Kannada News Photo gallery Ravi Srivatsa pays tribute to K V Raju during Gangs of UK movie press meet Entertainment News in Kannada
ಗ್ಯಾಂಗ್ಸ್ ಆಫ್ ಯುಕೆ: ಸಿನಿಮಾದ ಪಾಠ ಕಲಿಸಿದ ಗುರುವಿಗೆ ನಮಿಸಿ, ಹೊಸ ಹೆಜ್ಜೆ ಇಟ್ಟ ರವಿ ಶ್ರೀವತ್ಸ
ಇತ್ತೀಚೆಗೆ ರವಿ ಶ್ರೀವತ್ಸ ಅವರ ‘ಡೆಡ್ಲಿ ಆರ್ಟ್ಸ್’ ಸಂಸ್ಥೆಯ ಲಾಂಛನ ಅನಾವರಣ ಮತ್ತು ‘ಗ್ಯಾಂಗ್ಸ್ ಆಫ್ ಯುಕೆ’ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ನಿರ್ದೇಶಕ ಕೆ.ವಿ. ರಾಜು ಅವರ ಪತ್ನಿ ಮುಖ್ಯ ಅತಿಥಿ ಆಗಿದ್ದರು. ಅಮೋಘ್ ಅವರು ಈ ಚಿತ್ರದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕೆ.ವಿ. ರಾಜು ಅವರಿಗೆ ಪುಷ್ಪ ನಮನ ಸಲ್ಲಿಸಲಾಯಿತು.
1 / 6
ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ರವಿ ಶ್ರೀವತ್ಸ ಅವರು ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ‘ಡೆಡ್ಲಿ ಸೋಮ’, ‘ಮಾದೇಶ’, ‘ದಶಮುಖ’ ಮುಂತಾದ ಸಿನಿಮಾಗಳ ಮೂಲಕ ಅವರು ಹೆಸರು ಮಾಡಿದ್ದಾರೆ. ಈಗ ಅವರು ಸ್ವಂತ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದಾರೆ. ಆ ಸಂಸ್ಥೆಯ ಮೂಲಕ ‘ಗ್ಯಾಂಗ್ಸ್ ಆಫ್ ಯುಕೆ’ ಶೀರ್ಷಿಕೆಯಲ್ಲಿ ಹೊಸ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅನೇಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತಿದೆ.
2 / 6
ಸ್ಯಾಂಡಲ್ವುಡ್ನ ಹಿರಿಯ ನಿರ್ದೇಶಕ ಕೆ.ವಿ. ರಾಜು ಅವರ ಬಳಿ ಸಿನಿಮಾದ ಪಾಠಗಳನ್ನು ಕಲಿತವರು ರವಿ ಶ್ರೀವತ್ಸ. ಹಾಗಾಗಿ ಈ ಸುದ್ದಿಗೋಷ್ಠಿಯಲ್ಲಿ ಗುರುಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಅಲ್ಲದೇ ಅವರ ಕುರಿತು ಮಾತನಾಡುತ್ತಾ ಭಾವುಕರಾದರು. ‘ನಾನು ಒಳ್ಳೆಯ ಸಿನಿಮಾ ಮಾಡಬೇಕು ಅಂದಾಗೆಲ್ಲ ಅವರು ನನ್ನ ಹಿಂದೆ ನಿಲ್ಲುತ್ತಿದ್ದರು. ಇದು 2018ರಲ್ಲಿ ಮಾಡಿಕೊಂಡ ಕಥೆ. ಅವರನ್ನು ಮಿಸ್ ಮಾಡಿಕೊಂಡ ನಂತರ ಎಂ.ಎಸ್. ರಮೇಶ್ ಅವರು ನನಗೆ ಜೊತೆಯಾದರು’ ಎಂದಿದ್ದಾರೆ ರವಿ ಶ್ರೀವತ್ಸ.
3 / 6
‘2023ರ ಡಿಸೆಂಬರ್ನಲ್ಲಿ ರಮೇಶ್ ಅವರಿಗೆ ಈ ಕಥೆಯನ್ನು ಹೇಳಿದೆ. ಒಟ್ಟು 56 ಕಲಾವಿದರು ಈ ಸಿನಿಮಾ ಇದ್ದಾರೆ. ಅವರಲ್ಲಿ ಬಹುತೇಕ ಹೊಸಬರು. ಏಪ್ರಿಲ್ 18ಕ್ಕೆ ಸಿನಿಮಾದ ಮುಹೂರ್ತ ಮಾಡಿ, ಚಿತ್ರೀಕರಣ ಆರಂಭಿಸಿದ್ದೆವು. ಒರಟ ಪ್ರಶಾಂತ್, ಕೋಟೆ ಪ್ರಭಾಕರ್, ಜ್ಯೋತಿ ಶೆಟ್ಟಿ, ಪದ್ಮಾ ವಾಸಂತಿ, ಮುನಿ ಮುಂತಾದ ಕಲಾವಿದರು ಸೇರ್ಪಡೆ ಆದರು. ಕಳೆದ ಶನಿವಾರ ಸಿನಿಮಾದ ಶೂಟಿಂಗ್ ಮುಗಿಸಿದ್ದೇವೆ’ ಎಂದು ಸಿನಿಮಾ ಬಗ್ಗೆ ರವಿ ಶ್ರೀವತ್ಸ ಮಾಹಿತಿ ನೀಡಿದರು.
4 / 6
‘ಬಾಗಲಕೋಟೆಯ ಪಿಲ್ಲಾರಿ ಫಾಲ್ಸ್ನಲ್ಲಿ ನಡೆದ ಒಂದು ಘಟನೆಯನ್ನು ಇಟ್ಟುಕೊಂಡು ಬರೆದ ಚಿತ್ರಕಥೆ ಇದು. ರಕ್ತವು ತನ್ನ ಕುರುಹನ್ನು ಬಿಟ್ಟು ಹೋಗುತ್ತದೆ. ಜಿದ್ದು ಒಬ್ಬರಿಂದ ಒಬ್ಬರಿಗೆ ಟ್ರಾವೆಲ್ ಆಗುತ್ತದೆ. ಇದೇ ಈ ಸಿನಿಮಾದ ಕಾನ್ಸೆಪ್ಟ್. ಅಲ್ಲಿನ ಡಿಸಿಪಿ ನಮಗೆ ಬಹಳ ಸಹಾಯ ಮಾಡಿದರು. ನಿರ್ಮಾಪಕರಾಗಿ ಎಲ್.ಎನ್. ರೆಡ್ಡಿ ಅವರು ನನ್ನ ಜೊತೆ ಕೈಜೋಡಿಸಿದರು. ಉತ್ತರ ಕರ್ನಾಟಕದ ಹತ್ಯಾಕಾಂಡ ಎಂಬ ಟ್ಯಾಗ್ ಲೈನ್ ಈ ಚಿತ್ರಕ್ಕಿದೆ’ ಎಂದಿದ್ದಾರೆ ರವಿ ಶ್ರೀವತ್ಸ.
5 / 6
ಸುದ್ದಿಗೋಷ್ಠಿಯಲ್ಲಿ ಎಂ.ಎಸ್. ರಮೇಶ್ ಮಾತನಾಡಿ, ‘ನಾವಿಲ್ಲಿ ನಿಂತಿದ್ದೇವೆ ಎಂದರೆ ಅದಕ್ಕೆ ಕೆ.ವಿ. ರಾಜು ಅವರೇ ಕಾರಣ. ಯಾವಾಗಲೂ ನಿನ್ನ ಕೆಲಸವನ್ನು ನೀನು ನಂಬು ಎಂದು ಅವರು ಹೇಳುತ್ತಿದ್ದರು. ಬಾಗಲಕೋಟೆಯಲ್ಲಿ ಡಿಸಿ ಜಾನಕಿ, ಎಸ್ಪಿ ಹೀಗೆ ಎಲ್ಲರೂ ನಮಗೆ ಬೆಂಬಲ ನೀಡಿದರು. ಟಂಕಸಾಲೆ ಉಮೇಶ್, ಮಹಂತೇಶ್ ಹುಲ್ಲೂರು ಮುಂತಾದ ಸ್ಥಳೀಯ ಪ್ರತಿಭೆಗಳು ಈ ಚಿತ್ರದಲ್ಲಿದ್ದಾರೆ. ರಾ ಫೀಲ್ ಕೊಡುವಂತಹ ಸಂಭಾಷಣೆಗಳು ಇವೆ’ ಎಂದು ಅವರು ಹೇಳಿದರು.
6 / 6
ಈ ಸಿನಿಮಾದಲ್ಲಿ ಕೆ.ವಿ. ರಾಜು ಅವರ ಪುತ್ರ ಅಮೋಘ್ ಪ್ರಮುಖ ಪಾತ್ರ ಮಾಡಿದ್ದಾರೆ. ಸೋನೂ ಉಪಾಧ್ಯ, ಉಗ್ರಂ ರೆಡ್ಡಿ, ಪ್ರವೀಣ್, ಸತ್ಯ, ನವೀನ್, ಧಿಲ್ಲಾನ್, ಪ್ರಜ್ವಲ್ ಮಸ್ಕಿ, ಉಮೇಶ್, ವಿಕಾಸ್ ಮುಂತಾದ ಹೊಸ ಕಲಾವಿದರು ನಟಿಸಿದ್ದಾರೆ. ವಿಶೇಷ ಎನೆಂದರೆ, ಶಿಶುನಾಳ ಷರೀಫರ 8 ಗೀತೆಗಳನ್ನು ಇಟ್ಟುಕೊಂಡು ಬಿಟ್ ಸಾಂಗ್ಸ್ ಮಾಡಲಾಗಿದೆ. ಒಟ್ಟು 9 ಹಾಡುಗಳು ಈ ಸಿನಿಮಾದಲ್ಲಿವೆ. ಅವುಗಳಿಗೆ ಸಾಧು ಕೋಕಿಲ ಸಂಗೀತ ನಿರ್ದೇಶನ ಮಾಡಿದ್ದಾರೆ. ಡಿಸೆಂಬರ್ ಅಥವಾ ಜನವರಿಯಲ್ಲಿ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ.