Updated on: Sep 08, 2021 | 2:57 PM
ಭಾರತೀಯ ಕ್ರಿಕೆಟಿಗ ಶಿಖರ್ ಧವನ್ ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಿರುವ ಸುದ್ದಿ ಈಗ ಎಲ್ಲೆಡೆ ಮುನ್ನೆಲೆಗೆ ಬಂದಿದೆ. ಇದನ್ನು ಅವರ ಪತ್ನಿ ಆಯೇಷಾ ಮುಖರ್ಜಿ ಅವರ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಹೇಳಲಾಗಿದೆ. ಪೋಸ್ಟ್‌ನಲ್ಲಿ, ಆಯೇಷಾ ತಾನು ಎರಡನೇ ಬಾರಿಗೆ ವಿಚ್ಛೇದನ ಪಡೆದಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದು ಯಾವಾಗ ಸಂಭವಿಸಿತು ಎಂಬುದರ ಬಗ್ಗೆ ಹೇಳಲಾಗಿಲ್ಲ. ಈ ವಿಚಾರದಲ್ಲಿ ಇದುವರೆಗೂ ಶಿಖರ್ ಧವನ್‌ನಿಂದ ಯಾವುದೇ ಹೇಳಿಕೆ ಬಂದಿಲ್ಲ. ಶಿಖರ್ ಧವನ್ ಮತ್ತು ಆಯೇಷಾ ಮುಖರ್ಜಿಯವರ ಪ್ರೇಮ ಕಥೆಗೆ ಇದು ಅತ್ಯಂತ ದುಃಖಕರವಾದ ಅಂತ್ಯ. 2012 ರಲ್ಲಿ ಇಬ್ಬರೂ ಮದುವೆಯಾದ ವೇಳೆ ಈ ವಿಚಾರ ಸಾಕಷ್ಟು ಚರ್ಚೆಯಾಗಿತ್ತು. ಇದು ಆಯೇಷಾಳ ಎರಡನೇ ವಿವಾಹವಾಗಿದ್ದು, ಶಿಖರ್ ಮೊದಲ ಬಾರಿಗೆ ವಿವಾಹವಾಗಿದ್ದರು. ಟೀಮ್ ಇಂಡಿಯಾದ ಗಬ್ಬರ್ ಎಂದು ಕರೆಯಲ್ಪಡುವ ಶಿಖರ್ ಧವನ್ ಆಯೇಷಾ ಮುಖರ್ಜಿಯನ್ನು ಹೇಗೆ ಭೇಟಿಯಾದರು ಮತ್ತು ಇಬ್ಬರು ನಡುವೆ ಹೇಗೆ ಪ್ರೇಮಾಂಕುರವಾಯಿತು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಹೀಗೆ ಟೀಮ್ ಇಂಡಿಯಾ ಆಟಗಾರನ ವೈವಾಹಿಕ ಜೀವನ ವಿಚ್ಚೇದನದೊಂದಿಗೆ ಅಂತ್ಯ ಎಂಬ ಸುದ್ದಿ ಬೆನ್ನಲ್ಲೇ, ಧವನ್-ಆಯೇಷಾ ಪ್ರೇಮಕಥೆ ಕೂಡ ಹರಿದಾಡುತ್ತಿದೆ. ಈ ಲವ್ ಸ್ಟೋರಿಯಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಧವನ್ ತನಗಿಂತ 10 ವರ್ಷ ಹಿರಿಯಳು ಹಾಗೂ ವಿಚ್ಛೇದಿತ ಮಹಿಳೆ ಆಯೇಷಾರನ್ನು ವಿವಾಹವಾಗಿದ್ದರು ಎಂಬ ವಿಚಾರ.
ಆಯೇಷಾ ಮುಖರ್ಜಿ ಶಿಖರ್ ಗಿಂತ 10 ವರ್ಷ ದೊಡ್ಡವರು. ಇಬ್ಬರೂ ಫೇಸ್ಬುಕ್ ಮೂಲಕ ಪರಸ್ಪರ ಪರಿಚತರಾದರು. ಧವನ್ ಮತ್ತು ಹರಭಜನ್ ಸಿಂಗ್ ಒಂದು ದಿನ ಒಟ್ಟಿಗೆ ಕುಳಿತಿದ್ದ ಸಮಯದಲ್ಲಿ, ಧವನ್ ಭಜ್ಜಿಯ ಫೇಸ್ಬುಕ್ ಖಾತೆಯಲ್ಲಿ ಆಯೇಷಾಳ ಫೋಟೋವನ್ನು ನೋಡಿದ್ದರಂತೆ. ಫೋಟೋ ನೋಡಿದ ನಂತರ, ಅವರು ಆಯೇಷಾಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದರಂತೆ. ನಂತರ ಇಬ್ಬರೂ ಫೇಸ್‌ಬುಕ್‌ನಲ್ಲಿ ಸ್ನೇಹಿತರಾಗಿ ಹೆಚ್ಚು ಆಪ್ತರಾದರು. ನಂತರ ಇಬ್ಬರಲ್ಲಿ ಪ್ರೀತಿ ಮೂಡಿತ್ತು.
2009 ರಲ್ಲಿ ಇಬ್ಬರ ಪ್ರೀತಿ ಮುನ್ನಲೆಗೆ ಬಂದಿತು. ಇದರ ನಂತರ ಶಿಖರ್ ಧವನ್ ಆಯೇಷಾರ ಬಳಿ ಮದುವೆ ಬಗ್ಗೆ ಪ್ರಸ್ತಾಪಿಸಿದರಂತೆ. ಆಯೇಷಾ ಇದಕ್ಕೆ ಒಪ್ಪಿಕೆ ಸೂಚಿಸಿದರಂತೆ. ಆದರೆ ಶಿಖರ್ ಕುಟುಂಬ ಈ ಸಂಬಂಧವನ್ನು ಒಪ್ಪಲಿಲ್ಲ. ಇದಕ್ಕೆ ಕಾರಣ ಆಯೇಷಾ ಶಿಖರಕ್ಕಿಂತ 10 ವರ್ಷ ದೊಡ್ಡವರೆಂಬುದು. ಜೊತೆಗೆ ಆಯೇಷಾ ವಿಚ್ಛೇದಿತ ಮತ್ತು ಇಬ್ಬರು ಹೆಣ್ಣು ಮಕ್ಕಳ ತಾಯಿ ಆಗಿರುವುದು. ಆದರೆ ಶಿಖರ್ ತನ್ನ ಕುಟುಂಬಕ್ಕೆ ಮನವರಿಕೆ ಮಾಡಿಕೊಟ್ಟು ಶಿಖರ್ ಮತ್ತು ಆಯೇಷಾ 2012 ರಲ್ಲಿ ವಿವಾಹವಾದರು. ಎರಡು ವರ್ಷಗಳ ನಂತರ, ಇಬ್ಬರಿಗೂ ಜೋರಾವರ್ ಎಂಬ ಮಗ ಹುಟ್ಟಿದನು.
ಮದುವೆಯ ನಂತರ, ಆಯೇಷಾ ತನ್ನ ಉಪನಾಮವನ್ನು ಮುಖರ್ಜಿಯಿಂದ ಧವನ್ ಎಂದು ಬದಲಾಯಿಸಿಕೊಂಡರು. ಆಕೆಯ ಮೊದಲ ಮದುವೆ ಆಸ್ಟ್ರೇಲಿಯಾದ ಉದ್ಯಮಿಯೊಂದಿಗೆ ನಡೆದಿತ್ತು. ಈ ಮದುವೆಯಿಂದ ಅವರಿಗೆ ರಿಯಾ ಮತ್ತು ಆಲಿಯಾ ಎಂಬ ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದರು. ಮದುವೆಯ ನಂತರ, ಧವನ್ ಇಬ್ಬರನ್ನೂ ದತ್ತು ತೆಗೆದುಕೊಂಡರು. ಶಿಖರ್ ಅವರ ಇಬ್ಬರು ಹೆಣ್ಣು ಮಕ್ಕಳು ಆಸ್ಟ್ರೇಲಿಯಾದಲ್ಲಿ ಓದುತ್ತಿದ್ದಾರೆ. ವಿವಾಹದ ನಂತರ, ಟೀಮ್ ಇಂಡಿಯಾ ಜೊತೆಗೆ ಐಪಿಎಲ್ ಪಂದ್ಯಗಳ ವೇಳೆ ಆಯೇಷಾ ಶಿಖರ್ ಅವರನ್ನು ಹುರಿದುಂಬಿಸುತ್ತಿದ್ದರು.
ಭಾರತದಲ್ಲಿ ಕ್ರಿಕೆಟಿಗರಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಹೀಗಾಗಿಯೇ ಮೈದಾನದಲ್ಲಿ ಆಡುವುದರಿಂದ ಹಿಡಿದು ಮೈದಾನದ ಹೊರಗಿನ ಅವರ ವೈಯಕ್ತಿಕ ಜೀವನ ಕೂಡ ಚರ್ಚೆಯ ವಿಷಯವಾಗುತ್ತದೆ. ಇದೀಗ ಟೀಮ್ ಇಂಡಿಯಾ ಆಟಗಾರ ಶಿಖರ್ ಧವನ್ ಡಿವೋರ್ಸ್ ವಿಚಾರ ಮುನ್ನೆಲೆಗೆ ಬಂದಿದೆ.