Kannada News Photo gallery Navaratri celebration of Gujaratis who have made their home in Karnataka, Dandiya dance brought merriment, Kolar News
ಕರ್ನಾಟಕದಲ್ಲಿ ಮನೆಮಾಡಿದ ಗುಜರಾತಿಗಳ ನವರಾತ್ರಿ ಸಂಭ್ರಮ! ಮೆರಗು ತಂದ ದಾಂಡಿಯಾ ನೃತ್ಯ
ಒಂದೊಂದು ಸಮುದಾಯದಲ್ಲಿ ಒಂದೊಂದು ಪದ್ದತಿ ಇದ್ದೇ ಇರುತ್ತದೆ. ದಸರಾ ಹಬ್ಬವನ್ನ ಗುಜರಾತಿನ ಪಟೇಲ್ ಅಥವಾ ಪಾಟೀದಾರ್ ಸಮುದಾಯದವರು ವಿಶಿಷ್ಟವಾಗಿ ಆಚರಣೆ ಮಾಡುತ್ತಾರೆ. ಅದೇ ರೀತಿ ನಮ್ಮ ರಾಜ್ಯದ ವಲಸಿಗ ಪಟೀದಾರ್ ಸಮುದಾಯದವರು ಗಡಿನಾಡು ಕೋಲಾರದಲ್ಲಿ ಒಂಬತ್ತು ದಿನಗಳ ಕಾಲ ಮಾಡುವ ವಿಶೇಷ ಪೂಜಾ, ವಿಧಿ-ವಿಧಾನ ಹಾಗೂ ಮನರಂಜನೆ ಕುರಿತ ಒಂದು ವರದಿ ಇಲ್ಲಿದೆ.
1 / 6
ದುರ್ಗಾದೇವಿಗೆ ಪೂಜೆ ಸಲ್ಲಿಸುತ್ತಿರುವ ಗುಜರಾತಿಗಳು, ನಂತರ ದಾಂಡಿಯಾ ನೃತ್ಯ ಮಾಡುತ್ತಿರುವ ಯುವಕರು, ಯುವತಿಯರು ಹಾಗೂ ಹಿರಿಯರು. ಇದೆಲ್ಲಾ ಕಂಡು ಬಂದಿದ್ದು ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ, ಹೌದು, ಗುಜರಾತಿ ಮೂಲದ ಕುಟುಂಬಗಳು ಹತ್ತಾರು ವರ್ಷಗಳಿಂದ ಇಲ್ಲೇ ನೆಲೆಸಿವೆ. ಅದರಲ್ಲೂ ಗುಜರಾತ್ ಮೂಲದ ಕಚ್ ಕಡವಾ ಪಾಟೀದಾರ್ ಸಮುದಾಯ ಕಳೆದ 43 ವರ್ಷಗಳಿಂದ ಕೋಲಾರದಲ್ಲಿ ನೆಲೆ ಕಂಡುಕೊಂಡಿವೆ. ಹಾಗಾಗಿ ಇಲ್ಲಿ ದಸರಾ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡ್ತಾರೆ.
2 / 6
ದುರ್ಗಾ ಮಾತೆಯ ಒಂಬತ್ತು ಅವತಾರಗಳ ದೇವತೆಗಳನ್ನು ಒಂಬತ್ತು ದಿನಗಳ ಕಾಲ ಶ್ರದ್ದಾ - ಭಕ್ತಿಯಿಂದ ಆಚರಣೆ ಮಾಡುತ್ತಾರೆ. ದಸರಾ ಹಬ್ಬದ ಮೊದಲ ದಿನದಿಂದಲೇ ಗರ್ಬಾ ರಾಸ್ ಮತ್ತು ದಾಂಡಿಯಾ ಡ್ಯಾನ್ಸ್ ಶುರುವಾಗುತ್ತೆ. ಮನೆ ದೇವರ ಫೋಟೋ ಬಳಿಯಿರಿಸಿ ಒಂಬತ್ತು ದಿನಗಳ ಕಾಲ ಪೂಜೆ ಮಾಡುವ ದೀಪವನ್ನು ಪ್ರತಿ ದಿನದ ದಾಂಡಿಯಾ ಡ್ಯಾನ್ಸ್, ಅಂದರೆ ಕೋಲಾಟ ನೃತ್ಯ ಮಾಡುವ ಮೊದಲು ದುರ್ಗಾ ದೇವಿಗೆ ಪೂಜಿಸಿ ಭಜನೆ ಮಾಡಲಾಗುತ್ತದೆ.
3 / 6
ಈ ಒಂಬತ್ತು ದಿನಗಳ ಕಾಲವು ಮನೆಯ ಗೃಹಿಣಿಯರು ಒಂದೊತ್ತು ಉಪವಾಸವನ್ನೂ ಮಾಡುತ್ತಾರೆ. ಒಂಬತ್ತನೆ ದಿನದಂದು ಗರ್ಬಾದ ದೀಪವನ್ನು ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಗುಜರಾತಿನಿಂದ ಕರ್ನಾಟಕಕ್ಕೆ ವಲಸೆ ಬಂದು ತಮ್ಮ ಜೀವನ ಕಟ್ಟಿಕೊಂಡಿರುವ ಪಾಟೀದಾರ್ ಸಮುದಾಯದವರು, ಇಂದಿಗೂ ಇಲ್ಲೇ ಕರ್ನಾಟಕದಲ್ಲೇ ಕನ್ನಡಿಗರಾಗಿ ಬದುಕುತ್ತಾ ತಮ್ಮ ಸಂಪ್ರದಾಯವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬಂದಿದ್ದಾರೆ.
4 / 6
ದಸರಾ ಹಬ್ಬದ ಸಮಯದಲ್ಲಿ ಮಾತ್ರ ಕೋಲಾರ ಜಿಲ್ಲೆಯಲ್ಲಿರುವ ಗುಜರಾತಿ ಕುಟುಂಬಗಳು ಒಂದು ಕಡೆ ಸೇರುತ್ತಾರೆ. ಇಡೀ ಜಿಲ್ಲೆಯಲ್ಲಿನ 100 ಕ್ಕೂ ಹೆಚ್ಚು ಕುಟುಂಬಗಳ ಸುಮಾರು 300 ಕ್ಕೂ ಹೆಚ್ಚು ಜನರು ಬಂಗಾರಪೇಟೆಯಲ್ಲಿನ ಕೋಲಾರ್ ಕಚ್ ಕಡವಾ ಪಟೀದಾರ್ ಸಮಾಜದವರು ಏರ್ಪಾಡು ಮಾಡೋ ಈ ಎಲ್ಲ ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸುತ್ತಾರೆ.
5 / 6
ರಾತ್ರಿ ಎಂಟು ಗಂಟೆಯಿಂದ ಹನ್ನೊಂದು ಗಂಟೆವರೆಗೂ ವಯಸ್ಸು ಮತ್ತು ಲಿಂಗಬೇಧವನ್ನು ಮರೆತು ದಾಂಡ್ಯಾ ನೃತ್ಯ ಮಾಡುತ್ತಾ ದೇವತೆಯ ಸ್ತುತಿ ಮಾಡುತ್ತಾರೆ. ಯುವಕ-ಯುವತಿಯರು ಕೂಡ ದಾಂಡ್ಯಾ ನೃತ್ಯ ಮಾಡಲೆಂದೆ ವಿಶೇವಾಗಿ ಡ್ರೆಸ್ ಮಾಡಿಕೊಂಡು ಅತ್ಯಂತ ಉತ್ಸಾಹದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡುಗುತ್ತಾರೆ. ಈ ಮೂಲಕ ಗುಜರಾತಿಗಳ ತಮ್ಮ ವಲಸೆ ಬಂದಿದ್ದರೂ ಕೂಡ ತಮ್ಮ ಸಂಪ್ರದಾಯ ಪದ್ದತಿ ಬಿಡದೆ ಆಚರಣೆ ಮಾಡುತ್ತಾ ಬಂದಿದ್ದಾರೆ.
6 / 6
ಒಟ್ಟಾರೆ ವ್ಯವಹಾರಿಕವಾಗಿ ಇಲ್ಲಿನ ಜನರನ್ನ ಮತ್ತು ಬದುಕನ್ನು ಆಶ್ರಯಿಸಿದರೂ ಕೂಡ ತಮ್ಮ ಮೂಲ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಇಂದಿಗೂ ಆಚರಿಸ್ತಾಯಿರೋ ಗುಜರಾತಿಗಳ ಪದ್ದತಿಯು ವಿಶೇಷ ಹಾಗೂ ವಿಭಿನ್ನ ಅದರಲ್ಲೂ ಇದು ಈ ಭಾಗದ ಜನರಿಗಂತೂ ನೋಡುವುದಕ್ಕೂ ಖುಷಿ ಎನ್ನುವುದರಲ್ಲಿ ಎರಡು ಮಾತಿಲ್ಲ.