ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ ಹೊಸದಾಗಿ ನಿರ್ಮಿಸಲಾದ ಕೆ.ಆರ್.ಪುರ-ಬೈಯಪ್ಪನಹಳ್ಳಿ ನಡುವಿನ ನಮ್ಮ ಮೆಟ್ರೋ ಮಾರ್ಗದ ಸುರಕ್ಷತಾ ಪರಿಶೀಲನೆ ಇಂದು ಯಶಸ್ವಿಯಾಗಿ ನಡೆದಿದೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಬೆಂಗಳೂರು ಮೆಟ್ರೋ ರೈಲು ನಿಗಮ, ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ ತಂಡ ನಡೆಸಿದ ಬೈಯಪ್ಪನಹಳ್ಳಿಯಿಂದ ಕೃಷ್ಣರಾಜಪುರ ಮೆಟ್ರೋ ನಿಲ್ದಾಣಗಳ ನಡುವೆ ಹೊಸದಾಗಿ ನಿರ್ಮಿಸಲಾದ ಮಾರ್ಗದ ಶಾಸನಬದ್ಧ ಸುರಕ್ಷತಾ ಪರಿಶೀಲನೆಯು ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ತಿಳಿಸಿದೆ.
ಸುರಕ್ಷತಾ ತಪಾಸಣೆ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಇಂದು ಇಡೀ ದಿನ ಕೃಷ್ಣರಾಜಪುರ ಮತ್ತು ಗರುಡಾಚಾರ್‌ಪಾಳ್ಯದವರೆಗಿನ ಮೆಟ್ರೋ ರೈಲ್ವೆ ಸಂಚಾರವನ್ನು ಬಿಎಂಆರ್‌ಸಿಎಲ್ ರದ್ದುಪಡಿಸಿತ್ತು.
ಸದ್ಯ ಹೊಸ ವಿಸ್ತರಿತ ಮಾರ್ಗವಾದ ನಮ್ಮ ಮೆಟ್ರೋದ ಕೆ.ಆರ್.ಪುರ-ಬೈಯಪ್ಪನಹಳ್ಳಿ ನಡುವೆ ಅಳವಡಿಸಲಾಗಿರುವ ಮೆಟ್ರೋ ರೈಲು ಮಾರ್ಗದ ಸುರಕ್ಷತಾ ತಪಾಸಣೆ ಯಶಸ್ವಿಯಾಗಿದೆ.
ಇದು 2 ಕಿ.ಮೀ. ಮಾರ್ಗವಾಗಿದ್ದು, ಇದಕ್ಕೆ ಮೆಟ್ರೋ ಸುರಕ್ಷತಾ ಆಯುಕ್ತರು ತಪಾಸಣೆ ಬಳಿಕ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಕೆಂಗೇರಿಯಿಂದ ವೈಟ್‌ಫೀಲ್ಡ್‌ವರೆಗೆ ತಡೆರಹಿತ ಸಂಚಾರ ನಡೆಸಬಹುದಾಗಿದೆ. ಇದರಿಂದ ಬೆಂಗಳೂರಿನ ಐಟಿ ಹಬ್ ಆಗಿರುವ ವೈಟ್‌ಫೀಲ್ಡ್‌ನ ಸಾವಿರಾರು ಟೆಕ್ಕಿಗಳಿಗೆ ಇದು ನೆರವಾಗಲಿದೆ.