
ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಗೆಲುವಿನ ಶುಭಾರಂಭ ಮಾಡಿದ್ದಾರೆ. ಸಿಂಧು ಇಂದು ನಡೆದ ಮಹಿಳಾ ಸಿಂಗಲ್ಸ್ ಗುಂಪು ಹಂತದ ಮೊದಲ ಪಂದ್ಯದಲ್ಲಿ ಮಾಲ್ಡೀವ್ಸ್‌ನ ಫಾತಿಮತ್ ಅಬ್ದುಲ್ ರಜಾಕ್ ಅವರನ್ನು ಸೋಲಿಸಿದರು.

ಎಂ ಗುಂಪಿನಲ್ಲಿ ಸ್ಥಾನ ಪಡೆದಿರುವ ಸಿಂಧು, ಫಾತಿಮಾತ್ ಅವರನ್ನು 21-9 21-6 ನೇರ ಗೇಮ್‌ಗಳಲ್ಲಿ ಕೇವಲ 29 ನಿಮಿಷಗಳಲ್ಲಿ ಮಣಿಸುವಲ್ಲಿ ಯಶಸ್ವಿಯಾದರು. ಆರಂಭದಲ್ಲಿ ಕೆಲ ತಪ್ಪುಗಳನ್ನು ಎಸಗಿದ ಸಿಂಧು ಮತ್ತೆ ತಿರುಗೇಟು ನೀಡಿ ವಿರಾಮದ ವೇಳೆಗೆ 11-4ರಲ್ಲಿ ಮುನ್ನಡೆ ಸಾಧಿಸಿದರು.

ಕೇವಲ 13 ನಿಮಿಷಗಳಲ್ಲಿ ಮೊದಲ ಗೇಮ್ ಗೆದ್ದ ಮಾಜಿ ವಿಶ್ವ ಚಾಂಪಿಯನ್ ಸಿಂಧುಗೆ ತಿರುಗೇಟು ನೀಡಲು ವಿಶ್ವದ 111ನೇ ಶ್ರೇಯಾಂಕಿತೆ ಫಾತಿಮಾತ್ಗೆ ಸಾಧ್ಯವಾಗಲಿಲ್ಲ. ಎರಡನೇ ಗೇಮ್‌ನಲ್ಲೂ ಸಿಂಧು ಅಮೋಘ ಆರಂಭ ನೀಡಿ 4-0 ಮುನ್ನಡೆ ಸಾಧಿಸಿದರಾದರೂ ಫಾತಿಮಾತ್ ತಿರುಗೇಟು ನೀಡಿ ಸ್ಕೋರ್ ಅನ್ನು 3-4ಕ್ಕೆ ಕೊಂಡೊಯ್ದರು.

ಇದಾದ ನಂತರ ಸಿಂಧು ಸತತ ಆರು ಅಂಕಗಳನ್ನು ಸಂಪಾಧಿಸಿ 10-3 ರಿಂದ ಮುನ್ನಡೆ ಸಾಧಿಸಿದರು. 14 ಮ್ಯಾಚ್ ಪಾಯಿಂಟ್‌ಗಳನ್ನು ಪಡೆದ ಸಿಂಧು ಮೊದಲ ಪ್ರಯತ್ನದಲ್ಲಿಯೇ ಪಾಯಿಂಟ್ ಗೆಲ್ಲುವ ಮೂಲಕ ಗೇಮ್ ಮತ್ತು ಪಂದ್ಯವನ್ನು ಗೆದ್ದರು.

2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಮತ್ತು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ 10ನೇ ಶ್ರೇಯಾಂಕಿತೆ ಸಿಂಧು, ಬುಧವಾರ ನಡೆಯಲಿರುವ ಗುಂಪಿನ ಎರಡನೇ ಪಂದ್ಯದಲ್ಲಿ ವಿಶ್ವದ 75ನೇ ಶ್ರೇಯಾಂಕದ ಎಸ್ಟೋನಿಯಾದ ಕ್ರಿಸ್ಟಿನ್ ಕುಬಾ ಅವರನ್ನು ಎದುರಿಸಲಿದ್ದಾರೆ. ಸಿಂಧು ಮುಂದಿನ ಪಂದ್ಯದಲ್ಲಿ ಗೆದ್ದರೆ 16ರ ಘಟ್ಟ ತಲುಪಲಿದ್ದಾರೆ.

ಈ ಸುತ್ತಿನಲ್ಲಿ ಸಿಂದು ಅವರು ಚೀನಾದ ವಿಂಗ್ಜಿಯಾವೊ ಅವರನ್ನು ಎದುರಿಸುವ ಸಾಧ್ಯತೆಗಳಿವೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸಿಂಧು ಕಂಚಿನ ಪದಕ ಗೆದ್ದಿದ್ದು ಹೀ ವಿರುದ್ಧವೇ. ಒಂದು ವೇಳೆ ಸಿಂಧು ಕ್ವಾರ್ಟರ್ ಫೈನಲ್‌ಗೆ ತಲುಪಿದರೆ, ಅಲ್ಲಿ ಅವರು ಟೋಕಿಯೊ ಒಲಿಂಪಿಕ್ಸ್‌ನ ಚಿನ್ನದ ಪದಕ ವಿಜೇತರನ್ನು ಎದುರಿಸಬಹುದು.