
ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವ ಇಂದು ಅದ್ದೂರಿಯಾಗಿ ನೆರವೇರಿತು. ಅಜ್ಜನ ದರ್ಶನಕ್ಕೆ ಜನಸಾಗರವೇ ಹರಿದು ಬಂದಿತ್ತು. ಲಕ್ಷಾಂತರ ಭಕ್ತರ ಹರ್ಷೋದ್ಗಾರ, ಮೈಸೂರು ಪಾಕ್-ಪ್ರಸಾದದ ಘಮಲು 2026ರ ಮಹಾರಥೋತ್ಸವದ ಈ ಸಂಭ್ರಮಕ್ಕೆ ಈ ಬಾರಿ ವಿಶೇಷ ಮೆರುಗು ತಂದಿದೆ.

ಜಾತ್ರೆ ಎಂದರೆ ಅದು ಗವಿಸಿದ್ದಪ್ಪನ ಜಾತ್ರೆ ಎಂಬ ಮಾತನ್ನು ಈ ಬಾರಿಯೂ ಭಕ್ತರು ಸಾಬೀತುಪಡಿಸಿದ್ದಾರೆ. 2026ರ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಉತ್ತರ ಪ್ರದೇಶದ ಕುಂಭಮೇಳದಂತೆ ಜನಸಾಗರವೇ ಹರಿದು ಬಂದಿತ್ತು. ವಿಶೇಷವೆಂದರೆ ಕೊಪ್ಪಳದವರೇ ಆದ, ಮೇಘಾಲಯ ರಾಜ್ಯಪಾಲ ಹೆಚ್.ಸಿ. ವಿಜಯಶಂಕರ್ ಅವರು ಧ್ವಜಾರೋಹಣ ಮಾಡುವ ಮೂಲಕ ವಿಧ್ಯುಕ್ತ ಚಾಲನೆ ನೀಡಿದರು.

ಇನ್ನು ರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ 'ಗವಿಸಿದ್ದೇಶ್ವರ ಮಹಾರಾಜ್ ಕೀ ಜೈ' ಎಂಬ ಘೋಷಣೆ ಮುಗಿಲು ಮುಟ್ಟಿತು. ಸುಮಾರು 8 ರಿಂದ 10 ಲಕ್ಷ ಭಕ್ತರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ರಾಜ್ಯಪಾಲ ವಿಜಯಶಂಕರ್ ಅವರು ತಮ್ಮ ಭಾಷಣದಲ್ಲಿ, "ನನ್ನ ತವರು ಜಿಲ್ಲೆಯ ಈ ಭಕ್ತಿ ಪರಾಕಾಷ್ಠೆ ಕಂಡು ಧನ್ಯನಾದೆ" ಎಂದು ಭಾವುಕರಾದರು.

ಅಜ್ಜನ ಜಾತ್ರೆ ಮಾತ್ರ ಪ್ರಸಿದ್ಧವಾಲ್ಲ, ಇಲ್ಲಿನ ದಾಸೋಹ ಕೂಡ ಜಗತ್ಪ್ರಸಿದ್ಧ. ಈ ಬಾರಿ ದಾಖಲೆ ಪ್ರಮಾಣದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸರಿಸುಮಾರು 25 ಲಕ್ಷ ಜೋಳದ ರೊಟ್ಟಿ, 20 ಲಕ್ಷ ಮೈಸೂರು ಪಾಕ್, 500 ಕ್ವಿಂಟಾಲ್ ಮಾದಲಿ ಹಾಗೂ ಹತ್ತಾರು ಬಗೆಯ ಪಲ್ಯಗಳನ್ನ ಖುದ್ಧು ಭಕ್ತರೇ ವ್ಯವಸ್ಥೆ ಮಾಡಿದ್ದರು.

ಸಮಾಜಮುಖಿ ಕಳಕಳಿಯ ಗವಿಮಠದ ಜಾತ್ರೆ ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲ, ಪ್ರತಿ ವರ್ಷದಂತೆ ಈ ವರ್ಷವೂ ಸಾಮಾಜಿಕ ಕಳಕಳಿಯ ಸಂದೇಶ ಸಾರಿದೆ. ‘ಪರಿಸರ ಸಂರಕ್ಷಣೆ ಮತ್ತು ಜಲ ಜಾಗೃತಿ’ಯ ಘೋಷಣೆಗಳೊಂದಿಗೆ ಸಾಗಿದ ಈ ಜಾತ್ರೆ, ಆಧುನಿಕ ಕಾಲದಲ್ಲೂ ಸಂಪ್ರದಾಯ ಮತ್ತು ಸಮಾಜಸೇವೆಯ ಸಂಕೇತವಾಗಿದೆ.

ಜಿಲ್ಲಾಡಳಿತ ಹಾಗೂ ಮಠದ ಸ್ವಯಂಸೇವಕರು ಶಿಸ್ತಿನ ವ್ಯವಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡರು. ಅಜ್ಜನ ಪಾದಸ್ಪರ್ಶ ಮಾಡಿ, ಮಹಾಪ್ರಸಾದ ಸ್ವೀಕರಿಸಿ ಭಕ್ತರು ಪುನೀತರಾದರು.

ಗವಿಸಿದ್ದೇಶ್ವರ ಜಾತ್ರೆ ಜನಸಂಖ್ಯೆ, ಭಕ್ತಿ ಮತ್ತು ದಾಸೋಹದ ವಿಚಾರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಗವಿಸಿದ್ದಪ್ಪನ ಆಶೀರ್ವಾದ ನಾಡಿನ ಜನತೆಯ ಮೇಲೆ ಸದಾ ಇರಲಿ ಎಂಬ ಹಾರೈಕೆಯೊಂದಿಗೆ ಈ ಬಾರಿಯ ಮಹೋತ್ಸವ ಸಂಪನ್ನಗೊಂಡಿದೆ.