ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ (ನವೆಂಬರ್ 25) ಬೆಂಗಳೂರಿನಲ್ಲಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)ಗೆ ಭೇಟಿ ನೀಡಿ ಉತ್ಪಾದನಾ ಘಟಕದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ತೇಜಸ್ ಯುದ್ಧ ವಿಮಾನದಲ್ಲಿ ಪ್ರಧಾನಿ ಮೋದಿಯವರು ಸುಮಾರು 45 ನಿಮಿಷಗಳ ಕಾಲ ಹಾರಾಟ ನಡೆಸಿದರು.
ಪ್ರಧಾನಿ ಮೋದಿಯವರು ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಚಿತ್ರಗಳನ್ನು ಎಕ್ಸ್ (ಟ್ವಿಟರ್)ನಲ್ಲಿ ಹಂಚಿಕೊಂಡಿದ್ದಾರೆ. "ತೇಜಸ್‌ನಲ್ಲಿನ ವಿಹಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ನಮ್ಮ ದೇಶದ ಸ್ಥಳೀಯ ಉತ್ಪಾದನಾ ಸಾಮರ್ಥ್ಯಗಳಲ್ಲಿನ ನನ್ನ ವಿಶ್ವಾಸ ದ್ವೀಗುಣಗೊಂಡಿದೆ. ನಮ್ಮ ರಾಷ್ಟ್ರದ ಸಾಮರ್ಥ್ಯದ ಬಗ್ಗೆ ನನಗೆ ಹೆಮ್ಮೆ ಅನಿಸುತ್ತಿದೆ" ಎಂದು ಪೋಸ್ಟ್ ಮಾಡಿದ್ದಾರೆ.
ಭಾರತೀಯ ವಾಯುಸೇನೆ, ಡಿಆರ್‌ಡಿಒ ಮತ್ತು ಎಚ್‌ಎಎಲ್‌ನ್ನು ಶ್ಲಾಘಿಸಿದ ಅವರು, ಸ್ವಾವಲಂಬನೆ ಕ್ಷೇತ್ರದಲ್ಲಿ ಭಾರತವು ಜಗತ್ತಿನ ಯಾವ ದೇಶಕ್ಕಿಂತ ಕಡಿಮೆಯಿಲ್ಲ ಎಂದು ಹೇಳಿದರು.
"ನಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದಾಗಿ ನಾವು ಸ್ವಾವಲಂಬನೆಯ ಕ್ಷೇತ್ರದಲ್ಲಿ ವಿಶ್ವದ ಯಾವ ದೇಶಕ್ಕಿಂತ ಕಡಿಮೆಯಿಲ್ಲ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ಭಾರತೀಯ ವಾಯುಪಡೆ, DRDO ಮತ್ತು HAL ಗೆ ಹೃತ್ಪೂರ್ವಕ ಅಭಿನಂದನೆ ತಿಳಿಸಿದರು.
ಹಲವಾರು ರಾಷ್ಟ್ರಗಳು ತೇಜಸ್ ಖರೀದಿಸಲು ತೀವ್ರ ಆಸಕ್ತಿ ವ್ಯಕ್ತಪಡಿಸಿವೆ. ಇದೇ ವರ್ಷ ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದ ವೇಳೆ GE ಏರೋಸ್ಪೇಸ್ ಮತ್ತು Mk-II ತೇಜಸ್ ಎಂಜಿನ್ ಉತ್ಪಾದನೆಗೆ ಒಪ್ಪಂದ ಮಾಡಿಕೊಂಡಿದ್ದರು. ಇದನ್ನು ಭಾರತದಲ್ಲಿ ಉತ್ಪಾದಿಸಲು ಹಸಿರು ನಿಶಾನೆ ಸಿಕ್ಕಿದೆ.
ರಕ್ಷಣಾ ವಲಯದಲ್ಲಿ ಸ್ವದೇಶಿ ಉತ್ಪನ್ನಗಳಿಗೆ ಪ್ರಧಾನಿ ಮೋದಿ ಒತ್ತು ನೀಡುತ್ತಿದ್ದಾರೆ. ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಹೆಚ್ಎಎಲ್ ಟ್ವೀನ್ ಸೀಟರ್ LCA ತೇಜಸ್ಅನ್ನು ಭಾರತೀಯ ವಾಯುಪಡೆಗೆ ಹಸ್ತಾಂತರಿಸಿತು.
18 ಟ್ವೀನ್ ಸೀಟರ್ LCA ವಿಮಾನಗಳನ್ನು ಖರೀದಿಸಲು ಭಾರತೀಯ ವಾಯುಪಡೆ ಹೆಚ್ಎಎಲ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಹೆಚ್ಎಎಲ್ ಮುಂದಿನ ವರ್ಷ ಎಂಟು ಯುದ್ಧ ವಿಮಾನಗಳನ್ನು ವಾಯುಪಡೆಗೆ ನೀಡಲಿದೆ. ಮತ್ತು ಉಳಿದವುಗಳನ್ನು 2026-27ರ ವೇಳೆಗೆ ನೀಡಲಿದೆ.
ವಿಧಾನಸಭೆ ಚುನಾವಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಕರ್ನಾಟಕ್ಕೆ ಆಗಮಿಸಿದರು.
Published On - 1:41 pm, Sat, 25 November 23