Paris Olympics 2024: 6 ಪದಕಗಳೊಂದಿಗೆ ಒಲಿಂಪಿಕ್ಸ್ ಅಭಿಯಾನ ಅಂತ್ಯಗೊಳಿಸಿದ ಭಾರತ
Paris Olympics 2024: 33ನೇ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ 117 ಕ್ರೀಡಾಪಟುಗಳು ಭಾಗವಹಿಸಿದ್ದರು. ಇವರಲ್ಲಿ ಪದಕಗಳನ್ನು ಗೆದ್ದಿರುವುದು ಕೇವಲ ಐವರು ಮಾತ್ರ ಎಂದರೆ ನಂಬಲೇಬೇಕು. ಅದರಲ್ಲೂ ಕಳೆದ ಬಾರಿ 7 ಪದಕ ಗೆದ್ದಿದ್ದ ಭಾರತೀಯರು ಈ ಬಾರಿ 6 ಪದಕಗಳೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ ಅಭಿಯಾನವನ್ನು ಅಂತ್ಯಗೊಳಿಸಿದ್ದಾರೆ.
1 / 9
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಅಭಿಯಾನ ಅಂತ್ಯವಾಗಿದೆ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕಗಳೊಂದಿಗೆ ಒಟ್ಟು 7 ಮೆಡಲ್ ಗೆದ್ದಿದ್ದ ಭಾರತ ಈ ಬಾರಿ ನೀರಸ ಪ್ರದರ್ಶನ ನೀಡಿದೆ. ಏಕೆಂದರೆ ಕಳೆದ ಬಾರಿಗೆ ಹೋಲಿಸಿದರೆ ಈ ಸಲ ಭಾರತೀಯರು ಗೆದ್ದಿರುವುದು ಕೇವಲ 6 ಪದಕಗಳು ಮಾತ್ರ.
2 / 9
ಈ ಬಾರಿಯ ಒಲಿಂಪಿಕ್ಸ್ನಲ್ಲಿ ಭಾರತದ 117 ಕ್ರೀಡಾಪಟುಗಳು ಭಾಗವಹಿಸಿದ್ದರು. ಇವರಲ್ಲಿ ಪದಕಗಳನ್ನು ಗೆದ್ದಿರುವುದು ಕೇವಲ ಐವರು ಮಾತ್ರ ಎಂಬುದು ಇಲ್ಲಿ ಉಲ್ಲೇಖಾರ್ಹ. ಅಂದರೆ ಮನು ಭಾಕರ್ ಎರಡು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದರಂತೆ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತೀಯರು ಗೆದ್ದ ಪದಕಗಳ ಪಟ್ಟಿ ಈ ಕೆಳಗಿನಂತಿದೆ...
3 / 9
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದು ಯಂಗ್ ಶೂಟರ್ ಮನು ಭಾಕರ್. ಮಹಿಳಾ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ನಲ್ಲಿ ಕಂಚಿನ ಪದಕಕ್ಕೆ ಕೊರೊಳೊಡ್ಡುವ ಮೂಲಕ ಮನು ಭಾರತದ ಪದಕದ ಖಾತೆ ತೆರೆದಿದ್ದರು.
4 / 9
ಆ ಬಳಿಕ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಫರ್ಧೆದಲ್ಲಿ ಸರಬ್ಜೋತ್ ಸಿಂಗ್ ಜೊತೆಗೂಡಿ ಮನು ಭಾಕರ್ ಭಾರತಕ್ಕೆ 2ನೇ ಕಂಚಿನ ಪದಕ ತಂದುಕೊಟ್ಟರು. ಈ ಮೂಲಕ ಒಂದೇ ಒಲಿಂಪಿಕ್ಸ್ ಆವೃತ್ತಿಯಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎನಿಸಿಕೊಂಡರು.
5 / 9
ಭಾರತಕ್ಕೆ ಮೂರನೇ ಪದಕ ಒಲಿದು ಬಂದಿದ್ದು ಕೂಡ ಶೂಟಿಂಗ್ನಲ್ಲೇ ಎಂಬುದು ವಿಶೇಷ. 50 ಮೀ ರೈಫಲ್ ಶೂಟಿಂಗ್ನಲ್ಲಿ 3ನೇ ಸ್ಥಾನ ಪಡೆಯುವ ಮೂಲಕ ಸ್ವಪ್ನಿಲ್ ಕುಸಾಲೆ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.
6 / 9
ನಾಲ್ಕನೇ ಪದಕ ಮೂಡಿಬಂದಿರುವುದು ಪುರುಷರ ಹಾಕಿ ಆಟದಿಂದ. 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಸ್ಪೇನ್ ತಂಡವನ್ನು 2-1 ಅಂತರದಿಂದ ಮಣಿಸುವ ಮೂಲಕ ಭಾರತೀಯ ಹಾಕಿ ತಂಡ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.
7 / 9
ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಈ ಬಾರಿ 2ನೇ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಈ ಮೂಲಕ ಸತತ ಎರಡು ಆವೃತ್ತಿಗಳಲ್ಲಿ ಪದಕ ಗೆದ್ದ ವಿಶೇಷ ಸಾಧನೆ ಮಾಡಿದರು.
8 / 9
ಭಾರತಕ್ಕೆ ಆರನೇ ಪದಕ ಗೆದ್ದುಕೊಡುವಲ್ಲಿ ಯುವ ಕುಸ್ತಿಪಟು ಅಮನ್ ಸೆಹ್ರಾವತ್ ಯಶಸ್ವಿಯಾದರು. ಪುರುಷರ ಕುಸ್ತಿ ಫ್ರೀಸ್ಟೈಲ್ 57 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ 21 ವರ್ಷದ ಅಮನ್ ಕಂಚಿನ ಪದಕಕ್ಕೆ ಕೊರೊಳೊಡ್ಡಿದ್ದರು.
9 / 9
ಇನ್ನು ವಿನೇಶ್ ಫೋಗಟ್ ಅವರು 50 ಕೆ.ಜಿ ಮಹಿಳಾ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ಗೆ ಪ್ರವೇಶಿಸಿದರೂ ಅಂತಿಮ ಸುತ್ತಿನ ವೇಳೆ ಹೆಚ್ಚುವರಿ ತೂಕದ ಕಾರಣ ಅನರ್ಹಗೊಂಡಿದ್ದಾರೆ. ಇದಾಗ್ಯೂ ಸೆಮಿಫೈನಲ್ವರೆಗೂ ಅರ್ಹತೆಯೊಂದಿಗೆ ಸ್ಪರ್ಧಿಸಿರುವ ಕಾರಣ ಬೆಳ್ಳಿ ಪದಕ ನೀಡಬೇಕೆಂದು ವಿನೇಶ್ ಫೋಗಟ್ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಒಂದು ವೇಳೆ ವಿನೇಶ್ ಪರವಾಗಿ ತೀರ್ಪು ಬಂದರೆ ಅವರಿಗೆ ಬೆಳ್ಳಿ ಪದಕ ದೊರೆಯಲಿದೆ.