Vehicle of Gods: ಎಲ್ಲ ದೇವ, ದೇವತೆಯ ವಾಹನವೂ ಒಂದೊಂದು ಸಂದೇಶ ನೀಡುತ್ತದೆ! ಏನದು?
god vehicles: ಹಿಂದೂ ಧರ್ಮದಲ್ಲಿ ಒಬ್ಬೊಬ್ಬ ದೇವರು, ದೇವತೆಗಳಿಗೆ ಒಂದೊಂದು ವಾಹನ ಇರುತ್ತದೆ. ಅವು ಪಶು, ಪಕ್ಷಿಯ ರೂಪದಲ್ಲಿರುತ್ತವೆ. ಆಯಾ ದೇವರಗೆ ಆಯಾ ವಾಹನಗಳು ನಿರ್ದಿಷ್ಟವಾಗಿ ಇರುತ್ತವೆ. ಇವು ಧಾರ್ಮಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಭಾರಿ ಮಹತ್ವ ಹೊಂದಿವೆ. ಅವು ನೀಡುವ ಸಂದೇಶ ಏನು ಎಂಬುದನ್ನು ತಿಳಿಯೋಣ. ಸನಾತನ ಪರಂಪರೆಯಲ್ಲಿ ಬರುವ ದೇವರು, ಮತ್ತು ದೇವತೆಗಳಿಗೆ ಯಾವುದಾದರೂ ಒಂದು ಪಶು ಅಥವಾ ಪಕ್ಷಿ ವಾಹನವಾಗಿ ಕಾರ್ಯನಿರ್ವಹಿಸುತ್ತವೆ. ಆ ವಾಹನ ರೂಪಿ ಪಶು ಪಕ್ಷಿಯ ಗುಣಗಳು, ಆಚರಣೆಯ ಮಹತ್ವಗಳು ಸಹ ಇರುತ್ತವೆ. ಅದನ್ನು ಇಲ್ಲಿ ಸವಿಸ್ತಾರವಾಗಿ ತಿಳಿಯೋಣ.
Updated on:Nov 17, 2021 | 7:26 AM

ಶಿವನ ವಾಹನ ನಂದಿ: ನಂದಿ ಅಂದರೆ ಬಸವ ಶಿವನ ಸವಾರಿ ವಾಹನ. ಬಸವ ತನ್ನ ಸ್ವಾಮಿನಿಷ್ಠೆ ತೋರುತ್ತಾ ಸದಾ ತನ್ನ ಶಿವನ ಜೊತೆಯೇ ಸಮರ್ಪಣಾಭಾವದಿಂದ ಇರುತ್ತದೆ. ನಂದಿ ಶಾಂತವಾಗಿರುತ್ತದೆ. ಆದರೆ ಅದಕ್ಕೆ ಕೋಪೋದ್ರಿಕ್ತಗೊಂಡರೆ ಯಾರ ಅಕೆಗೂ ಸಿಲುಕದೆ ತನ್ನ ವಿರಾಟ ರೂಪ ತೋರುತ್ತದೆ. ಶಕ್ತಿಯ ಸದುಪಯೋ ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ಈ ನಂದಿಯಿಂದ ಕಲಿಯಬಹುದು. ಶಾಂತವಾಗಿ ಇರುವುದು ಸಹ ಪ್ರಧಾನವಾಗುತ್ತದೆ.

ಲಕ್ಷ್ಮಿದೇವಿಯ ವಾಹನ ಗೂಬೆ: ತಾಯಿ ಲಕ್ಷ್ಮಿಯ ವಾಹನ ಗೂಬೆಯಾಗಿದೆ. ರಾತ್ರಿ ವೇಳೆ ಸಂಚರಿಸುವ ಗೂಬೆಯು ತುಂಬಾ ಕ್ರಿಯಾಶೀಲ ಪ್ರವೃತ್ತಿಯ ಪಕ್ಷಿಯಾಗಿದೆ. ಅದು ಸದಾ ತನ್ನ ಆಹಾರವನ್ನು ಅರಸಿ, ಸಂಚರಿಸುತ್ತದೆ. ಹೀಗಾಗಿ ಲಕ್ಷ್ಮಿಯ ವಾಹನ ಗೂಬೆ ನೀಡುವ ಸಂದೇಶ ಏನು ಅಂದರೆ ನಾವು ಸದಾ ಕ್ರಿಯಾಶೀಲರಾಗಿರಬೇಕು, ನಮ್ಮ ಆಹಾರವನ್ನು ನಾವು ದುಡಿದು ತಿನ್ನಬೇಕು. ಅಂದರೆ ಯಾರು ಹೀಗೆ ಗೂಬೆಯ ಸಂದೇಶದಿಂದ ಪ್ರೇರಿತರಾಗಿ ನಿರಂತರವಾಗಿ ದುಡಿದು ಗಳಿಕೆ ಆಡುತ್ತಾರೋ ಅವರಿಗೆ ಲಕ್ಷ್ಮಿದೇವಿ ಸದಾ ತನ್ನ ಕೃಪೆ ತೋರುತ್ತಾಳೆ.

ಸರಸ್ವತಿಯ ವಾಹನ ಹಂಸ: ವಿದ್ಯಾಧಿದೇವತೆ ಶಾರದೆಯ ವಾಹನ ಹಂಸವಾಗಿದೆ. ಈ ಹಂಸ ತುಂಬಾ ತಿಳಿವಳಿಕೆಯ ಮತ್ತು ನಿಷ್ಠಾವಂತ ಪಕ್ಷಿಯಾಗಿದೆ. ಹಂಸ ಪ್ರೇಮದ ದೇವತೆಯೂ ಹೌದು. ಜೀವನಪರ್ಯಂತ ಸಂಗಾತಿಯ ಜೊತೆಯೇ ಇರುತ್ತದೆ. ಒಂದು ವೇಳೆ ತನ್ನ ಸಂಗಾತಿಯನ್ನು ಕಳೆದುಕೊಂಡರೆ ಅಂತಹ ಹಂಸ ಮತ್ತೆ ಬೇರೊಬ್ಬ ಹಂಸದ ಜೊತೆ ಪ್ರೇಮದಲ್ಲಿ ತೊಡಗುವುದಿಲ್ಲ ಎನ್ನಲಾಗುತ್ತದೆ. ಹಂಸ ಕ್ಷೀರ ನ್ಯಾಯದಂತೆ ಹಾಲು ಮತ್ತು ನೀರನ್ನು ಬೆರಕೆ ಮಾಡಿಟ್ಟರೆ ಹಂಸವು ಹಾಲನ್ನು ಮಾತ್ರವೇ ಸೇವಿಸಿ, ನೀರನ್ನು ಬಿಟ್ಟುಬಿಡುತ್ತದೆ. ಇದರ ಸಂದೇಶ ಏನೆಂದರೆ ನಾವು ಸದಾ ಒಳ್ಳೆಯ ಗುಣಗಳನ್ನು ತೆಗೆದುಕೊಂಡು ದುರ್ಗುಣಗಳನ್ನು ದೂರವಿಡಬೇಕು ಎಂಬುದಾಗಿದೆ.

ದುರ್ಗಾ ಮಾತೆ ವಾಹನ ಸಿಂಹ: ದುಷ್ಟ ಸಂಹಾರಿಣಿ ಮತ್ತು ಭಕ್ತರ ಮೇಲೆ ಅಪಾರ ಕೃಪೆ ಬೀರುವ ದೇವಿ ದುರ್ಗೆಯ ವಾಹನ ಸಿಂಹವಾಗಿದೆ. ಸಿಂಹ ಸದಾ ಕುಟುಂಬದ ಜೊತೆಗೆ ಇರುತ್ತದೆ. ಕಾಡಿನ ರಾಜ ಸಿಂಹ ಎಲ್ಲಕ್ಕಿಂತ ಶಕ್ತಿಶಾಲಿ ಪ್ರಾಣಿ. ಈ ಕಾಡಿನ ರಾಜ ಸಿಂಹ ಎಂದಿಗೂ ತನ್ನ ಶಕ್ತಿಯನ್ನು ವ್ಯರ್ಥವಾಗಿ ಕಳೆದುಕೊಳ್ಳುವುದಿಲ್ಲ. ದುರ್ಗಾ ಮಾತೆಯ ವಾಹನದಿಂದ ನಮಗೆ ಇದೇ ಸಂದೇಶ ದೊರೆಯುತ್ತದೆ. ಏನೆಂದರೆ ಸುಖವೇ ಆಗಿರಲಿ, ದುಃಖವೇ ಆಗಲಿ ನಾವು ಎಂದಿಗೂ ನಮ್ಮ ಪರಿವಾರದ ಜೊತೆಯೇ ಸಂಯುಕ್ತವಾಗಿರಬೇಕು. ಮತ್ತು ನಮ್ಮ ಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳಬೇಕು.

ವಿಷ್ಣು ವಾಹನ ಗರುಡ: ಬಲಾಢ್ಯ ಗರುಡ ಆಕಾಶದಲ್ಲಿ ಅತಿ ಎತ್ತರಕ್ಕೆ ವಿಹರಿಸುತ್ತದೆ. ಆದರೆ ಭೂಮಿಯಮೇಲಿನ ಸಣ್ಣ ಸಣ್ಣ ಜೀವಿಗಳನ್ನೂ ನೋಡುತ್ತಿರುತ್ತದೆ. ಜಾಗರೂಕತೆ ಎಂಬುದನ್ನು ಗರುಡ ಪಕ್ಷಿಯಿಂದ ಕಲಿಯಬಹುದು.

ವಿನಾಯಕನ ವಾಹನ ಮೂಷಿಕ: ಪ್ರಥಮ ಪೂಜಕ ವಿನಾಯಕನ ವಾಹನ ಮೂಷಿಕವಾಗಿದೆ. ಇಲಿಯ ಸ್ವಭಾವ ವಿಧ್ವಂಸಗೊಳಿಸುವುದು. ಅದು ಒಳ್ಳೆಯದು, ಕೆಟ್ಟದ್ದುಅಂತೆಲ್ಲಾ ನೋಡುವುದಿಲ್ಲ. ಎಲ್ಲವನ್ನೂ ವಿಧ್ವಂಸ ಮಾಡುತ್ತಿರುತ್ತದೆ. ಆದರೆ ಬುದ್ಧಿ ಮತ್ತು ಸಿದ್ಧಿಯ ದೇವ ವಿಘ್ನವಿನಾಶಕ ಗಣಪ ಬುದ್ಧಿವಂತಿಕೆಯಿಂದ ವಿಧ್ವಂಸಕ ಪ್ರಾಣ ಇಲಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ತನ್ನ ಅಡಿಯಲ್ಲಿ ಹಾಕಿ ಕುಳಿತುಬಿಡುತ್ತಾನೆ. ಅಂದರೆ ಸ್ವಭಾವತಃ ವಿಧ್ವಂಸಕ ವೆನಿಸಿರುವ ಪ್ರಾಣಿಯನ್ನು ತನ್ನ ನಿಯತ್ರಣಕ್ಕೆ ತೆಗೆದುಕೊಂಡು ಅದರಿಂದ ಪ್ರಯೋಜನ ಪಡೆಯುವುದು ಗಣಪನ ಬುದ್ಧಿಮತ್ತೆಯಾಗಿದೆ. ನಾವೂ ಸಹ ಹಾಗೆಯೇ ವಿಧ್ವಂಸಕ ಗುಣಗಳುಳ್ಳವರ ಮೇಲೆ ಹಿಡಿತ ಸಾಧಿಸಿ, ಅವರಿಂದ ಒಳ್ಳೆಯ ಕೆಲಸಗಳನ್ನು ಮಾಡಿಸಬೇಕು.

ಸೂರ್ಯನ ವಾಹನ ಏಳು ಕುದುರೆಗಳ ರಥ: ಸೂರ್ಯ ಭಗವಂತನ ವಾಹನ ಏಳು ಕುದುರೆಗಳ ರಥವಾಗಿದೆ. ಈ ಏಳೂ ಕುದುರೆಗಳು ಅಚ್ಚ ಬಿಳುಪಿನ ಸ್ವಚ್ಛಂದದ ಪ್ರಾಣಿಗಳಾಗಿವೆ. ಸಂಘಟಿತ, ಸ್ಫೂರ್ಥಿಯ ಪ್ರತೀಕವಾಗಿದೆ. ಪ್ರಗತಿ ಪಥದಲ್ಲಿ ಮುಂದೆ ನಡೆಯುವುದು ಹೇಗೆ ಎಂಬುದನ್ನು ಈ ಅಶ್ವಗಳನ್ನು ನೋಡಿ ಕಲಿಯಬಹುದು.
Published On - 7:26 am, Wed, 17 November 21



















