ಶ್ರಾವಣ ಮಾಸ ಬಂದರೆ ಸಾಕು ಹಬ್ಬಗಳ ಸರಮಾಲೆಯೇ ಶುರುವಾಗುತ್ತದೆ. ಈ ಮಾಸದ ಮೊದಲ ಹಬ್ಬ ನಾಗರ ಪಂಚಮಿ. ಈ ಹಬ್ಬವನ್ನು ಧಾರವಾಡದಲ್ಲಿ ವಿಭಿನ್ನವಾಗಿ ಆಚರಿಸುವ ಮೂಲಕ ಮಹಿಳೆಯರು ಸಂಭ್ರಮಿಸಿದರು. ಸಂಭ್ರಮ, ಸಡಗರದ ಒಂದು ಝಲಕ್ ಇಲ್ಲಿದೆ ನೋಡಿ.
ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯರು, ಮಕ್ಕಳು ತರಹೇವಾರಿ ಉಂಡಿ, ಚಕ್ಕುಲಿ. ಧಾರವಾಡದಲ್ಲಿ ಶ್ರಾವಣ ಮಾಸವನ್ನು ವಿಶೇಷವಾಗಿ ಸ್ವಾಗತಿಸಿದ ಬಗೆ ಇದು.
ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಗೆ ತನ್ನದೇ ಆದ ವಿಶೇಷತೆ ಇದೆ. ದೇವಸ್ಥಾನದಲ್ಲಿರುವ ನಾಗ ಮೂರ್ತಿಗೆ ಹಾಲು ಎರೆಯುವ ಮೂಲಕ ಈ ಹಬ್ಬವನ್ನು ಆಚರಿಸಲಾಗುತ್ತೆ. ಎಲ್ಲರೂ ಅಂದು ತುಂಬಾನೇ ಬಿಜಿಯಾಗಿರೋದ್ರಿಂದ ಅದಕ್ಕೂ ಒಂದು ದಿನ ಮುಂಚೆಯೇ ಧಾರವಾಡದಲ್ಲಿ ಮಹಿಳೆಯರು ಈ ಹಬ್ಬವನ್ನು ವಿಭಿನ್ನವಾಗಿ ಆಚರಿಸಿದರು.
ಧಾರವಾಡದ ಲಕಮನಹಳ್ಳಿ ಪ್ರದೇಶದಲ್ಲಿರುವ ಪ್ರಸಿದ್ಧ ಸೋಮೇಶ್ವರ ದೇವಸ್ಥಾನದಲ್ಲಿ ನಡೆದ ಈ ಸಂಭ್ರಮದ ಹಬ್ಬದಾಚರಣೆ ವೇಳೆ ಮನೆಯಲ್ಲಿ ತಯಾರಿಸಿ ತಂದಿದ್ದ ಬಗೆ ಬಗೆಯ ಉಂಡಿಗಳನ್ನೂ ಮಹಿಳೆಯರು ಮತ್ತು ಮಕ್ಕಳು ಸವಿದರು. ನಗರದ ನೃತ್ಯ ದಿ ಡ್ಯಾನ್ಸ್ ಅಕಾಡೆಮಿ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ನಾಗರ ಪಂಚಮಿ ನಾರಿಯರ ಹಬ್ಬ. ಆದರೆ, ಇತ್ತೀಚಿನ ಯುವ ಪೀಳಿಗೆ ಯಾವ ಹಬ್ಬಗಳನ್ನು ಸಾಂಪ್ರದಾಯಿಕವಾಗಿ ಆಚರಿಸದೇ ನೆಪಕ್ಕೆ ಆಚರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಪೀಳಿಗೆಗೆ ಹಬ್ಬದ ಮಹತ್ವ ತಿಳಿಸಲು ಮಹಿಳೆಯರು ಮಕ್ಕಳೊಂದಿಗೆ ಸೋಮೇಶ್ವರ ದೇವಸ್ಥಾನಕ್ಕೆ ಬಂದು ಆವರಣದಲ್ಲಿ ಬಂದು ಹಬ್ಬದಾಚರಣೆ ಮಾಡಿದರು. ಆ ಮೂಲಕ ಮಕ್ಕಳಿಗೆ ಹಬ್ಬದ ಆಚರಣೆಗಳನ್ನು ತಿಳಿಸಿಕೊಟ್ಟರು.
ಕೇವಲ ಪಂಚಮಿ ಮಾತ್ರವಲ್ಲದೇ ನಮ್ಮ ಹಬ್ಬಗಳನ್ನು ಏಕೆ ಮಾಡಬೇಕು ಅನ್ನೋದ ಬಗ್ಗೆಯೂ ಚರ್ಚೆ ನಡೆಸಲಾಯಿತು. ಬಳಿಕ ಎಲ್ಲರೂ ಒಂದೇ ಕುಟುಂಬದ ಸದಸ್ಯರಾಗಿ ಊಟ, ಮಾಡಿ ಸಂಭ್ರಮಿಸಿದರು.
ಇದೇ ವೇಳೆ ಕ್ಯಾಟ್ ವಾಕ್ ಮಾಡುವ ಮೂಲಕವೂ ಮಹಿಳೆಯರು ಗಮನ ಸೆಳೆದರು. ಬಳಿಕ ಕೆಲವು ಮಹಿಳೆಯರು ನಾಗರ ಪಂಚಮಿಯ ಜಾನಪದ ಹಾಡುಗಳನ್ನು ಹಾಡಿದರೆ ಮತ್ತೆ ಕೆಲವರು ಬಾಲಿವುಡ್ ಹಾಡುಗಳಿಗೆ ಸ್ಟೆಪ್ ಹಾಕಿ ಸಂಭ್ರಮಿಸಿದರು. ಒಟ್ಟಿನಲ್ಲಿ ಶ್ರಾವಣ ಮಾಸದ ಮೊದಲ ಹಬ್ಬ ಧಾರವಾಡದಲ್ಲಿ ಸಂಭ್ರಮವನ್ನು ಮೂಡಿಸಿದ್ದಂತೂ ಸತ್ಯ.