
1971ರಲ್ಲಿ ‘ವಂಶವೃಕ್ಷ’ ಸಿನಿಮಾ ಬಿಡುಗಡೆ ಆಯಿತು. ಎಸ್ಎಲ್ ಭೈರಪ್ಪ ಅವರು ಬರೆದ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿ ಆ ಸಿನಿಮಾ ಸಿದ್ಧವಾಗಿತ್ತು. ವಿಷ್ಣುವರ್ಧನ್ ಅವರು ನಟಿಸಿದ್ದ ಆ ಚಿತ್ರವನ್ನು ಬಿ.ವಿ. ಕಾರಂತ್ ಮತ್ತು ಗಿರೀಶ್ ಕಾರ್ನಾಡ್ ಅವರು ನಿರ್ದೇಶನ ಮಾಡಿದ್ದರು.

‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಯನ್ನು ಆಧರಿಸಿ ಅದೇ ಹೆಸರಿನಲ್ಲಿ ಸಿನಿಮಾ ಮೂಡಿಬಂತು. ಆ ಚಿತ್ರ 1977ರಲ್ಲಿ ಬಿಡುಗಡೆ ಆಯಿತು. ಗಿರೀಶ್ ಕಾರ್ನಾಡ್ ಹಾಗೂ ಬಿ.ವಿ. ಕಾರಂತ್ ಅವರು ನಿರ್ದೇಶನ ಮಾಡಿದ್ದರು. ಬಾಲಿವುಡ್ ನಟ ನಸೀರುದ್ಧೀನ್ ಶಾ ಅವರು ಅಭಿನಯಿಸಿದ್ದರು.

ಟಿಎನ್ ಸೀತಾರಾಮ್ ಅವರು ‘ಮತದಾನ’ ಸಿನಿಮಾಗೆ ನಿರ್ದೇಶನ ಮಾಡಿದ್ದರು. ಭೈರಪ್ಪ ಅವರು ಬರೆದ ‘ಮತದಾನ’ ಕಾದಂಬರಿ ಆಧರಿಸಿ ಆ ಸಿನಿಮಾ ಸಿದ್ಧವಾಯಿತು. 2001ರಲ್ಲಿ ತೆರೆಕಂಡ ಆ ಚಿತ್ರದಲ್ಲಿ ಅನಂತ್ ನಾಗ್, ತಾರಾ, ದೇವರಾಜ್ ಮುಖ್ಯ ಭೂಮಿಕೆ ನಿಭಾಯಿಸಿದ್ದರು.

ಎಸ್ಎಲ್ ಭೈರಪ್ಪ ಅವರು ಬರೆದ ‘ನಾಯಿ ನೆರಳು’ ಕಾದಂಬರಿಯನ್ನು ಆಧರಿಸಿ ಅದೇ ಶೀರ್ಷಿಕೆಯಲ್ಲಿ ಗಿರೀಶ್ ಕಾಸರವಳ್ಳಿ ಅವರು ಸಿನಿಮಾ ನಿರ್ದೇಶನ ಮಾಡಿದರು. ಪವಿತ್ರಾ ಲೋಕೇಶ್ ಅವರು ಪ್ರಮುಖ ಪಾತ್ರ ಮಾಡಿದ್ದರು. 2006ರಲ್ಲಿ ‘ನಾಯಿ ನೆರಳು’ ಸಿನಿಮಾ ತೆರೆಕಂಡಿತು.

‘ಗೃಹಭಂಗ’, ‘ದಾಟು’ ಕಾದಂಬರಿಗಳನ್ನು ಆಧರಿಸಿ ಟಿವಿ ಸೀರಿಯಲ್ ಮಾಡಲಾಯಿತು. ಅಲ್ಲದೇ, ಎಸ್ಎಲ್ ಭೈರಪ್ಪ ಅವರು ಬರೆದ ‘ಪರ್ವ’ ಕಾದಂಬರಿಯನ್ನು ಆಧರಿಸಿ ಪ್ರಕಾಶ್ ಬೆಳವಾಡಿ ನಾಟಕ ನಿರ್ದೇಶಿಸಿದರು. ಈ ನಾಟಕ ಹಲವಾರು ಬಾರಿ ಯಶಸ್ವಿ ಪ್ರದರ್ಶನಗಳನ್ನು ಕಂಡಿದೆ.