
ಭಾರತೀಯ ಸೇನೆಯಿಂದ ಪಾಕಿಸ್ತಾನದ ಲಾಹೋರ್, ಕರಾಚಿ, ಸಿಯೋಲ್ ಕೋಟ್ ಮೇಲೆ ದಾಳಿ ನಡೆಸಲಾಗಿದೆ. ಭಾರತದ ಮೇಲೆ ಪಾಕ್ ದಾಳಿಯನ್ನು ವಿಫಲಗೊಳಿಸಿದ ಬಳಿಕ ಭಾರತೀಯ ಸೇನೆಯಿಂದ ದಾಳಿ ನಡೆಸಲಾಗಿದೆ. ಪಾಕಿಸ್ತಾನ ಭಾರತದ ಚಂಡೀಗಢ, ಆವಂತಿಪೊರ, ಜಲಂಧರ್, ಲೂಧಿಯಾನ, ಅಮೃತಸರ, ಪಠಾಣಕೋಟ್, ಕಪೂರ್ತಲಾ, ನಲ, ಫಲೋಡಿ, ಉತ್ತರಲೈ, ಭುಜ್, ಜಮ್ಮು, ಶ್ರೀನಗರ, ಆಧಂಪುರ, ಭಟಿಂಡಾ ಮೇಲೆ ದಾಳಿಗೆ ಯತ್ನಿಸಿತ್ತು. ನಿನ್ನೆ ರಾತ್ರಿ ಭಾರತದ 15 ನಗರಗಳ ಮೇಲೆ ಪಾಕಿಸ್ತಾನ ದಾಳಿಗೆ ಮುಂದಾಗಿತ್ತು. ಪಾಕಿಸ್ತಾನ ಸೇನೆ ದಾಳಿಯನ್ನು ವಿಫಲಗೊಳಿಸಿರುವ ಭಾರತೀಯ ಸೇನೆ S-400 ಏರ್ಡಿಫೆನ್ಸ್ ಸಿಸ್ಟಮ್ ಮೂಲಕ ಪಾಕ್ ಕ್ಷಿಪಣಿಗಳನ್ನು ಧ್ವಂಸ ಮಾಡಿದೆ. ಪಾಕಿಸ್ತಾನದ ಕ್ಷಿಪಣಿಗಳ ಅವಶೇಷಗಳನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದೆ. ಆಪರೇಷನ್ ಸಿಂಧೂರ್ ಅಡಿಯಲ್ಲಿ ಲಾಹೋರ್‌ನಲ್ಲಿ ಪಾಕಿಸ್ತಾನದ HQ-9 ವಾಯು ರಕ್ಷಣಾ ವ್ಯವಸ್ಥೆಯನ್ನು ಭಾರತ ನಾಶಪಡಿಸಿದೆ.

ಪಾಕಿಸ್ತಾನದ ವಾಯು ರಕ್ಷಣಾ ಮೂಲಸೌಕರ್ಯದ ಮೇಲೆ ಭಾರತ ಇಂದು ನಡೆಸಿದ ದಾಳಿಯಲ್ಲಿ ಒಬ್ಬ ಅಧಿಕಾರಿ ಮತ್ತು ಮೂವರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಸೇನೆಯ ನಿವೃತ್ತ ಯೋಧ ಆದಿಲ್ ರಾಜಾ ಹೇಳಿದ್ದಾರೆ. "ಪಾಕಿಸ್ತಾನದ ವಾಯು ರಕ್ಷಣಾ ಮೂಲಸೌಕರ್ಯದ ಮೇಲೆ ಭಾರತ ನಡೆಸಿದ ಇಂದಿನ ದಾಳಿಯಲ್ಲಿ ಒಬ್ಬ ವಾಯು ರಕ್ಷಣಾ ಅಧಿಕಾರಿ (ಕ್ಯಾಪ್ಟನ್) ಮತ್ತು ಪಾಕಿಸ್ತಾನ ಸೇನೆಯ ಮೂವರು ಸೈನಿಕರು ಹುತಾತ್ಮರಾಗಿದ್ದಾರೆ" ಎಂದು ಆದಿಲ್ ರಾಜಾ ಎಕ್ಸ್‌ನಲ್ಲಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಭಾರತದ ವಿರುದ್ಧ ಚೀನಾದ ಜೆಟ್‌ಗಳನ್ನು ಬಳಸಲಾಗುತ್ತಿದೆ ಎಂಬ ಪಾಕಿಸ್ತಾನದ ಹೇಳಿಕೆಗೆ ಚೀನಾ ಪ್ರತಿಕ್ರಿಯಿಸಿದೆ. ನಮಗೆ ಈ ವಿಷಯದ ಬಗ್ಗೆ ಏನೂ ತಿಳಿದಿಲ್ಲ ಎಂದು ಚೀನಾ ಹೇಳಿದೆ.ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಿತ್ತು. ಆಪರೇಷನ್ ಸಿಂಧೂರ್ ಎಂದು ಹೆಸರಿಸಲಾದ ಈ ದಾಳಿಯು ಹಲವಾರು ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಿತ್ತು. ಭಾರತದ ದಾಳಿಗಳಿಗೆ ಪ್ರತಿಕ್ರಿಯಿಸಲು ತಾನು ಚೀನಾದ ಜೆಟ್‌ಗಳನ್ನು ಬಳಸಿದ್ದೇನೆ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು. ಆದರೆ ಚೀನಾದ ವಿದೇಶಾಂಗ ಸಚಿವಾಲಯವು ಅದಕ್ಕೆ ಪ್ರತಿಕ್ರಿಯಿಸಿದ್ದು, "ಈ ವಿಷಯದ ಬಗ್ಗೆ ನಮಗೆ ತಿಳಿದಿಲ್ಲ" ಎಂದು ಹೇಳಿದೆ.

ಪಾಕಿಸ್ತಾನದ ಮೇಲೆ ಭಾರತ ನಡೆಸಿದ 2ನೇ ದಾಳಿಯ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿ ವಿದೇಶಾಂಗ ಸಚಿವಾಲಯ ಹಾಗೂ ಭಾರತೀಯ ಸೇನೆ ಮಾಹಿತಿ ನೀಡಿದೆ. ಪಾಕಿಸ್ತಾನವು ಸೇನಾ ನೆಲೆಗಳನ್ನು ಗುರಿಯಾಗಿಸಿಕೊಳ್ಳುವುದನ್ನು ನಿಲ್ಲಿಸದಿದ್ದರೆ ಭಾರತವು ಅದಕ್ಕೆ ಸೂಕ್ತ ಉತ್ತರವನ್ನು ನೀಡುತ್ತಲೇ ಇರುತ್ತದೆ ಎಂದು ವಿದೇಶಾಂಗ ಸಚಿವಾಲಯ (MEA) ಇಂದು ಸ್ಪಷ್ಟಪಡಿಸಿದೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ನೇತೃತ್ವದ 'ಆಪರೇಷನ್ ಸಿಂಧೂರ್' ಕುರಿತಾದ MEA ಪತ್ರಿಕಾಗೋಷ್ಠಿಯಲ್ಲಿ ಕರ್ನಲ್ ಸೋಫಿಯಾ ಖುರೇಷಿ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು MEA ವಕ್ತಾರ ರಣಧೀರ್ ಜೈಸ್ವಾಲ್ ಕೂಡ ಭಾಗವಹಿಸಿದ್ದರು.

ಭಾರತದ ತಾಳ್ಮೆಯನ್ನು ಪರೀಕ್ಷಿಸದಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದು, ಪಾಕಿಸ್ತಾನದ ಮೇಲೆ ನಾವು ನಡೆಸಿದ ವೈಮಾನಿಕ ದಾಳಿಯಲ್ಲಿ 100 ಜನ ಮೃತಪಟ್ಟಿದ್ದಾರೆ. ನಮ್ಮನ್ನು ಪ್ರಚೋದಿಸಿದರೆ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲು ದೇಶವು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಆಪರೇಷನ್ ಸಿಂಧೂರ್‌ಗೆ ಪ್ರತಿಕ್ರಿಯೆಯಾಗಿ ಇಸ್ಲಾಮಾಬಾದ್ ಭಾರತದಲ್ಲಿನ 15 ನಗರಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ ನಂತರ ಅವರು ಈ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನದ ಪ್ರಯತ್ನವನ್ನು ವಿಫಲಗೊಳಿಸಿದ ಭಾರತ ಪಾಕಿಸ್ತಾನದ ಹಲವಾರು ಸ್ಥಳಗಳಲ್ಲಿನ ವಾಯು ರಕ್ಷಣಾ ರಾಡಾರ್‌ಗಳನ್ನು ಧ್ವಂಸಗೊಳಿಸಿದೆ. ಭಾರತ ಯಾವಾಗಲೂ ಜವಾಬ್ದಾರಿಯುತ ರಾಷ್ಟ್ರದಂತೆ ಹೆಚ್ಚಿನ ಸಂಯಮದಿಂದ ವರ್ತಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಭಾರತ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಈ ವೇಳೆ ರಾಷ್ಟ್ರೀಯ ಸನ್ನದ್ಧತೆ ಮತ್ತು ವಿವಿಧ ಸಚಿವಾಲಯಗಳ ನಡುವಿನ ಸಮನ್ವಯವನ್ನು ಪರಿಶೀಲಿಸಿದರು. ತುರ್ತು ಪ್ರತಿಕ್ರಿಯೆ, ಸಿದ್ಧತೆ ಮತ್ತು ಆಂತರಿಕ ಸಂವಹನ ಕಾರ್ಯವಿಧಾನಗಳಿಗೆ ಒತ್ತು ನೀಡುವ ಮೂಲಕ ತಮ್ಮ ಸಚಿವಾಲಯಗಳ ಕಾರ್ಯಾಚರಣೆಗಳ ಸಂಪೂರ್ಣ ಮೌಲ್ಯಮಾಪನವನ್ನು ನಡೆಸಲು ಪ್ರಧಾನಿ ಮೋದಿ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.

ಭಾರತದ ವಾಯುದಾಳಿಯಿಂದ ಭಯಭೀತವಾಗಿರುವ ಪಾಕಿಸ್ತಾನ ಎಲ್ಲಾ ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಮಾನಗಳನ್ನು ಬಂದ್ ಮಾಡಿದೆ. ಭಾರತದೊಂದಿಗಿನ ಯುದ್ಧದ ಉಲ್ಬಣದಿಂದಾಗಿ ಎಲ್ಲಾ ವಿಮಾನ ನಿಲ್ದಾಣಗಳನ್ನು ಮುಚ್ಚಿದೆ. ಇಂದು ಪಾಕಿಸ್ತಾನ ವಿಮಾನ ನಿಲ್ದಾಣ ಪ್ರಾಧಿಕಾರ (ಪಿಎಎ) ಕರಾಚಿ, ಲಾಹೋರ್ ಮತ್ತು ಸಿಯಾಲ್‌ಕೋಟ್‌ನಲ್ಲಿರುವ ವಿಮಾನ ನಿಲ್ದಾಣಗಳಲ್ಲಿ ವಿಮಾನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಜಮ್ಮು ವಿಮಾನ ನಿಲ್ದಾಣದ ಮೇಲೆ ಭಾರತ ಪಾಕಿಸ್ತಾನಿ ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಇದರಿಂದ ಉಧಂಪುರದಲ್ಲಿ ಜೋರಾಗಿ ಸ್ಫೋಟಗಳ ಸದ್ದು ಕೇಳಿಬಂದಿತು. ಇಂದು ಮುಂಜಾನೆ ಪಾಕಿಸ್ತಾನದ ಒಳಗೆ ನುಗ್ಗಿದ್ದ ಭಾರತೀಯ ಸೇನೆ ಪಾಕಿಸ್ತಾನದ ಕ್ಷಿಪಣಿಗಳನ್ನು ಧ್ವಂಸ ಮಾಡಿತ್ತು. ಇದರಿಂದ ಮತ್ತೆ ರೊಚ್ಚಿಗೆದ್ದಿರುವ ಪಾಕಿಸ್ತಾನ ಮತ್ತೊಮ್ಮೆ ಭಾರತದ ಮೇಲೆ ದಾಳಿ ನಡೆಸಿದೆ ಎನ್ನಲಾಗುತ್ತಿದೆ. ಇಂದು ಸಂಜೆ ಜಮ್ಮುವಿನಲ್ಲಿ ಇದ್ದಕ್ಕಿದ್ದಂತೆ ವಿದ್ಯುತ್ ಕಡಿತವಾಗಿ ಸಂಪೂರ್ಣ ಕತ್ತಲು ಆವರಿಸಿದೆ. ಇದೇ ವೇಳೆ ಭಾರೀ ಶಬ್ದವೂ ಕೇಳಿದೆ. ತಕ್ಷಣ ಸೈರನ್ಗಳು ಕೂಗಿಕೊಳ್ಳಲಾರಂಭಿಸಿದೆ. ಇದರಿಂದ ಜನರು ಗಾಬರಿಯಾಗಿ ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಈ ವೇಳೆ ಕತ್ತಲು ತುಂಬಿದ ಆಕಾಶದಲ್ಲಿ ದೊಡ್ಡ ಬೆಳಕು ಕಾಣಿಸಿಕೊಂಡಿದ್ದು, ಪಾಕಿಸ್ತಾನದಿಂದ ಡ್ರೋನ್ ದಾಳಿ ನಡೆದಿದ್ದು, ಆ ಡ್ರೋನ್‌ಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
Published On - 9:49 pm, Thu, 8 May 25