
ಕಲಿಯುಗ ಕಾಮಧೇನು, ಕೇಳಿದ ವರವನ್ನ ಕರುಣಿಸುವ ದೈವ ಅಂತಲೇ ಭಕ್ತರು ನಂಬಿರುವ ಶ್ರೀ ರಾಘವೇಂದ್ರ ಸ್ವಾಮಿಗಳ 353 ನೇ ಆರಾಧನಾ ಮಹೋತ್ಸವ ಅಂಗವಾಗಿ ಇಂದು ಮಧ್ಯರಾಧನೆ ನಡೀತು. ಶ್ರೀ ರಾಘವೇಂದ್ರ ಸ್ವಾಮಿಗಳು ಸಶರೀರರಾಗಿ ವೃಂದಾವನ ಪ್ರವೇಶಿಸಿದ ದಿನವನ್ನ ಮಧ್ಯಾರಾಧನೆಯಾಗಿ ಇಂದು ಮಂತ್ರಾಲಯದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ಇಂದಿಗೂ ರಾಯರು ವೃಂದಾವನದಲ್ಲಿ ತಮ್ಮ ಯೋಗ ಸಾಮರ್ಥ್ಯದಿಂದ ಸಶರೀರರಾಗಿ ಇದ್ದು, ಭಕ್ತರನ್ನು ಅನುಗ್ರಹಿಸುತ್ತಾರೆ ಎನ್ನುವ ಪ್ರತೀತಿಯಿದೆ. ಶ್ರಾವಣ ಶುಕ್ಲ ಪಕ್ಷದ ಬಿದಿಗೆಯ ಮಂಗಳಕರವಾದ ಈ ದಿನವನ್ನ ಮಧ್ಯಾರಾಧನೆ ಎಂದು ಕರೆಯಲಾಗುತ್ತದೆ.

ಈ ದಿನ ವಿಶೇಷವಾಗಿ ನಿರ್ಮಾಲ್ಯ ವಿಸರ್ಜನೆ ಬಳಿಕ ಸ್ವತಃ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ರಾಯರ ವೃಂದಾವನಕ್ಕೆ ಮಹಾಪಂಚಾಮೃತ ಅಭಿಷೇಕವನ್ನ ಮಾಡಿದರು. ಪ್ರತಿನಿತ್ಯದ ಪಂಚಾಮೃತ ಅಭಿಷೇಕಕ್ಕಿಂತ ಹತ್ತುಪಟ್ಟು ಪದಾರ್ಥಗಳನ್ನ ಬಳಸಲಾಯ್ತು. ಹಾಲು,ಮೊಸರು,ತುಪ್ಪ,ಜೇನು ತುಪ್ಪ, ಹಣ್ಣು, ಗೋಡಂಬಿ, ಒಣದ್ರಾಕ್ಷಿ ಸೇರಿ ವಿವಿಧ ಪದಾರ್ಥಗಳಿಂದ ಶ್ರೀಗಳು ವೃಂದಾವನದ ನಾಲ್ಕುದಿಕ್ಕಿಗೂ ಅಭಿಷೇಕ ಮಾಡಿದ ಬಳಿಕ ಚಿನ್ನದ ಕವಚದೊಂದಿಗೆ ಅಲಂಕಾರ ಪೂಜೆಯೂ ಬಹಳ ವಿಜೃಂಭನೆಯಿಂದ ನಡೀತು.

ಇತ್ತ ಮಧ್ಯಾರಾಧನೆ ನಿಮಿತ್ಯ ತಿರುಪತಿ ತಿಮ್ಮಪ್ಪನಿಂದ ಮಂತ್ರಾಲಯಕ್ಕೆ ಶೇಷ ವಸ್ತ್ರದ ಆಗಮನವಾಯ್ತು. ಆಗ ಶೇಷ ವಸ್ತ್ರವನ್ನು ಶ್ರೀ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ವಾದ್ಯಗಳೊಂದಿಗೆ ಅದ್ಧೂರಿಯಾಗಿ ಸ್ವಾಗತ ಕೋರಿದರು. ಆ ಬಳಿಕ ವಾದ್ಯ ಮೇಳಗಳ ಮೂಲಕ ಮೆರವಣಿಗೆ ಮಾಡೋದರ ಜೊತೆ ಶೇಷ ವಸ್ತ್ರ ವನ್ನ ರಾಯರ ಮೂಲ ಬೃಂದಾವನಕ್ಕೆ ಸಮರ್ಪಣೆ ಮಾಡಲಾಯ್ತು.

ಇದೇ ವೇಳೆ ಶ್ರೀ ಮಠದಿಂದ ವಿವಿಧ ಭಾಷೆಯ ಪುಸ್ತಕಗಳನ್ನ ಬಿಡುಗಡೆ ಮಾಡಲಾಯಿತು. ಬಳಿಕ ಭಕ್ತರನ್ನ ಉದ್ದೇಶಿ ಅನುಗ್ರಹ ಸಂದೇಶ ನೀಡಿದರು. ಮಹಾಪಂಚಾಮೃತ ಅಭಿಷೇಕ ನೇರವೇರಿಸಿದ ಶ್ರೀಗಳು ಮಠದ ಪ್ರಾಕಾರದಲ್ಲಿ ಗಜ ,ರಜತ ನೇರವೇರಿಸಲಾಯ್ತು. ಅದರಲ್ಲೂ ಸ್ವರ್ಣ ರಥೋತ್ಸವವನ್ನ ಸುಬುಧೇಂದ್ರ ತೀರ್ಥರು ನೇರವೇರಿಸೋ ಮೂಲಕ ರಾಯರ ಮೂಲ ವೃಂದಾವನಕ್ಕೆ ಒಂದು ಸುತ್ತು ಪ್ರದಕ್ಷಣೆ ಹಾಕಿ, ಭಕ್ತರಿಗೆ ಆಶಿರ್ವದಿಸಿದರು.

ರಾಯರ ಮಧ್ಯಾರಾಧನೆ ಹಿನ್ನೆಲೆ ದೇಶದ ನಾನಾ ಮೂಲೆಗಳಿಂದ ಬಂದ ಸಾವಿರಾರು ಭಕ್ತರು ರಾಯರ ದರ್ಶನ ಪಡೆದು ಪುನೀತರಾದರು. ಇತ್ತ ರಾಯರ ಮಧ್ಯಾರಾಧನೆ ಹಿನ್ನೆಲೆ ದೇಶ ವಿದೇಶಗಳಿಂದ ಸಹಸ್ರಾರು ಭಕ್ತರು ದಂಡೇ ಈ ವಿಶೇಷ ಧಾರ್ಮಿಕ ಆಚರಣೆಗಳಿಗೆ ಸಾಕ್ಷಿಯಾದ್ರು.

ಪ್ರತಿ ವರ್ಷಕ್ಕೊಮ್ಮೆ ನಡೆಯುವ ಆರಾಧನೆ ಮಹೋತ್ಸವದಲ್ಲಿ ರಾಯರ ಮಧ್ಯಾರಾಧನೆಯೇ ಉನ್ನತ ಘಟ್ಟ. ಹೀಗಾಗಿ ಪ್ರತಿಯೊಬ್ಬ ಭಕ್ತರ ಮುಖದಲ್ಲಿ ಅದೆನೋ ಸಂತೃಪ್ತ ಭಾವನೆ, ಹೊಸ ಉಲ್ಲಾಸ ಮನೆ ಮಾಡಿತ್ತು. ಶ್ರೀ ಮಠದಲ್ಲಿ ಭಕ್ತರು ಕೂತು ಧ್ಯಾನ, ಆರಾಧನೆ ಮಾಡೋ ಮೂಲಕ ರಾಯರ ಕೃಪೆಗೆ ಪಾತ್ರರಾದರು.