Teachers Day: ಶಿಕ್ಷಕರ ದಿನಾಚರಣೆಯ ಹಿನ್ನೆಲೆ, ಇತಿಹಾಸ, ಪ್ರಾಮುಖ್ಯತೆ ಗೊತ್ತೇ? ಇಲ್ಲಿದೆ ವಿವರ
TV9 Web | Updated By: preethi shettigar
Updated on:
Sep 05, 2021 | 7:21 AM
Teachers Day 2021: ಇದು ಶಿಕ್ಷಕ, ವಿದ್ವಾಂಸ ಮತ್ತು ತತ್ವಜ್ಞಾನಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ. ರಾಧಾಕೃಷ್ಣನ್ ಜನ್ಮದಿನವನ್ನು ಶಿಕ್ಷಕರ ದಿನ ಎಂದು ದೇಶದ ಎಲ್ಲೆಡೆ ಆಚರಿಸಲಾಗುತ್ತದೆ. ಇನ್ನಷ್ಟು ಕುತೂಹಲಕಾರಿ ಮಾಹಿತಿ ಇಲ್ಲಿದೆ.
1 / 5
ಶಿಕ್ಷಕರು ಯಾವತ್ತೂ ನಮಗೆ ಮಾರ್ಗದರ್ಶನ ಮಾಡುವವರು. ನಮಗೆ ಸ್ಫೂರ್ತಿ ತುಂಬಿ ನಮ್ಮನ್ನು ಸಮಾಜದ ಉತ್ತಮ ನಾಗರಿಕರನ್ನಾಗಿ ರೂಪಿಸುವವರು. ಶಿಕ್ಷಕರು ನಮ್ಮ ಜೀವನದ ಭದ್ರ ಬುನಾದಿ ಹಾಕಿಕೊಡುವವರು. ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು ಎಂಬ ಮಾತೊಂದಿದೆ. ಆ ಬಳಿಕದ ಸ್ಥಾನ ಶಾಲೆಯಲ್ಲಿ ಪಾಠ ಕಲಿಸುವ ಗುರುವಿಗೆ ಸಲ್ಲುತ್ತದೆ. ಶಿಕ್ಷಕರ ದಿನಾಚರಣೆಯನ್ನು ಪ್ರತಿ ವರ್ಷ ಸಪ್ಟೆಂಬರ್ 5 ರಂದು ಆಚರಿಸಲಾಗುತ್ತದೆ. ಇದು ಶಿಕ್ಷಕರಿಗೆ ಗೌರವ, ಅಭಿನಂದನೆ, ಶುಭಹಾರೈಕೆ ಹೇಳುವ ದಿನ. ಇದು ಶಿಕ್ಷಕ, ವಿದ್ವಾಂಸ ಮತ್ತು ತತ್ವಜ್ಞಾನಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ. ರಾಧಾಕೃಷ್ಣನ್ ಅವರು ದೇಶದ ಮೊದಲ ಉಪ ರಾಷ್ಟ್ರಪತಿ ಹಾಗೂ ಎರಡನೇ ರಾಷ್ಟ್ರಪತಿಯೂ ಹೌದು. ರಾಧಾಕೃಷ್ಣನ್ ಜನ್ಮದಿನವನ್ನು ಶಿಕ್ಷಕರ ದಿನ ಎಂದು ದೇಶದ ಎಲ್ಲೆಡೆ ಆಚರಿಸಲಾಗುತ್ತದೆ.
2 / 5
1962 ರಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಭಾರತದ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿದರು. ಅವರ ಕೆಲ ವಿದ್ಯಾರ್ಥಿಗಳು ಹಾಗೂ ಗೆಳೆಯರು ಅವರನ್ನು ಭೇಟಿಯಾಗಿ ಅವರ ಹುಟ್ಟುಹಬ್ಬವನ್ನು ಆಚರಿಸಲು ಅನುಮತಿ ಕೇಳಿದರಂತೆ. ಆದರೆ, ಅವರು ಸಪ್ಟೆಂಬರ್ 5ನ್ನು ಹುಟ್ಟುಹಬ್ಬ ಎಂದು ಆಚರಿಸುವ ಬದಲು ಶಿಕ್ಷಕರ ದಿನ ಎಂದು ಆಚರಿಸಿದರೆ ಹೆಚ್ಚು ಸಂತೋಷ ಎಂದು ಪ್ರತಿಕ್ರಿಯಿಸಿದರಂತೆ. ಆ ಬಳಿಕ, ಸಪ್ಟೆಂಬರ್ 5ನ್ನು ಶಿಕ್ಷಕರ ದಿನ ಎಂದು ಆಚರಣೆ ಮಾಡಲಾಗುತ್ತಿದೆ. ಸರ್ವಪಲ್ಲಿ ರಾಧಾಕೃಷ್ಣನ್ ಸಪ್ಟೆಂಬರ್ 5, 1888 ರಂದು ತಮಿಳುನಾಡಿನ ತಿರುಮಾಣಿ ಹಳ್ಳಿಯ ಬ್ರಾಹ್ಮಣ ಕುಟುಂಬ ಒಂದರಲ್ಲಿ ಜನಿಸಿದರು. ಅವರು ಬಾಲ್ಯದಲ್ಲೇ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದರು. ಹಾಗೂ ಸ್ವಾಮಿ ವಿವೇಕಾನಂದರಿಂದ ಸ್ಫೂರ್ತಿ ಪಡೆದಿದ್ದರು. ರಾಧಾಕೃಷ್ಣನ್ 1975 ಏಪ್ರಿಲ್ 17 ರಂದು ಚೆನ್ನೈನಲ್ಲಿ ನಿಧನ ಹೊಂದಿದರು.
3 / 5
ಶಿಕ್ಷಕರ ದಿನಕ್ಕೆ ವಿಶೇಷ ಗೌರವ ಇದೆ. ಈ ದಿನದಂದು ಎಲ್ಲಾ ಶಿಕ್ಷಣ ವಿಭಾಗದ, ಎಲ್ಲಾ ಶೈಕ್ಷಣಿಕ ಹಂತದ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಗೌರವ ಸಲ್ಲಿಸುತ್ತಾರೆ. ಸಮಾಜದ ಬೆಳವಣಿಗೆಯಲ್ಲಿ ಶ್ರಮಿಸುವ ಶಿಕ್ಷಕ ವರ್ಗಕ್ಕೆ ಶುಭ ಹಾರೈಸಲಾಗುತ್ತದೆ.
4 / 5
ಶಿಕ್ಷಕರ ದಿನದಂದು ಆಯ್ದ ಶಿಕ್ಷಕರಿಗೆ ರಾಷ್ಟ್ರೀಯ ಪುರಸ್ಕಾರ ನೀಡಲಾಗುತ್ತದೆ. ಈ ಅವಾರ್ಡ್ನ್ನು ರಾಷ್ಟ್ರಪತಿಗಳು ನೀಡುತ್ತಾರೆ. ಶಾಲೆಗಳಲ್ಲಿ ಮಕ್ಕಳು ನೃತ್ಯ, ಸಂಗೀತ ಕಾರ್ಯಕ್ರಮಗಳ ಮೂಲಕ ಗುರಗಳಿಗೆ ಸಂಭ್ರಮದ ದಿನವನ್ನು ನೀಡುತ್ತಾರೆ. ಶಿಕ್ಷಕರಿಗೆ ಕೂಡ ಹಲವು ಆಟೋಟಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆ ನಡೆಸಲಾಗುತ್ತದೆ.
5 / 5
ಶಿಕ್ಷಕರ ದಿನದಂದು ವಿದ್ಯಾರ್ಥಿಗಳು ಶಿಕ್ಷಕರಿಗೆ ಪೆನ್, ಗುಲಾಬಿ, ಹೂಗುಚ್ಛ ಇತ್ಯಾದಿಗಳನ್ನು ನೀಡಿ ಶುಭಹಾರೈಸುತ್ತಾರೆ. ಶಿಕ್ಷಕರ ದಿನಾಚರಣೆ ಎಂಬ ಪರಿಕಲ್ಪನೆ ಭಾರತ ಮಾತ್ರವಲ್ಲ ವಿದೇಶಗಳಲ್ಲಿಯೂ ಇದೆ. ಉದಾಹರಣೆಗೆ, ಚೀನಾದಲ್ಲಿ ಸಪ್ಟೆಂಬರ್ 10 ರಂದು ಶಿಕ್ಷಕರ ದಿನ ಆಚರಿಸಲಾಗುತ್ತದೆ. ಅಮೇರಿಕಾದಲ್ಲಿ ಮೇ 6, ಅಕ್ಟೋಬರ್ನ ಕೊನೆಯ ಶುಕ್ರವಾರದಂದು ಆಸ್ಟ್ರೇಲಿಯಾದಲ್ಲಿ, ಅಕ್ಟೋಬರ್ 15 ರಂದು ಬ್ರೆಜಿಲ್ನಲ್ಲಿ, ಅಕ್ಟೋಬರ್ 5 ರಂದು ಪಾಕಿಸ್ತಾನದಲ್ಲಿ ಶಿಕ್ಚಕರ ದಿನ ಆಚರಿಸಲಾಗುತ್ತದೆ.