ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದ ಹೊರ ಭಾಗದಲ್ಲಿರುವ ಕಾರುಣ್ಯ ವೃದ್ಧಾಶ್ರಮವು ಅನಾಥರು, ವಯೋಸಹಜ ಖಾಯಲೆಯಿಂದ ಬಳಲುತ್ತಿರುವ, ಬುದ್ಧಿಮಾಂದ್ಯರು ಮತ್ತು ಹಿರಿಯ ಜೀವಿಗಳ ಆಶ್ರಯ ತಾಣವಾಗಿದೆ. ಈ ವೃದ್ಧಾಶ್ರಮಕ್ಕೆ ಜಿಲ್ಲೆಯ ಪೊಲೀಸರು ನೆರವಾಗಿದ್ದಾರೆ.
ಪೊಲೀಸರು ಸೂಚಿಸುವ ಭಿಕ್ಷುಕರು, ಅನಾಥರಿಗೆ ಕಾರುಣ್ಯ ಆಶ್ರಮದವರು ಆಶ್ರಯ ನೀಡುತ್ತಾರೆ. ಹೀಗಾಗಿ, ಆಶ್ರಮದಲ್ಲಿ ಹಂತಹಂತವಾಗಿ ನಿರ್ಗತಿಕರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ವಸತಿಗೆ ಸಮಸ್ಯೆಯಾಗುತ್ತಿತ್ತು. ಈ ಸಮಸ್ಯೆಯನ್ನು ಬಗೆಹರಿಸಲು ಪೊಲೀಸ್ ಪಡೆ ಆಶ್ರಮಕ್ಕೆ ಹೊಸ ಕಟ್ಟಡ ಕಟ್ಟಿಸಿ ಕೊಟ್ಟಿದೆ.
ರಾಯಚೂರಿನ 2005 ನೇ ಬ್ಯಾಚ್ನ ಸಿವಿಲ್ ಸರ್ವಿಸ್ನ ಪೊಲೀಸ್ ಸಿಬ್ಬಂದಿ ತಮ್ಮ ವೃತ್ತಿ ಜೀವನ ಆರಂಭವಾಗಿ 20 ವರ್ಷಗಳಾದ ಹಿನ್ನೆಲೆ ಸಮಾಜಕ್ಕೆ ಒಂದೊಳ್ಳೆ ಸಂದೇಶ ಕೊಡುವ ನಿಟ್ಟಿನಲ್ಲಿ, ನಿರ್ಗತಿಕರ ಲಾಲನೆ, ಪಾಲನೆ ಮಾಡುತ್ತಿರುವ ಕಾರುಣ್ಯ ಆಶ್ರಮಕ್ಕೆ ಕಟ್ಟಡ ನಿರ್ಮಿಸಿ ಕೊಟ್ಟಿದ್ದಾರೆ.
ಸುಮಾರು 80ಕ್ಕೂ ಹೆಚ್ಚು ಸಿಬ್ಬಂದಿ ಪ್ರತಿವರ್ಷ ಒಂದಲ್ಲ ಒಂದು ರೀತಿ ಕಾರ್ಯಕ್ರಮಗಳನ್ನು ಮಾಡುತ್ತಾ ವಿನೂತ ಸೇವೆ ಮಾಡುತ್ತಿದ್ದಾರೆ. ಇದರ ಭಾಗವಾಗಿ ಮುಗ್ಧ ಜೀವಿಗಳು ಬದಕು ನಡೆಸುತ್ತಿರುವ ಆ ಆಶ್ರಮಕ್ಕೆ ಆಶ್ರಮ ಧಾಮ ಹೆಸರಿನಲ್ಲಿ ಕಟ್ಟಡ ಕಟ್ಟಿಸಿಕೊಟ್ಟಿದ್ದು, ಅದನ್ನು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಉದ್ಘಾಟಿಸಿ ಶ್ಲಾಘಿಸಿದ್ದಾರೆ..
ವಿವಿಧ ಕಾರ್ಯಕ್ರಮಗಳನ್ನು ಮಾಡ್ತಾ ಆಚರಣೆ ಹೆಸರಲ್ಲಿ ಮೋಜು ಮಸ್ತಿ ಮಾಡುವ ಈ ಕಾಲದಲ್ಲಿ ಪೊಲೀಸ್ ಪಡೆ, ಬಡವರ ಸೇವೆ ಮಾಡುತ್ತಿರುವ ಈ ಆಶ್ರಮಕ್ಕೆ ಹೆಗಲು ಕೊಟ್ಟಿದ್ದು ಸಾರ್ವಜನಿಕರ ಮೆಚ್ಚುಗೆ ಕಾರಣವಾಗಿದೆ.