
ಬೇಸಿಗೆಯ ಸಮಯದಲ್ಲಿ ಬಿಸಿಲಿನ ಶಾಖದ ಹೊಡೆತ ಜೋರಾಗಿರುತ್ತದೆ. ಇದರಿಂದ ‘ಹೀಟ್ ಸ್ಟ್ರೋಕ್’ ಉಂಟಾಗಬಹುದು. ಇದರರ್ಥ ಬಿಸಿಲಿನ ಹೊಡೆತದಿಂದ ನಿಮಗೆ ಎದ್ದು ನಿಂತಾಗ ಹಗುರವಾದ ಭಾವನೆಯಾಗುತ್ತದೆ, ದೇಹ ನಿರ್ಜಲೀಕರಣವಾಗುತ್ತದೆ. ಇದರ ಇತರ ಲಕ್ಷಣಗಳೆಂದರೆ ಒಣಗಿದ ತುಟಿಗಳು ಮತ್ತು ನಾಲಿಗೆ, ತಲೆನೋವು, ಅತಿಯಾದ ಆಯಾಸ, ವಾಕರಿಕೆ ಮತ್ತು ಸ್ನಾಯುವಿನ ಸೆಳೆತ ಇತ್ಯಾದಿಗಳು. ಇದರಿಂದ ಪಾರಾಗಲು ನಾವು ಉತ್ತಮ ಆಹಾರದ ಮೊರೆ ಹೋಗಬಹುದು. ಅವು ಯಾವೆಲ್ಲಾ? ಇಲ್ಲಿದೆ ಮಾಹಿತಿ.

ಮಜ್ಜಿಗೆ: ಬೇಸಿಗೆಯಲ್ಲಿ ದೇಹಕ್ಕೆ ಮಜ್ಜಿಗೆ ಚೈತನ್ಯವನ್ನು ನೀಡುತ್ತದೆ. ಇದು ಕೇವಲ ಬಾಯಾರಿಕೆಯನ್ನು ನೀಗಿಸುವುದಿಲ್ಲ. ಅದರ ಜತೆಗೆ ದೇಹವನ್ನು ತಂಪಾಗಿರಿಸುತ್ತದೆ. ಶಾಖದಿಂದ ದೇಹವು ನಿರ್ಜಲೀಕರಣವಾಗುವುದನ್ನು ತಪ್ಪಿಸಲು ಮಜ್ಜಿಗೆ ಕುಡಿಯಿರಿ. ಸಕ್ಕರೆ ಹೊಂದಿರುವ ಪಾನೀಯಗಳು, ಸೋಡಾಗಳಿಗಿಂತ ಮಜ್ಜಿಗೆ ಅತ್ಯುತ್ತಮ ಎನ್ನುವುದನ್ನು ಮರೆಯದಿರಿ.

ಹಣ್ಣುಗಳು ಮತ್ತು ತರಕಾರಿಗಳು: ಮಾವು ಮತ್ತು ಕಲ್ಲಂಗಡಿಗಳಲ್ಲಿ ನಾರಿನಂಶ ಹೆಚ್ಚಿದ್ದು, ಸಕ್ಕರೆ ಅಂಶ ಕಡಿಮೆಯಿರುತ್ತದೆ. ಹಾಗೆಯೇ ನೀರಿನಂಶ ಹೆಚ್ಚಾಗಿರುತ್ತದೆ. ಊಟಕ್ಕೂ ಮುನ್ನ ಈ ಹಣ್ಣುಗಳನ್ನು ಸೇವಿಸುವುದು ಉತ್ತಮ. ಪಪ್ಪಾಯಿಯು ಒಟ್ಟಾರೆ ಜೀರ್ಣಕ್ರಿಯೆಗೆ ಸಹಾಯಕವಾಗಿದೆ. ಸೌತೆಕಾಯಿ ಸಲಾಡ್ ಮೊದಲಾದವುಗಳು ಕೂಡ ಉತ್ತಮ ಆಯ್ಕೆ. ಸೀತಾಫಲವು ನಿಮ್ಮ ದೇಹವನ್ನು ಹೈಡ್ರೇಟೆಡ್ ಆಗಿಡುವ ಮತ್ತೊಂದು ಹಣ್ಣು. ಹಾಗೆಯೇ ವಿಟಮಿನ್ ಎ, ಡಿ, ಬಿ-6, ಕಬ್ಬಿಣ, ಮೆಗ್ನೀಸಿಯಮ್ ಮತ್ತು ನಾರುಗಳಂತಹ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವ ಕಲ್ಲಂಗಡಿಯು ಮಲಬದ್ಧತೆಯಂತಹ ಕಾಯಿಲೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹೀಗಾಗಿ ಬೇಸಿಗೆಗೆ ತಕ್ಕುದಾದ ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ.

ಮಿಲ್ಕ್ಶೇಕ್: ಹಣ್ಣುಗಳಿಂದ ತಯಾರಿಸಿದ ಮಿಲ್ಕ್ಶೇಕ್ಗಳು ಹಾಗೂ ಮೊಸರಿನಿಂದ ತಯಾರಿಸಿದ ಸ್ಮೂಥಿಗಳು ಕೂಡ ಬೇಸಿಗೆಗೆ ಉತ್ತಮ ಆಯ್ಕೆ.

ಸಾಕಷ್ಟು ನೀರು ಕುಡಿಯಿರಿ: ಸಾಕಷ್ಟು ನೀರು ಮತ್ತು ಎಳನೀರಿನಂತಹ ನೈಸರ್ಗಿಕ ಪೇಯಗಳನ್ನು ಕುಡಿಯುವುದು ನಿಮ್ಮ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಒಂದು ವೇಳೆ ದೇಹಕ್ಕೆ ನಿರ್ಜಲೀಕರಣದ ಸಮಸ್ಯೆಯಾದರೆ ಅದು ಚರ್ಮದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಹೆಚ್ಚು ನೀರು ಕುಡಿಯಿರಿ.