
ಡೌನ್ ಸಿಂಡ್ರಾಮ್ ಮತ್ತು ಆಟಿಸಂ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗಾಗಿ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ‘ವೀರೇಶ್’ ಚಿತ್ರಮಂದಿರದಲ್ಲಿ ‘ಸಿತಾರೆ ಜಮೀನ್ ಪರ್’ ಸಿನಿಮಾದ ಉಚಿತ ಪ್ರದರ್ಶನವನ್ನು ಮಂಗಳವಾರ (ಜೂನ್ 24) ಆಯೋಜಿಸಲಾಗಿತ್ತು.

ಹಿಂದಿ ಭಾಷೆಯ ಈ ಸಿನಿಮಾದಲ್ಲಿ ಆಮಿರ್ ಖಾನ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ವಿಶೇಷ ಚೇತನ ವ್ಯಕ್ತಿಗಳ ಕುರಿತು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಹಾಗಾಗಿ ಇಂಥ ಮಕ್ಕಳಿಗೆ ಉಚಿತವಾಗಿ ಈ ಚಿತ್ರವನ್ನು ಪ್ರದರ್ಶನ ಮಾಡಲಾಯಿತು.

‘ವಿಶೇಷ ಚೇತನ ಮಕ್ಕಳ ಮನಸ್ಸಿನಲ್ಲಿ ಈ ಸಿನಿಮಾ ಭರವಸೆ ಮೂಡಿಸುವಂತಿದೆ. ಆದ್ದರಿಂದ ಉಚಿತವಾಗಿ ಪ್ರದರ್ಶಿಸಲಾಯಿತು’ ಎಂದು ವಿರೇಶ್ ಚಿತ್ರಮಂದಿರದ ಮಾಲೀಕ ಕುಶಾಲ್ ಎಲ್.ಸಿ. ಹಾಗೂ ಆಯೋಜಕ ಬಿ.ಹೆಚ್. ಉಲ್ಲಾಸ್ ಗೌಡ ತಿಳಿಸಿದ್ದಾರೆ.

‘ಸಿತಾರೆ ಜಮೀನ್ ಪರ್’ ಸಿನಿಮಾದ ವಿಶೇಷ ಪ್ರದರ್ಶನದ ವೇಳೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ.ಮಾ. ಹರೀಶ್ ಸೇರಿದಂತೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಹಾಜರಿದ್ದು, ಪ್ರೋತ್ಸಾಹ ನೀಡಿದರು.

ಈ ಸಿನಿಮಾಗೆ ಆರ್.ಎಸ್. ಪ್ರಸನ್ನ ಅವರು ನಿರ್ದೇಶನ ಮಾಡಿದ್ದಾರೆ. ಆಮಿರ್ ಖಾನ್ ಜೊತೆ ಜೆನಿಲಿಯಾ ದೇಶಮುಖ್ ಕೂಡ ನಟಿಸಿದ್ದಾರೆ. ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ಸಿನಿಮಾ ನೋಡಿ ಹೊಗಳಿದರು.