
ಸಂಪಿಗೆಯಂತ ಮುಂಗುರುಳು. ಸೇವಂತಿಯಂತಹ ಕಣ್ಣುಗಳು. ಅಂದಕ್ಕೂ ಅಸೂಹೆ ಹುಟ್ಟಿಸುವಂತಿರುವ ಈ ಚೆಲುವೆ ಹೆಸರು ಲತಾ. ಸಾವಿರಾರು ಕನಸು ಹೊತ್ತು, ಹತ್ತಾರು ಆಸೆಗಳೊಂದಿಗೆ ಈಕೆ ಹೊಸ ಬದುಕಿಗೆ ಕಾಲಿಟ್ಟಿದ್ಳು. ಜತೆಯಾಗಿ ಹೆಜ್ಜೆ ಹಾಕಿದ್ಳು. ಹೊಸ ಬಾಳಿಗೆ ಮುನ್ನುಡಿ ಬರೆದಿದ್ಳು. ಆದ್ರೆ, ದಾಂಪತ್ಯಕ್ಕೆ ಕಾಲಿಟ್ಟ ಒಂದೇ ತಿಂಗಳಿಗೆ ಈಕೆಯ ಕನಸುಗಳಿಗೆ ಕೊಳ್ಳಿಬಿದ್ದಿದೆ. ಈ ಸುಂದರಿ ಬದುಕು ದುರಂತ ಅಂತ್ಯ ಕಂಡಿದೆ.

ಶಿವಮೊಗ್ಗದ ಭದ್ರಾವತಿಯ ಡಿ.ಬಿ.ಹಳ್ಳಿಯ ಈ ಲತಾಳನ್ನ ಶಿಕಾರಿಪುರದ ಈ ಗುರುರಾಜ್ ಜತೆ ಕಳೆದ ಏಪ್ರಿಲ್ನಲ್ಲಿ ಮದ್ವೆ ಮಾಡಿದ್ರು. ಭದ್ರಾ ಡ್ಯಾಮ್ನ ಕೆಪಿಸಿಎಲ್ನಲ್ಲಿ ಸೇವೆ ಸಲ್ಲಿಸ್ತಿದ್ದ ಗುರುರಾಜ್ಗೆ, 60ಲಕ್ಷಕ್ಕೂ ಹೆಚ್ಚು ವರದಕ್ಷಿಣೆ ಕೊಟ್ಟು ಧಾರೆ ಎರೆದುಕೊಟ್ಟಿದ್ರು. ಆದ್ರೆ, ಮದ್ವೆಯಾದ ಒಂದೆ ತಿಂಗಳಲ್ಲಿ ಪತಿ, ಅತ್ತೆ, ನಾದಿನಿ ಮತ್ತು ನಾದಿನಿ ಭಾವ, ಮತ್ತಷ್ಟು ವರದಕ್ಷಿಣೆಗಾಗಿ ಲತಾಗೆ ಕಿರುಕುಳ ಕೊಟ್ಟಿದ್ದಾರೆ.

ವರದಕ್ಷಿಣೆ ಕಿರುಕುಳ ಮಾತ್ರವಲದಲೇ ಪತಿ ಗುರುರಾಜ್ ಬೇರೊಬ್ಬ ಯುವತಿ ಜತೆಗೆ ಲವ್ವಿಡವ್ವಿ ಆಡುತ್ತಿದ್ದು, ಅಕ್ಕನ ಮಗಳೊಟ್ಟಿಗೂ ಅತಿ ಸಲುಗೆಯಿಂದ ಇದ್ದನಂತೆ. ಇದರಿಂದ ನೊಂದ ಲತಾ ಡೆತ್ ನೋಟ್ ಬರೆದಿಟ್ಟು ಭದ್ರಾವತಿಯ ಹಂಚಿನ ಸಿದ್ದಾಪುರದ ಭದ್ರಾ ಬಲದಂಡೆ ನಾಲೆಗೆ ಹಾರಿದ್ದಾಳೆ.

ಲತಾ ನವೆಂಬರ್ 23ರಂದು ವಾಟ್ಸಾಪ್ನಲ್ಲೇ ಡೆತ್ನೋಟ್ ಬರೆದು ಕುಟುಂಬದವರಿಗೆ ಕಳಿಸಿದ್ದಾಳೆ. ನಂತರ ನಾಲೆ ಸಮೀಪದ ದೇಗುಲ ಬಳಿ ವೇಲ್, ಬಳೆ ಹಾಗೂ ಮೊಬೈಲ್ ಬಿಟ್ಟು ಹೋಗಿದ್ದಾಳೆ. ಬಳಿಕ ನಾಲೆಗೆ ಲತಾ ಹಾರಿ ಪ್ರಾಣಬಿಟ್ಟಿದ್ದಾಳೆ ಎನ್ನಲಾಗುತ್ತಿದೆ. ಸದ್ಯ ಲತಾಗಾಗಿ ಅಗ್ನಿಶಾಮಕ ಸಿಬ್ಬಂದಿ, ಹೊಳೆ ಹೊನ್ನೂರು ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ನೂರೆಂಟು ಕನಸು ಕಟ್ಟಿಕೊಂಡಿದ್ದ ಚೆಲುವೆ ಕಣ್ಮರೆ ಆಗಿದ್ದು, ಆತ್ಮಹತ್ಯೆಗೆ ಶರಣಾಗಿರುವ ಸಂಶಯ ಕಾಡುತ್ತಿದೆ. ಇತ್ತ ಪತಿ ಗುರುರಾಜ್ ಹಾಗೂ ಕುಟುಂಬದವರು ಎಸ್ಕೇಪ್ ಆಗಿದ್ದು, ಆರೋಪಿಗಳ ವಿರುದ್ಧ ಕ್ರಮಕ್ಕೆ ಲತಾ ಕುಟುಂಬದವರು ಆಗ್ರಹಿಸಿದ್ದಾರೆ.

ಭದ್ರಾ ಡ್ಯಾಂನ ಕೆಪಿಸಿಎಲ್ನಲ್ಲಿ ಎಇಇ ಆಗಿ ಗುರುರಾಜ್ ಸೇವೆ ಸಲ್ಲಿಸುತ್ತಿದ್ದರು. ಸರಕಾರಿ ಅಧಿಕಾರಿ ಎನ್ನುವ ಕಾರಣಕ್ಕೆ ಭರ್ಜರಿ ವರದಕ್ಷಿಣೆ ಕೊಟ್ಟು ಲತಾ ಪೋಷಕರು ಮಗಳ ಮದುವೆ ಮಾಡಿದ್ದರು. 30 ಗ್ರಾಂ ಚಿನ್ನಾಭರಣ, 10 ಲಕ್ಷ ನಗದು ಸೇರಿ ಸಿಮಾರು 60 ಲಕ್ಷ ರೂ.ಗಳನ್ನ ಖರ್ಚು ಮಾಡಿದ್ದರು.

ಇಷ್ಟೆಲ್ಲಾ ವರದಕ್ಷಣೆ, ವರೋಪಚಾರ ಪಡೆದ್ರೂ ಅವರ ದಾಹ ಕಡಿಮೆ ಆಗಿರಲಿಲ್ಲ. ಮದುವೆ ನಡೆದ ಒಂದೇ ತಿಂಗಳಿಗೆ ಪತಿ ಮನೆಯವರ ಬಣ್ಣ ಲತಾ ಎದುರು ಬಯಲಾಗಿದೆ. ವರದಕ್ಷಿಣೆಗಾಗಿ ಪತಿ ಗುರುರಾಜ್ ಜೊತೆ ಆತನ ಮನೆಯವರೂ ಪೀಡಿಸಿದ್ದಾರೆ.

ಒಂದೇ ಒಂದು ದಿನವೂ ಲತಾರನ್ನು ಚೆನ್ನಾಗಿ ನೋಡಿಕೊಳ್ಳದ ಗುರುರಾಜ್, ಪದೇ ಪದೇ ಕಿರುಕುಳ ನೀಡುತ್ತಿದ್ದ. ಪತ್ನಿ ಮುಂದೆಯೇ ಅಕ್ಕನ ಮಗಳ ಜೊತೆ ಸಲಿಗೆಯಿಂದ ಇರುತ್ತಿದ್ದ. ಅಲ್ಲದೆ ಇನ್ನೊಂದು ಯುವತಿಯ ಜೊತೆಗೂ ಚಾಟಿಂಗ್ ನಡೆಸುತ್ತಿದ್ದ. ಈ ಎಲ್ಲ ವಿಷಯವನ್ನೂ ಲತಾ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ.

ಆಷಾಡಕ್ಕೆಂದು ಭದ್ರಾವತಿ ತಾಲೂಕಿನ ಡಿ.ಬಿ. ಹಳ್ಳಿಯ ತವರು ಮನೆಗೆ ಲತಾ ಬಂದಿದ್ದರು. ಆದ್ರೆ ಆಷಾಡ ಮುಗಿದ್ರೂ ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗಲು ಗುರುರಾಜ್ ಬಂದಿರಲೇ ಇಲ್ಲ. ಈ ಎಲ್ಲ ಘಟನೆಗಳಿಂದಾಗಿ ಲತಾ ಮಾನಸಿಕವಾಗಿ ನೊಂದಿದ್ದರು. ಹೀಗಾಗಿ ತನ್ನ ಸಾವಿಗೆ ಪತಿಯ ಅಕ್ಕಂದಿರಾದ ನಾಗರತ್ನಾ, ರಾಜೇಶ್ವರಿ, ಅತ್ತೆ ಶಾರದಮ್ಮ, ಪತಿಯ ಅಕ್ಕನ ಗಂಡ ಕೃಷ್ಣಪ್ಪ ಹಾಗೂ ಪತಿ ಗುರುರಾಜ್ ಕಾರಣ ಎಂದು ಲತಾ ಡೆತ್ನೋಟ್ನಲ್ಲಿ ಆರೋಪಿಸಿದ್ದಾರೆ.

ಮಗಳ ನಿರ್ಧಾರದಿಂದ ಪೋಷಕರು ಕಂಗಾಲಾಗಿದ್ದು, ನಾಲೆ ಬಳಿ ಗ್ರಾಮಸ್ಥರು ಮತ್ತು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಅರಗಿಣಿಯಂತೆ ಸಾಕಿದ್ದ ಮಗಳು ಮದುವೆಯಾದ ಮೇಲೆ ಸುಖವಾಗಿರುತ್ತಾಳೆಂದು ವಿಶ್ವಾಸದಲ್ಲಿ ತಂದೆ ತಾಯಿಗೆ ಮಗಳ ಸಾವು ಬರಸಿಡಿಲು ಬಡಿದಂತಾಗಿದೆ.

ಮಗಳು ಚೆನ್ನಾಗಿರಬೇಕೆಂದು ಸರ್ಕಾರಿ ನೌಕರಿಯಲ್ಲಿರೋ ವರನೇ ಬೇಕು ಎಂದು ಹುಡುಕಿ ಮದುವೆ ಮಾಡಿಕೊಟ್ಟು ಹೆತ್ತವರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.