
ಮನೆ ಕೆಲಸವನ್ನು ಹೆಣ್ಣೇ ಮಾಡಬೇಕು ಎನ್ನುವುದನ್ನು ಹೆಣ್ಣು ಮಗುವಿನ ತಲೆಯಲ್ಲಿ ತುಂಬಬೇಡಿ. ಮನೆಯ ಕೆಲಸವನ್ನೆಲ್ಲಾ ಕಲಿಸಿಕೊಡುವುದು ತಂದೆ ತಾಯಿಯರ ಕರ್ತವ್ಯ. ಆದರೆ ಹೆಣ್ಣು ಮಕ್ಕಳಿಗೆ ಮಾತ್ರ ಮನೆ ಕೆಲಸ ಸೀಮಿತ ಎನ್ನುವ ನಿಯಮವನ್ನು ಹೇರಬೇಡಿ.

ಒಂದು ವೇಳೆ ಇಬ್ಬರೂ ಮಕ್ಕಳಿದ್ದು, ಒಂದು ಗಂಡು ಮತ್ತೊಂದು ಹೆಣ್ಣಾಗಿದ್ದರೆ, ಇಬ್ಬರೂ ಮಕ್ಕಳನ್ನು ಬೆಳೆಸುವಾಗ ಬೇಧ ಭಾವ ಮಾಡುವುದು ಸರಿಯಲ್ಲ. ಮಕ್ಕಳಲ್ಲಿ ತಪ್ಪು ಯಾರೇ ಮಾಡಿದರೂ ಗಂಡು ಮಗುವನ್ನೇ ವಹಿಸಿಕೊಂಡು ಮಾತನಾಡುವುದರಿಂದ, ಹೆಣ್ಣು ಮಗುವಿನ ಮನಸ್ಸಿನ ಮೇಲೆ ಋಣಾತ್ಮಕ ಪ್ರಭಾವ ಬೀರುವ ಸಾಧ್ಯತೆಯೂ ಅಧಿಕವಾಗಿರುತ್ತದೆ.

ಹೆಣ್ಣು ಮಕ್ಕಳನ್ನು ಬೆಳೆಸುವಾಗ ನಿರ್ಬಂಧಗಳನ್ನು ಹಾಕಬೇಡಿ. ನಿಮ್ಮ ಮಗಳಿಗೆ ಗಂಡು ಮಕ್ಕಳು ಆಡುವ ಕ್ರೀಡೆಯಲ್ಲಿ ಆಸಕ್ತಿಯಿದ್ದರೆ ಅದರಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹವನ್ನು ನೀಡಿ. ಒಂದು ವೇಳೆ ಪೋಷಕರಾದ ನೀವುಗಳು ಈ ಕ್ರೀಡೆಗಳನ್ನೇ ಆಡಬೇಕು ಎಂಬ ವಿಷಯಗಳನ್ನು ಹೇಳುತ್ತಾ ಬಂದರೆ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರುತ್ತದೆ.

ಹೆಣ್ಣು ಮಕ್ಕಳನ್ನು ಮುಕ್ತವಾಗಿ ಧ್ವನಿ ಎತ್ತಿ ಮಾತನಾಡಬಾರದು ಎಂದು ತಲೆಯಲ್ಲಿ ತುಂಬಬೇಡಿ. ಏನಾದರೂ ಹೇಳಬೇಕೆಂದುಕೊಂಡಾಗ ಮಗುವನ್ನು ತಡೆದು ಬಾಯಿ ಮುಚ್ಚಿಸುವುದು. ಜೋರಾಗಿ ಮಾತನಾಡಬೇಡ ಎನ್ನುವ ಗದರಿಸುವುದು ಸರಿಯಲ್ಲ.ಇದರಿಂದ ಆ ಮಗುವು ಏನನ್ನು ಹೇಳಲಾಗದೇ ಒಳಗೊಳಗೇ ಕೊರಗಬಹುದು.

ಮಕ್ಕಳನ್ನು ಬೆಳೆಸುವಾಗ ಹೋಲಿಕೆ ಮಾಡಬೇಡಿ. ಬೇರೆ ಮಕ್ಕಳೊಂದಿಗೆ ನಿಮ್ಮ ಮಗಳನ್ನು ಹೋಲಿಸಿ ಚುಚ್ಚಿ ಮಾತನಾಡುವುದು ಸರಿಯಲ್ಲ. ಇದರಿಂದ ನಿಮ್ಮ ಮಗುವಿನಲ್ಲಿ ತಾನು ಹೆಣ್ಣು ತಾನು ಹೇಗಿದ್ದರೂ ತಪ್ಪು ಎನ್ನುವ ಭಾವನೆಯು ಬೆಳೆಯಬಹುದು.