಲ್ಲದೆ ಈ ವಾಹನದಲ್ಲಿ ಒಂದೇ ಬಾರಿ 14 ಸೈನಿಕರಿಗೆ ಕುಳಿತುಕೊಳ್ಳುವ ವ್ಯವಸ್ಥೆಯಿದೆ. ಅಂದರೆ ಒಂದೇ ಸಲ ಈ ವಾಹನದ ಮೂಲಕ 14 ಸೈನಿಕರು ಪ್ರಯಾಣಿಸಬಹುದಾಗಿದೆ. ಅಷ್ಟೇ ಅಲ್ಲದೆ ಇದರ ಮೇಲ್ಭಾಗದಲ್ಲಿ 360 ಡಿಗ್ರಿ ತಿರುಗುವ ಟಾಪ್ ನೀಡಲಾಗಿದ್ದು, ಜೊತೆ 10 ಫೈರಿಂಗ್ ಪೋರ್ಟ್ಗಳನ್ನು ಅಳವಡಿಸಲಾಗಿದೆ.
ಟಾಟಾ ಕ್ವಿಕ್ ರಿಯಾಕ್ಷನ್ ಫೈಟಿಂಗ್ ವಾಹನಗಳು ಶಕ್ತಿಯುತವಾದ ಡೀಸೆಲ್ ಎಂಜಿನ್ ಹೊಂದಿದ್ದು, ಇದು ಗರಿಷ್ಠ 240 Bhp ಶಕ್ತಿಯನ್ನು ಉತ್ಪಾದಿಸುತ್ತದೆ. ಅಷ್ಟೇ ಅಲ್ಲದೆ ಗರಿಷ್ಠ 2 ಟನ್ ಭಾರವನ್ನು ಸಾಗಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು ಇದಕ್ಕೆ ಆಲ್-ಟೆರೈನ್ ಟೈರ್‌ಗಳನ್ನು ಅಳವಡಿಸಲಾಗಿದ್ದು, ಇದರಿಂದ ವಾಹನವನ್ನು ಎಲ್ಲಾ ಪ್ರದೇಶಗಳಲ್ಲೂ ಸುಲಭವಾಗಿ ಓಡಿಸಬಹುದು. ಮುಖ್ಯವಾಗಿ ಲಡಾಖ್ನಂತಹ ಗುಡ್ಡಗಾಡು ಗಡಿ ಪ್ರದೇಶವನ್ನು ಹೊಂದಿರುವ ಸ್ಥಳಗಳಿಗಾಗಿ ಈ ವಾಹನಗಳನ್ನು ವಿನ್ಯಾಸಗೊಳಿಸಲಾಗಿದೆ.
ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ನಿರ್ಮಿಸಲಾಗಿರುವ ಕ್ವಿಕ್ ರಿಯಾಕ್ಷನ್ ಫೈಟಿಂಗ್ ವೆಹಿಕಲ್ ಇದೀಗ ಭಾರತೀಯ ಸೇನೆಗೆ ತಲುಪಿದ್ದು, ಈ ಹೊಸ ಯುದ್ಧ ವಾಹನಕ್ಕಾಗಿ ವಿದೇಶಗಳಿಂದಲೂ ಬೇಡಿಕೆಯಿದೆ ಎಂದು ಟಾಟಾ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (TASL ) ತಿಳಿಸಿದೆ.
Published On - 4:09 pm, Mon, 1 August 22