
ಫಿಫಾ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಅರ್ಜೆಂಟೀನಾ ತಂಡವನ್ನು 2-1 ಗೋಲುಗಳಿಂದ ಮಣಿಸಿದ ಸೌದಿ ಅರೇಬಿಯಾ ತಂಡದ ಮೇಲೆ ಬಹುಮಾನದ ಮಳೆ ಸುರಿಯುತ್ತಿದೆ. ಸೌದಿ ಅರೇಬಿಯಾದ ರಾಜ ಈಗ ತನ್ನ ತಂಡದ ಆಟಗಾರರಿಗೆ ಭಾರೀ ಬಹುಮಾನವನ್ನೇ ನೀಡುವುದಾಗಿ ಘೋಷಣೆ ಹೊರಡಿಸಿದ್ದಾರೆ.

ಎಲ್ಲಾ ಆಟಗಾರರಿಗೆ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರನ್ನು ನೀಡಿ ಗೌರವಿಸಲಾಗುವುದು ಎಂದು ಸೌದಿ ಅರೇಬಿಯಾದ ಕಿಂಗ್ ಮೊಹಮ್ಮದ್ ಬಿನ್ ಸಲಾಮ್ ಅಲ್ ಸೌದ್ ಘೋಷಿಸಿದ್ದಾರೆ. ಭಾರತದಲ್ಲಿ ಈ ಒಂದು ಕಾರಿನ ಬೆಲೆ ಸುಮಾರು 8 ಕೋಟಿಗಳಿಂದ 11 ಕೋಟಿಗಳವರೆಗೆ ಇದೆ. ಅಂದರೆ ವಿಶ್ವಕಪ್ ಗೆದ್ದರೂ ಗೆಲ್ಲದಿದ್ದರೂ ಸೌದಿ ಅರೇಬಿಯಾದ ಆಟಗಾರರು ಮಿಲಿಯನೇರ್ ಆಗುವುದು ಖಂಡಿತ.

ಅರಬ್ ನ್ಯೂಸ್ ಪ್ರಕಾರ, ಈ ಐತಿಹಾಸಿಕ ವಿಜಯದ ನಂತರ ಇಡೀ ಸೌದಿ ಅರೇಬಿಯಾಕ್ಕೆ ಒಂದು ದಿನ ರಜೆ ಘೋಷಣೆ ಮಾಡಲಾಗಿತ್ತು. ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ವಲಯದ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಈ ಗೆಲುವನ್ನು ಸಂಭ್ರಮಿಸುವ ಸಲುವಾಗಿ ಸೌದಿ ದೊರೆ ಈ ನಿರ್ಧಾರ ಪ್ರಕಟಿಸಿದ್ದರು.

ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾವನ್ನು ಈ ಬಾರಿ ವಿಶ್ವಕಪ್ ಗೆಲ್ಲುವ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಅಲ್ಲದೆ ಈ ವಿಶ್ವಕಪ್ ಲಿಯೋನೆಲ್ ಮೆಸ್ಸಿ ಅವರ ಕೊನೆಯ ವಿಶ್ವಕಪ್ ಆಗಲಿದೆ ಎಂಬ ಮಾತು ಕೇಳಿಬರುತ್ತಿರುವುದರಿಂದ ಮೆಸ್ಸಿ ತಂಡ ಶತಾಯಗತಾಯ ವಿಶ್ವಕಪ್ ಗೆಲ್ಲಲು ಹೋರಾಟ ನಡೆಸಲಿದೆ. ಆದರೆ ಮೊದಲ ಪಂದ್ಯದ ಸೋಲು ಈ ತಂಡದ ಸಂಕಷ್ಟವನ್ನು ಹೆಚ್ಚಿಸಿದೆ.

ಈ ಪಂದ್ಯದಲ್ಲಿ ಗೆಲ್ಲುವುದರೊಂದಿಗೆ ಸೌದಿ ಅರೇಬಿಯಾ, ಅರ್ಜೆಂಟೀನಾದ 36 ಪಂದ್ಯಗಳ ದಾಖಲೆಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿತ್ತು. ಈ 36 ಪಂದ್ಯಗಳಲ್ಲಿ ಅರ್ಜೆಂಟೀನಾ ತಂಡ 25 ಪಂದ್ಯಗಳನ್ನು ಗೆದ್ದಿದ್ದರೆ, 11 ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದರು. ವಿಶ್ವದ 51ನೇ ಶ್ರೇಯಾಂಕಿತ ತಂಡ ಸೌದಿ ಅರೇಬಿಯಾ ಈ ಮಹತ್ವದ ಗೆಲುವಿನೊಂದಿಗೆ ವಿಶ್ವಕಪ್ ಅಭಿಯಾನ ಆರಂಭಿಸಿದೆ.
Published On - 1:50 pm, Sat, 26 November 22