
ಹಳೇ ಮೈಸೂರು ಭಾಗದ ಜೀವನಾಡಿ ಕನ್ನಂಬಾಡಿ ಈ ಬಾರಿ ವಾಡಿಕೆಗೂ ಮುನ್ನವೇ ಭರ್ತಿಯಾಗಿದೆ. 93 ವರ್ಷದಲ್ಲೇ ಮೊದಲ ಬಾರಿಗೆ ಜೂನ್ನಲ್ಲಿ ಕೆಆರ್‌ಎಸ್ ಒಡಲು ಸಂಪೂರ್ಣ ಭರ್ತಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ಮಾತೆಗೆ ಬಾಗಿನ ಸಮರ್ಪಣೆ ಮಾಡಿದರು. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯಯವರು ದಾಖಲೆ ನಿರ್ಮಿಸಿದ್ದಾರೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ ಇದೇ ಮೊದಲ ಬಾರಿಗೆ ಜೂನ್ ತಿಂಗಳಲ್ಲೇ ಭರ್ತಿಯಾಗಿದೆ. ಸಾಮಾನ್ಯವಾಗಿ ಕೆಆರ್‌ಎಸ್ ಡ್ಯಾಂ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಭರ್ತಿಯಾಗುತ್ತದೆ. ಆ ನಂತರ ಮುಖ್ಯಮಂತ್ರಿಗಳಿಂದ ಬಾಗಿನ ಅರ್ಪಿಸಲಾಗುತ್ತದೆ. ಆದರೆ, ಈ ವರ್ಷ ಜೂನ್ ಕೊನೆಯ ವಾರದಲ್ಲೇ ಡ್ಯಾಂ ಭರ್ತಿಯಾಗಿದೆ.

1979 ರಿಂದ ಕಾವೇರಿಗೆ ಬಾಗಿನ ಅರ್ಪಿಸುವ ಪದ್ಧತಿ ಆರಂಭವಾಗಿದೆ. ಮೊದಲ ಬಾರಿಗೆ ಡಿ. ದೇವರಾಜ ಅರಸ್ ಬಾಗಿನ ಅರ್ಪಿಸುವ ಮೂಲಕ ಆ ಪದ್ಧತಿಗೆ ನಾಂದಿ ಹಾಡಿದ್ದರು. ಅಲ್ಲಿಂದ ಇಲ್ಲಿಯವರೆಗೂ ಯಾವೊಬ್ಬ ಮುಖ್ಯಮಂತ್ರಿಗೂ ಜೂನ್ನಲ್ಲಿ ಬಾಗಿನ ಅರ್ಪಿಸುವ ಅವಕಾಶ ಸಿಕ್ಕಿಲ್ಲ.

ಕೆಆರ್‌ಎಸ್ ಜಲಾಶಯ 93 ವರ್ಷದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಜೂನ್ನಲ್ಲೇ ಸಂಪೂರ್ಣ ಭರ್ತಿಯಾಗಿ ಹೊಸ ದಾಖಲೆ ಬರೆದಿದೆ. ಜೂನ್ ತಿಂಗಳಿನಲ್ಲಿಯೇ ಬಾಗಿನ ಅರ್ಪಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆ ನಿರ್ಮಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈಗಾಗಲೇ 2013, 2014, 2024 ಈ ಮೂರು ವರ್ಷ ಕಾವೇರಿ ನದಿಗೆ ಬಾಗಿನ ಅರ್ಪಿಸಿ, ಪೂಜೆ ಸಲ್ಲಿಸಿದ್ದರು.

ಕನ್ನಂಬಾಡಿ ಅಣೆಕಟ್ಟು ಮಂಡ್ಯ ಮಾತ್ರವಲ್ಲ ಹಳೇ ಮೈಸೂರು ಭಾಗದ ಜನರ ಜೀವನಾಡಿಯಾಗಿದೆ. ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ, ವಿಶ್ವೇಶ್ವರಯ್ಯನವರ ತಂತ್ರಜ್ಞಾನದ ಫಲವಾಗಿ ಕೆಆರ್‌ಎಸ್ ನಿರ್ಮಾಣಕೊಂಡು ಕೋಟ್ಯಾಂತರ ಜನರಿಗೆ ಜೀವ ಜಲ ಒದಗಿಸುತ್ತಿದೆ.

ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವರು, ಶಾಸಕರೊಂದಿಗೆ ಮೈಸೂರಿನಿಂದ ಬಸ್ನಲ್ಲಿ ಕೆಆರ್ಎಸ್ಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ, ಕೆಆರ್‌ಎಸ್ ನಿರ್ಮಾತೃಗಳಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.

ಬಳಿಕ ಡ್ಯಾಂ ಅರ್ಧ ಭಾಗದವೆಗೂ ಎಲೆಕ್ಟ್ರಾನಿಕ್ ವಾಹನದಲ್ಲಿ ಆಗಮಿಸಿ ನಂತರ ನಡೆದುಕೊಂಡು ಬಂದು ಜಲಾಶಯದ ಮನಮೋಹಕ ದೃಶ್ಯ ಕಣ್ತುಂಬಿಕೊಂಡರು. ಇದಾದ ಬಳಿಕ ಖ್ಯಾತ ವೈದಿಕ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಬಾಗಿನ ಸರ್ಪಿಸಿ ನಾಡಿನ ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಡಿ.ಕೆ.ಶಿವಕುಮಾರ್, ಸಚಿವ ಚಲುವರಾಯಸ್ವಾಮಿ ಸೇರಿದಂತೆ ಜೊತೆಗಿದ್ದ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ತಾಯಿ ಕಾವೇರಿ ಮಾತೆಗೆ ಬಾಗಿನ ಸಲ್ಲಿಸಿದರು. ನಂತರ ಕಾವೇರಿ ಮಾತೆ ಪ್ರತಿಮೆಗೂ ಪೂಜೆ ಸಲ್ಲಿಸಿದರು.

ವೇದಿಕೆಯ ಎಲ್ಇಡಿ ಪರದೆ ಮೇಲೆ ರಾಜ್ಯ ಸರ್ಕಾರದ ಉದ್ದೇಶಿತ ಕಾವೇರಿ ಆರತಿಯ ನೀಲಿ ನಕ್ಷೆಯನ್ನ ಪ್ರದರ್ಶನ ಮಾಡಲಾಯಿತು. ಆ ಮೂಲಕ ಯಾರು ಎಷ್ಟೇ ವಿರೋಧ ಮಾಡಿದರೂ ಕಾವೇರಿ ಆರತಿ ಮಾಡೇ ಮಾಡುತ್ತೇವೆ ಎಂಬ ಸಂದೇಶ ಸಾರಿದರು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಭಾಷಣದಲ್ಲೂ ಈ ಬಗ್ಗೆ ಪ್ರಸ್ತಾಪ ಮಾಡಿ, KRS ಜಲಾಶಯಕ್ಕೆ ಅತೀ ಹೆಚ್ಚು ಪ್ರವಾಸಿಗರು ಬರುತ್ತಾರೆ. ಮತ್ತಷ್ಟು ಆಕರ್ಷಣೀಯ ಪ್ರವಾಸಿತಾಣ ಮಾಡಲು ನಿರ್ಧಾರ ಮಾಡಿದ್ದೇವೆ. ಬೃಂದಾವನ ಗಾರ್ಡನ್ ಉನ್ನತೀಕರಣದಿಂದ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಯಾಗುತ್ತೆ. ಪ್ರಯತ್ನ ವಿಫಲ ಆಗಬಹುದು ಆದರೆ, ಪ್ರಾರ್ಥನೆ ವಿಫಲ ಆಗಲು ಸಾಧ್ಯವಿಲ್ಲ. ಕೈ ಮುಗಿದು ಕೇಳುತ್ತೇನೆ ಕಾವೇರಿ ಆರತಿಗೆ ವಿರೋಧ ಮಾಡಬೇಡಿ ಎಂದು ಮನವಿ ಮಾಡಿದರು.

ಒಟ್ಟಿನಲ್ಲಿ ಕನ್ನಡ ಬಾವುಟ, ಹಸಿರು ತೋರಣ ಹಾಗೂ ವಿವಿಧ ಪುಷ್ಪಗಳಿಂದ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದ ಕನ್ನಂಬಾಡಿ ಆಣೆಕಟ್ಟು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಮತ್ತೊಂದೆಡೆ ಕಾವೇರಿಯನ್ನೇ ಅವಲಂಬಿಸಿರುವ ಅನ್ನದಾತರ ಸಂಭ್ರಮಕ್ಕೂ ಸಾಕ್ಷಿಯಾಯಿತು.
Published On - 5:45 pm, Mon, 30 June 25