
ರೇಷ್ಮೆ ಸೀರೆ ಉಟ್ಟು ಲಂಗ ದಾವಣಿ ತೊಟ್ಟು ಮಿರ ಮಿರ ಮಿಂಚುತ್ತಿರುವ ಮಹಿಳೆಯರು. ಇತ್ತ ನಾವೇನು ಕಡಿಮೆ ಇಲ್ಲ ಎಂಬಂತೆ ಸಾಂಪ್ರದಾಯಿಕ ಉಡುಪು ತೊಟ್ಟು ಅತ್ತಿಂದಿತ್ತ ಗುಂಪು ಕಟ್ಟಿಕೊಂಡು ಓಡಾಡುತ್ತಿರುವ ಪಡ್ಡೆ ಹುಡುಗರು. ಸಾಗರೋಪಾದಿಯಲ್ಲಿ ಹರಿದು ಬರುತ್ತಿರುವ ಭಕ್ತಗಣ. ಸಂಚಾರ ದಟ್ಟಣೆಯಾಗದಂತೆ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಿರುವ ಖಾಕಿ ಪಡೆ. ಈ ಎಲ್ಲಾ ಜಗಮಗಿಸುವ ದೃಶ್ಯ ಕಣ್ಣಿಗೆ ರಾಚಿದ್ದು ಚಾಮರಾಜನಗರ ತಾಲೂಕಿನ ಸಂತೆಮರಳ್ಳಿ ಗ್ರಾಮದಲ್ಲಿ.

ಹೌದು ನಿನ್ನೆ(ಜು.17) ಭೀಮನ ಅಮಾವಾಸ್ಯೆ ಪ್ರಯುಕ್ತ ಮಾದಪ್ಪನ ದರ್ಶನಕ್ಕೆ ಭಕ್ತರ ದಂಡೆ ಹರಿದು ಬಂದಿತ್ತು. ಭೀಮನ ಅಮಾವಾಸ್ಯೆಯಾದ ಕಾರಣ ಮಾದಪ್ಪನ ದರ್ಶನ ಪಡೆದ್ರೆ ಒಳಿತಾಗುತ್ತೆಂಬ ಪ್ರತೀತಿ ಇಲ್ಲಿದೆ.

ಹಾಗಾಗಿ ರಾಜ್ಯದ ವಿವಿಧೆಡೆಯಿಂದ ಜನರು ಆಗಮಿಸಿ ಮಾದಪ್ಪನ ದರ್ಶನ ಪಡೆದು ಪುನೀತರಾದ್ರು. ಪ್ರತಿ ವರ್ಷ ಸಂತೆಮರಳ್ಳಿ ಗ್ರಾಮದಲ್ಲಿ ವಿಶೇಷ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಅದೇ ರೀತಿ ಈ ಬಾರಿಯು ಜಾತ್ರೆ ಮಹೋತ್ಸವವನ್ನ ಆಯೋಜಿಸಲಾಗಿತ್ತು. ಈ ಜಾತ್ರೆಗೆ ಸಾಂಪ್ರದಾಯಿಕ ಉಡುಗೆ ತೊಟ್ಟ ಯುವಕ ಯುವತಿಯರು ಜಾತ್ರೆಯಲ್ಲಿ ಭಾಗಿಯಾಗಿ ಸಂತಸ ಪಟ್ಟರು.

ಇನ್ನು ಪುರಾಣದ ಪ್ರಕಾರ ಈ ಹಿಂದೆ ಮಾದೇಶ್ವರರು ಬಿಕ್ಷೆ ಬೇಡುತ್ತ ಬಂದು ಇಲ್ಲಿ ಐಕ್ಯರಾಗಿದ್ದಾರಂತೆ ಹಾಗಾಗಿ ಆಗಿನಿಂದಲು ಇಲ್ಲಿ ಭೀಮನ ಅಮವಾಸ್ಯೆಯಂದು ವಿಶೇಷ ಜಾತ್ರಾಮಹೋತ್ಸವ ನಡೆಯುತ್ತಿದೆ.

ಕೇವಲ ಸಂತೆಮರಳ್ಳಿ ಅಷ್ಟೇ ಅಲ್ಲದೆ ಮಲೆ ಮಹದೇಶ್ವರ ಬೆಟ್ಟದಲ್ಲೂ ಸಹ ಭಕ್ತರ ದಂಡು ಆಗಮಿಸಿ ಮಾದಪ್ಪನ ದರ್ಶನ ಪಡೆದ್ರು.

ರಾಜ್ಯದಲ್ಲಿ ಶಕ್ತಿಯೋಜನೆ ಜಾರಿಯಾದ ಹಿನ್ನಲೆ ಮಹಿಳಾ ಭಕ್ತರ ಸಂಖ್ಯೆಯಲ್ಲಿ ದಿಢೀರ್ ಏರಿಕೆ ಕಂಡಿದೆ. ಮಾದಪ್ಪನ ದರ್ಶನಕ್ಕಾಗಿ ಬಂದ ಭಕ್ತರಿಗೆ ವಿಶೇಷವಾಗಿ ಪ್ರಸಾದದ ವ್ಯವಸ್ಥೆ ಸಹ ಮಾಡಲಾಗಿತ್ತು. ಪಾಯಸ, ಹುಳಿ, ಅನ್ನ ಸಾಂಬಾರ್ ಹಾಗೂ ಮಜ್ಜಿಗೆಯನ್ನ ವಿತರಿಸಲಾಯ್ತು.

ಅದೇನೆ ಹೇಳಿ ಭೀಮನ ಅಮವಾಸೆಯನ್ನ ಚಾಮರಾಜನಗರದಲ್ಲಿ ವಿಶೇಷ ಹಾಗೂ ವಿಭಿನ್ನವಾಗಿ ಆಚರಿಸಲಾಯ್ತು, ಉಘೇ ಮಾದೇಶ ಎಂಬ ಘೋಷವಾಕ್ಯದಿಂದ ಮಾದಪ್ಪನ ದರ್ಶನ ಪಡೆದ ಲಕ್ಷಾಂತರ ಮಂದಿ ಪುನೀತರಾದರು.