
ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಕ್ಷೀರ ಭಾಗ್ಯ ಯೋಜನೆಯ ಹಾಲಿನ ಪುಡಿ ದುರ್ಬಳಕೆಯಾಗುತ್ತಿದೆ. ಅಂಗನವಾಡಿಯಲ್ಲಿ ಇರಬೇಕಿದ್ದ ಕ್ಷೀರಭಾಗ್ಯದ ಹಾಲುಪುಡಿ ಅಂಗಡಿಯಲ್ಲಿ ಪತ್ತೆಯಾಗಿದೆ.

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈಎನ್ ಹೊಸಕೋಟೆಯ ಅಂಗಡಿಗಳಲ್ಲಿ ಅಂಗನವಾಡಿಯ ಹಾಲಿನ ಪುಡಿ ಪ್ಯಾಕೇಟ್ಗಳು ಪತ್ತೆಯಾಗಿವೆ. ಬಾಣಂತಿಯರಿಗೆ ಹಾಗೂ ಮಕ್ಕಳಿಗಾಗಿ ಸರ್ಕಾರ ನೀಡುತ್ತಿರುವ ಹಾಲಿನ ಪೌಡರನ್ನು ಅಂಗಡಿಗಳಿಗೆ ಮಾರಾಟ ಮಾಡಲಾಗುತ್ತಿದೆ.

ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು ರಾಜ್ಯ ಸರ್ಕಾರ ಅಂಗನವಾಡಿಗಳಿಗೆ ಹಾಲಿನ ಪೌಡರ್ ಪೂರೈಸುತ್ತಿದೆ. ಆದರೆ ಅಕ್ರಮವಾಗಿ ಅಂಗಡಿಗಳಿಗೆ ಮಾರಾಟ ಮಾಡಲಾಗುತ್ತಿದ್ದು ಸರ್ಕಾರದ ಹಾಲಿನ ಪೌಡರ್ ಈಗ ಅಂಗಡಿಗಳಲ್ಲೂ ಮಾರಾಟ ಮಾಡಲಾಗುತ್ತಿದೆ. ಉಚಿತವಾಗಿಸುವುದನ್ನು ದುಡ್ಡಿಗೆ ಮಾರಾಟ ಮಾಡಿ ಹಣ ಮಾಡಲಾಗುತ್ತಿದೆ.

ವೈಎನ್ ಹೊಸಕೋಟೆಯ ಸುಮಾರು 8 ಅಂಗಡಿಗಳಲ್ಲಿ ಸರ್ಕಾರದ ಹಾಲಿನ ಪೌಡರ್ ಮಾರಾಟ ಮಾಡಲಾಗುತ್ತಿರುವುದು ಪತ್ತೆಯಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಂದಲೇ ಅಂಗಡಿಗಳಿಗೆ ಸರಬರಾಜು ಮಾಡಲಾಗುತ್ತಿದ್ದು ಮಹಿಳಾ ಅಧಿಕಾರಿಗಳು ಅಂಗಡಿಗಳ ಮೇಲೆ ದಾಳಿ ನಡೆಸಿ ಅಕ್ರಮ ಪತ್ತೆ ಮಾಡಿದ್ದಾರೆ.

ಪಾವಗಡ ತಾಲೂಕಿನಲ್ಲೇ ಅತಿಹೆಚ್ಚು ಅಪೌಷ್ಟಿಕತೆ ಇರುವ ಮಕ್ಕಳಿದ್ದಾರೆ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಪಾವಗಡದತ್ತ ಗಮನ ಹರಿಸಬೇಕಿದೆ. ಮಕ್ಕಳಿಗೆ ಬಾಣಂತಿಯರಿಗೆ ನೀಡುವ ಹಾಲಿನ ಪೌಡರ್ ಮಾರಾಟವನ್ನು ತಪ್ಪಿಸಬೇಕಿದೆ.