ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಬೆಂಗಳೂರು ಬಿಟ್ಟು ಎಲ್ಲಿ ಹೋಗದೇ ವಿಶ್ರಾಂತಿಯಲ್ಲಿದ್ದಾರೆ. ಆದರೂ ಅನಿವಾರ್ಯವಾಗಿ ಕೆಲ ಪ್ರಮುಖ ಕಾರ್ಯಕ್ರಮಗಳಲ್ಲಿ ಮಾತ್ರ ಭಾಗವಹಿಸುತ್ತಿದ್ದಾರೆ. ಅದು ವ್ಹೀಲ್ ಚೇರ್ ಮೂಲಕ.
ಮಂಡಿ ನೋವಿನಿಂದ ಬಳಲುತ್ತಿರುವ ಸಿದ್ದರಾಮಯ್ಯನವರಿಗೆ ವೈದ್ಯರು ವಿಶ್ರಾಂತಿ ಹೇಳಿದ್ದಾರೆ. ಆದ್ರೆ, ಆಡಳಿತ, ಕಚೇರಿ,ಕಾರ್ಯಕ್ರಮ ಸೇರಿದಂತೆ ಎಲ್ಲವನ್ನು ಸಿದ್ದರಾಮಯ್ಯ ನಿಭಾಯಿಸಬೇಕಿದೆ. ಪ್ರತಿ ದಿನ ಕಚೇರಿಗೆ ತೆರಳಲು ಕಾರಿನಲ್ಲಿ ಪ್ರಯಾಣ, ಹತ್ತಿ ಇಳಿಯುವುದು ಸಿದ್ದರಾಮಯ್ಯಗೆ ಸವಾಲಾಗುತ್ತಿದೆ. ಇದರಿಂದ ಇದೀಗ ಸಿಎಂ ಸಿದ್ದರಾಮಯ್ಯನವರು ಕಾರನ್ನೇ ಬದಲಾವಣೆ ಮಾಡಿದ್ದಾರೆ.
ಮಂಡಿ ನೋವಿನ ಕಾರಣ ಸಿದ್ದರಾಮಯ್ಯಗೆ ಫಾರ್ಚುನರ್ ಕಾರು ಹತ್ತಿ ಇಳಿಯಲು ಬಹಳ ಕಷ್ಟವಾಗಿದೆ. ಹೀಗಾಗಿ ಸರ್ಕಾರದ ಫಾರ್ಚುನರ್ ಕಾರು ಬಿಟ್ಟು ಬೇರೆ ಖಾಸಗಿ ಕಾರು ಉಪಯೋಗಿಸುತ್ತಿದ್ದಾರೆ. ಸುಲಭವಾಗಿ ಹತ್ತಿ ಇಳಿಯಲು ಹಾಗೂ ಆರಾಮದಾಯಕ ಪ್ರಯಾಣಕ್ಕೆ ಸಿದ್ದರಾಮಯ್ಯ ಟೊಯೋಟಾ ವೆಲ್‌ಫೈರ್ ಕಾರು ಉಪಯೋಗಿಸುತ್ತಿದ್ದು, ಇದೇ ಕಾರಿನಲ್ಲಿ ಇಂದು ವಿಧಾನಸೌಧಕ್ಕೆ ಆಗಮಿಸಿದ್ದಾರೆ.
ಇಂದುನ(ಫೆಬ್ರವರಿ 18) ಸಿಎಂ ಸಿದ್ದರಾಮಯ್ಯನವರು ಸರ್ಕಾರದ ಫಾರ್ಚುನರ್ ಕಾರು ಬಿಟ್ಟು ಖಾಸಗಿ ಟೊಯೋಟಾ ಕಂಪನಿಯ ವೆಲ್‌ಫೈರ್ ಕಾರಿನ ಮೂಲಕ ವಿಧಾನಸೌಧಕ್ಕೆ ಆಗಮಿಸಿದ್ದಾರೆ. ಟೊಯೋಟಾ ವೆಲ್‌ಫೈರ್ ಕಾರು ಹೆಚ್ಚಿನ ಸ್ಥಳವಕಾಶ ಒದಗಿಸುತ್ತದೆ. ಇನ್ನು ಈ ಕಾರಿನಲ್ಲಿ ಹತ್ತಿ ಇಳಿಯುವುದು ಸುಲಭ ಹಾಗೂ ಪ್ರಯಾಣ ಕೂಡ ಅಷ್ಟೇ ಆನಂದದಾಯಕ. ಹೀಗಾಗಿ ಸಿದ್ದರಾಮಯ್ಯ ಟೊಯೋಟಾ ವೆಲ್‌ಫೈರ್ ಕಾರು ಉಪಯೋಗಿಸುತ್ತಿದ್ದಾರೆ.
ಈ ಟೊಯಟಾ ವೆಲ್‌ಫೈರ್ ಕಾರಿನ ಆನ್ ರೋಡ್ ಬೆಲೆ 1.2 ಕೋಟಿಯಿಂದ 1.3 ಕೋಟಿ ರೂಪಾಯಿ. 2487 cc ಎಂಜಿನ್ ಹೊಂದಿರುವ ಈ ಕಾರು 240Nm ಟಾರ್ಕ್ ಹಾಗೂ 190.42bhp ಮ್ಯಾಕ್ಸ್ ಪವರ್ ನೀಡಲಿದೆ. 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಕಾರು ಒಂದು ಲೀಟರ್‌ಗೆ 16 ಕಿ.ಮೀ ಮೈಲೇಜ್ ನೀಡಲಿದೆ. 148 ಲೀಟರ್ ಬೂಟ್ ಸ್ಪೇಸ್ ಹೊಂದಿದೆ.
ಈ ಟೊಯೋಟಾ ವೆಲ್‌ಫೈರ್ ಕಾರು ರಾಜಕಾರಣಿಗಳು, ಸೆಲೆಬ್ರೆಟಿಗಳು, ಉದ್ಯಮಿಗಳು ಬಳಸುತ್ತಾರೆ. ಈ ಕಾರಿನ ಒಳಗೆ ಲಾಂಜ್ ರೀತಿಯ ಸ್ಥಳವಕಾಶವಿದೆ. ವಿಶೇಷ ಅಂದರೆ ಮೊದಲ ಸಾಲು ಮಾತ್ರವಲ್ಲ, ಎರಡನೇ ಸಾಲು ಸೀಟುಗಳಲ್ಲಿ ಕುಳಿತುಕೊಂಡರೂ ಅಷ್ಟೇ ಆರಾಮದಾಯಕವಾಗಿರಲಿದೆ.
ಬೆನ್ನು, ಕತ್ತು, ಕಾಲುಗಳಿಗೆ ಉತ್ತಮ ಸಪೂರ್ಟ್ ಈ ಕಾರಿನಲ್ಲಿದೆ. ಕೈಗಳನ್ನು ಇಡಲು ಆರ್ಮ್‌ರೆಸ್ಟ್, ವಿಐಪಿ ಸ್ಪಾಟ್‌ಲೈಟ್, ಸೀಟುಗಳನ್ನು ಬೇಕಾದ ರೀತಿಯಲ್ಲಿ ಹೊಂದಿಸಲು ರಿಮೂಟ್ ಕಂಟ್ರೋಲ್ ಸಿಸ್ಟಮ್, ಪ್ರಯಾಣಿಕರಿಗೆ ಪ್ರತ್ಯೇಕ ಸ್ಕ್ರೀನ್, ಲಗೇಜ್ ಇಡಲು ಹೆಚ್ಚುವರಿ ಬೂಟ್ ಸ್ಪೇಸ್ ಸೇರಿದಂತೆ ಹಲವು ವಿಶೇಷತೆಗಳನ್ನು ಈ ವೆಲ್‌ಫೈರ್ ಕಾರು ಹೊಂದಿದೆ.
ಆಟೋಮ್ಯಾಟಿಕ್ ಕ್ಲೈಮ್ಯಾಟ್ ಕಂಟ್ರೋಲ್, ಡ್ರೈವರ್, ಪ್ಯಾಸೆಂಜರ್ ಸೇರಿದಂತೆ ಸಂಪೂರ್ಣ ಏರ್‌ಬ್ಯಾಗ್, ಎಬಿಎಸ್, ಇಬಿಡಿ ಸೇರಿದಂತೆ ಹೆಚ್ಚಿನ ಸುರಕ್ಷತಾ ಫೀಚರ್ಸ್, ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್ ಸೇರಿದಂತೆ ಅತ್ಯಾಧುನಿಕ ಫೀಚರ್ಸ್ ಈ ಕಾರಿನಲ್ಲಿದೆ.
ಸಿದ್ದರಾಮಯ್ಯನವರು ಸದ್ಯ ಸರ್ಕಾರದ ಫಾರ್ಚುನರ್ ಕಾರು ಬಿಟ್ಟು ಖಾಸಗಿ ವೆಲ್‌ಪೈರ್ ಕಾರು ಹತ್ತಿದ್ದು, ಇದನ್ನು ಹೊಸದಾಗಿ ಖರೀದಿಸಿದ್ದಾರೋ ಇಲ್ವೋ ಎನ್ನುವುದು ಮಾತ್ರ ಗೊತ್ತಾಗಿಲ್ಲ. ಇನ್ನು ಮುಂದೆ ಇದೇ ಕಾರನ್ನೇ ಉಪಯೋಗಿಸುತ್ತಾರೋ ಅಥವಾ ಮಂಡಿ ನೋವು ಕಡಿಮೆಯಾದ ಬಳಿಕ ಸರ್ಕಾರದ ಫಾರ್ಚುನರ್ ಕಾರು ಬಳಸುತ್ತಾರೋ ಕಾದು ನೋಡಬೇಕಿದೆ.
Published On - 7:43 pm, Tue, 18 February 25