
51ಟಿಎಂಸಿ ಸಾಮರ್ಥ್ಯದ ಹಿಡಕಲ್ ಜಲಾಶಯದಿಂದ 47,800 ಕ್ಯೂಸೆಕ್ ನಷ್ಟು ನೀರು ಹೊರಬಿಡಲಾಗುತ್ತಿದೆ. ಗೋಕಾಕ್, ಮೂಡಲಗಿ ತಾಲೂಕಿನ ಕೆಲ ಗ್ರಾಮಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ.

ಇತ್ತ ಬೆಳಗಾವಿಯ ನವಿಲುತೀರ್ಥ ಡ್ಯಾಂ ಭರ್ತಿಯಾಗಿದ್ದು, ಮಲಪ್ರಭ ನದಿಗೆ 13 ಸಾವಿರ ಕ್ಯೂಸೆಕ್ನಷ್ಟು ನೀರು ಬಿಡಲಾಗಿದೆ. ಮುನವಳ್ಳಿ ಸಂಪರ್ಕ ಸೇತುವೆ ಮುಳುಗಡೆಯಾಗಿದ್ದು, ಜನ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.

ಬೆಳಗಾವಿಯಲ್ಲೂ ಮಳೆಗೆ ಭತ್ತದ ಬೆಳೆ ಕೊಚ್ಚಿ ಹೋಗಿದೆ. ಯಳ್ಳೂರ, ಶಹಾಪುರ, ವಡಗಾವಿಯಲ್ಲಿ ನಾಲೆ ನೀರು ನುಗ್ಗಿ ಎಕರೆಗಟ್ಟಲೆ ಜಮೀನು ಜಲಾವೃತಗೊಂಡಿದೆ. ನಾಟಿ ಮಾಡಿರುವ ಭತ್ತ ಕಳೆದುಕೊಳ್ಳುವ ಆತಂಕ ಎದುರಾಗಿದೆ.

ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಕೃಷ್ಣೆಯ ಒಡಲು ಸೇರಿದೆ. ಮತ್ತೊಂದೆಡೆ ರಾಯಚೂರು ನಗರದಲ್ಲಿ ರಸ್ತೆಗಳಲ್ಲಿ ನೀರು ನಿಂತು ಜನ ಪರದಾಡಿದರು.

ಕೊಪ್ಪಳದ ತುಂಗಭದ್ರಾ ಜಲಾಶಯದ 26 ಕ್ರೆಸ್ಟ್ ಗೇಟ್ಗಳ ಮೂಲಕ 1.20 ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗಿದೆ. ಇದರಿಂದ ಆನೆಗೊಂದಿ ನವವೃಂದಾವನ ಸಂಪರ್ಕ ಕಡಿತಗೊಂಡು, ಶ್ರೀಕೃಷ್ಣ ದೇವರಾಯ ಸಮಾಧಿ ಸಾಲು ಮಂಟಪ ಮುಳುಗಡೆ ಹಂತಕ್ಕೆ ತಲುಪಿದೆ. ಇನ್ನು ಡ್ಯಾಂನ ಆರು ಗೇಟ್ಗಳು ಜಾಮ್ ಆಗಿದ್ದು, ಮತ್ತೆ ತಲೆ ಬಿಸಿ ಹೆಚ್ಚಾಗಿದೆ. ಕಳೆದ ವರ್ಷ 19 ನೇ ಗೇಟ್ ಕೊಚ್ಚಿ ಹೋಗಿ ಆತಂಕ ಹುಟ್ಟಿಸಿತ್ತು. ಈ ಬಾರಿ 6 ಗೇಟ್ಗಳು ಭೀತಿ ಹುಟ್ಟಿಸಿವೆ.

ಯಾದಗಿರಿಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಡ್ಯಾಂನಿಂದ ಕೃಷ್ಣಾ ನದಿಗೆ 1 ಲಕ್ಷ 60 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ.. ರಾಯಚೂರಿನ ಲಿಂಗಸೂಗೂರು ತಾಲೂಕಿನ ಶೀಲಹಳ್ಳಿ-ಹಂಚಿನಾಳ ಗ್ರಾಮಗಳ ನಡುವಿನ ಸಂಪರ್ಕ ಕಡಿತಗೊಂಡಿದ್ದು, ನದಿ ತೀರದ ಜನರು ಎಚ್ಚರದಿಂದ ಇರಲು ಜಿಲ್ಲಾಡಳಿತ ಸೂಚನೆ ಕೊಟ್ಟಿದೆ. ಯಾದಗಿರಿಯಲ್ಲಿ ಮಳೆ ಹೊಡೆತಕ್ಕೆ ನೂರಾರು ಎಕರೆ ಬೆಳೆ ನಾಶವಾಗಿದೆ.

ಹುಬ್ಬಳ್ಳಿ-ಧಾರವಾಡ ಜಿಲ್ಲೆಯಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕಟಾವಿಗೆ ಬಂದಿದ್ದ ಹೆಸರು, ಉದ್ದಿನ ಬೇಳೆ ಜಲಾವೃತಗೊಂಡಿದೆ. ಹುಬ್ಬಳ್ಳಿ, ಕುಂದಗೋಳ ತಾಲೂಕಿನಲ್ಲಿ ಈರುಳ್ಳಿ ಬುಡಮೇಲಾಗಿದೆ. ಬೀದರ್ ಜಿಲ್ಲೆಯಲ್ಲೂ ಕಟಾವಿಗೆ ಬಂದಿದ್ದ ಹೆಸರು ಬೆಳೆ ಜಲಾವೃತಗೊಂಡಿದೆ. ಔರಾದ್ ತಾಲೂಕಿನ ಬಾಚಪಳ್ಳಿಯ ನೂರಾರು ಎಕರೆ ಹೆಸರು ಬೆಳೆ ಹೊಲದಲ್ಲೇ ಮೊಳಕೆ ಯೊಡೀತಿದೆ.

ಮಳೆ ಕಾರಣ ಇಂದು ಹಾವೇರಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜತೆಗೆ ಯಾದಗಿರಿ ಜಿಲ್ಲೆಯ ಶಾಲೆ ಹಾಗೂ ಅಂಗನವಾಡಿಗಳಿಗೆ, ಧಾರವಾಡದ ಶಾಲಾ-ಕಾಲೇಜುಗಳಿಗೆ, ಬೆಳಗಾವಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಇವತ್ತು ರಜೆ ಘೋಷಿಸಲಾಗಿದೆ.
Published On - 7:21 am, Wed, 20 August 25