ಭಾರತದ ಏಕೀಕೃತ ಪಾವತಿ ಇಂಟರ್ಫೇಸ್ (UPI) ಅತ್ಯಂತ ಜನಪ್ರಿಯ ಡಿಜಿಟಲ್ ಪಾವತಿ ವಿಧಾನಗಳಲ್ಲಿ ಒಂದಾಗಿದೆ. ಇದು ದೇಶದಲ್ಲಿ ಆನ್‌ಲೈನ್ ವಹಿವಾಟುಗಳನ್ನು ಹೆಚ್ಚು ಸುಲಭಗೊಳಿಸಿದೆ. ಭಾರತದ ಹೆಚ್ಚಿನ ಯುವ ಜನಾಂಗ ಇದನ್ನೇ ಅನುಸರಿಸುತ್ತಿದ್ದಾರೆ. ಈ ಸೇವೆಯನ್ನು ನೀವು ಇದೀಗ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಬಳಸಬಹುದು. ಈಗಾಗಲೇ ಶ್ರೀಲಂಕಾ, ಮಾರಿಷಸ್, ಭೂತಾನ್, ಓಮನ್, ನೇಪಾಳ, ಫ್ರಾನ್ಸ್ ಮತ್ತು ಯುಎಇಯಲ್ಲಿ ಯುಪಿಐ ಕಾರ್ಯನಿರ್ವಹಿಸುತ್ತಿದೆ.
ಈ ಪಟ್ಟಿಗೆ ಇನ್ನೂ 10 ಹೊಸ ದೇಶಗಳು ಸೇರಿಕೊಂಡಿವೆ. ಇವುಗಳಲ್ಲಿ ಮಲೇಷ್ಯಾ, ಸಿಂಗಾಪುರ, ಫಿಲಿಪೈನ್ಸ್, ದಕ್ಷಿಣ ಕೊರಿಯಾದಂತಹ ದೇಶಗಳು ಇವೆ. ಈ ದೇಶಗಳಿಗೆ ಹೆಚ್ಚಿನ ಸಂಖ್ಯೆಯ ಭಾರತೀಯ ಪ್ರವಾಸಿಗರು ಭೇಟಿ ನೀಡುವ ಕಾರಣ ಯುಪಿಐ ಪಾವತಿಯನ್ನು ವಿದೇಶದಲ್ಲೂ ಆರಂಭಿಸಲಾಗಿದೆ.
ನೀವು ಬಾಲಿ, ಸಿಂಗಾಪುರ ಅಥವಾ ವಿದೇಶಕ್ಕೆ ಪ್ರವಾಸ ಹೋಗುತ್ತಿದ್ದರೆ ಹಾಗೂ ಅಲ್ಲಿ ಯುಪಿಐ ಸೌಲಭ್ಯ ಲಭ್ಯವಿದ್ದರೆ, ಫೋನ್ ಪೇ, ಗೂಗಲ್ ಪೇ ಅಥವಾ ಇತರೆ ಯಾವುದೇ ಯುಪಿಐ ಆ್ಯಪ್ ಅನ್ನು ಹೇಗೆ ಬಳಸುವುದು ಎಂಬುದನ್ನು ನಾವು ಇಲ್ಲಿ ತಿಳಿಸುತ್ತೇವೆ.
ವಿದೇಶದಲ್ಲೂ ಯುಪಿಐ ಕೆಲಸ ಮಾಡುತ್ತಿರುವುದರಿಂದ ನೀವು ಸ್ಥಳೀಯ ಕರೆನ್ಸಿಗೆ ಭಾರತೀಯ ಕರೆನ್ಸಿಯನ್ನು ವಿನಿಮಯ ಮಾಡಿಕೊಳ್ಳುವ ಬಗ್ಗೆ ಹೆಚ್ಚು ಚಿಂತಿಸಬೇಕಾಗಿಲ್ಲ. ನೇರವಾಗಿ UPI ಮೂಲಕ ಪಾವತಿ ಮಾಡಲು ಸಾಧ್ಯವಾಗುತ್ತದೆ. ಯುಪಿಐ ಮೂಲಕ ಪಾವತಿ ಮಾಡಲು, ನೀವು UPI ಅಪ್ಲಿಕೇಶನ್‌ಗಳನ್ನು ಬಳಸಬೇಕಾಗುತ್ತದೆ. ಅಂತರಾಷ್ಟ್ರೀಯ ಪ್ರವಾಸಕ್ಕೆ ಹೋಗುವ ಮೊದಲು UPI ಅನ್ನು ಸಕ್ರಿಯಗೊಳಿಸಲು ಈ ಹಂತಗಳನ್ನು ಅನುಸರಿಸಿ.
ಫೋನ್ ಪೇ ಬಳಕೆದಾರರು ತಮ್ಮ ಯುಪಿಐ ಅಪ್ಲಿಕೇಶನ್ ತೆರೆಯಿರಿ ಮತ್ತು ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಪೇಮೆಂಟ್ ಮ್ಯಾನೇಜ್ಮೆಂಟ್ ವಿಭಾಗದಲ್ಲಿ UPI ಇಂಟರ್ನ್ಯಾಷನಲ್ ಅನ್ನು ಆಯ್ಕೆಮಾಡಿ. ನೀವು ಅಂತರಾಷ್ಟ್ರೀಯ ಪಾವತಿಗಾಗಿ ಬಳಸಲು ಬಯಸುವ ಬ್ಯಾಂಕ್ ಖಾತೆಯ ಪಕ್ಕದಲ್ಲಿರುವ ಆ್ಯಕ್ಟಿವ್ ಬಟನ್ ಅನ್ನು ಕ್ಲಿಕ್ ಮಾಡಿ. ಖಚಿತಪಡಿಸಲು ಯುಪಿಐ ಪಿನ್ ನಮೂದಿಸಬೇಕು. ಈಗ ಯುಪಿಐ ಅಂತರಾಷ್ಟ್ರೀಯ ಪಾವತಿ ಸಕ್ರಿಯಗೊಳಿಸಲಾಗುತ್ತದೆ.
ಗೂಗಲ್ ಪೇ ಬಳಕೆದಾರರು ತಮ್ಮ ಗೂಗಲ್ ಪೇ ಅಪ್ಲಿಕೇಶನ್ ತೆರೆಯಿರಿ ಮತ್ತು QR ಕೋಡ್ ಅನ್ನು ಟ್ಯಾಪ್ ಮಾಡಿ. ಈಗ ಅಂತರಾಷ್ಟ್ರೀಯ ವ್ಯಾಪಾರಿಯ QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು. ನಂತರ ವಿದೇಶಿ ಕರೆನ್ಸಿಯಲ್ಲಿ ಪಾವತಿ ಮೊತ್ತವನ್ನು ನಮೂದಿಸಿ.
ಅಂತರಾಷ್ಟ್ರೀಯ ಪಾವತಿಗಾಗಿ ನೀವು ಬಳಸಲು ಬಯಸುವ ಬ್ಯಾಂಕ್ ಖಾತೆಯನ್ನು ಆಯ್ಕೆಮಾಡಿ. ‘UPI ಇಂಟರ್ನ್ಯಾಷನಲ್’ ಅನ್ನು ಸಕ್ರಿಯಗೊಳಿಸಲು ಡಿಸ್ಪ್ಲೇಯಲ್ಲಿ ಕಾಣಿಸಿಕೊಳ್ಳುತ್ತದೆ. UPI ಇಂಟರ್ನ್ಯಾಷನಲ್ ಅನ್ನು ಸಕ್ರಿಯಗೊಳಿಸಿ ಟ್ಯಾಪ್ ಮಾಡಿ ಮತ್ತು ಅಂತರಾಷ್ಟ್ರೀಯ ಪಾವತಿಗಳನ್ನು ಸಕ್ರಿಯಗೊಳಿಸಲಾಗುತ್ತದೆ.
ಯುಪಿಐ ಇಂಟರ್ನ್ಯಾಷನಲ್ ಅನ್ನು ಬೆಂಬಲಿಸುವ ಬ್ಯಾಂಕ್ ಖಾತೆಗಳಲ್ಲಿ ಮಾತ್ರ ನೀವು ಅಂತರಾಷ್ಟ್ರೀಯ ವಹಿವಾಟುಗಳನ್ನು ಸಕ್ರಿಯಗೊಳಿಸಬಹುದು ಎಂಬುದನ್ನು ನೆನಪಿನಲ್ಲಿಡಿ. ಅಂದರೆ ನಿಮ್ಮ ಯಾವುದೇ ಸ್ಥಳೀಯ ಬ್ಯಾಂಕ್ ಖಾತೆ ಇದಕ್ಕೆ ಸಪೋರ್ಟ್ ಮಾಡುವುದಿಲ್ಲ. ನೀವು ಸ್ಕ್ಯಾನ್ ಮಾಡಿದ ಬಳಿಕ ಬ್ಯಾಂಕ್ ಖಾತೆಯಿಂದ ಕಡಿತಗೊಂಡ ಹಣವು ಭಾರತೀಯ ಕರೆನ್ಸಿಯಲ್ಲಿ ಇರುತ್ತದೆ.