ಕಳೆದ ಕೆಲವು ತಿಂಗಳ ಹಿಂದಿನ ವರೆಗೆ ವಾಟ್ಸ್ಆ್ಯಪ್ ಖಾತೆಯನ್ನು ಮೊಬೈಲ್, ಲ್ಯಾಪ್ಟಾಪ್, ಡೆಸ್ಕ್ಟಾಪ್ಗಳಲ್ಲಿ ಮಾತ್ರ ಬಳಸಲು ಅವಕಾಶವಿತ್ತು. ಒಂದಕ್ಕಿಂತ ಹೆಚ್ಚು ಸ್ಮಾರ್ಟ್ಫೋನ್ಗಳಲ್ಲಿ ಬಳಸುವ ಆಯ್ಕೆ ಇರಲಿಲ್ಲ. ಆದರೆ, ಇತ್ತೀಚೆಗಷ್ಟೆ ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ನೂತನ ಫೀಚರ್ ಬಿಡುಗಡೆ ಮಾಡಿತ್ತು.
ವಾಟ್ಸ್ಆ್ಯಪ್ನ ಈ ನೂತನ ಆಯ್ಕೆಯ ಮೂಲಕ ಬಳಕೆದಾರರು ಒಂದೇ ಬಾರಿಗೆ ನಾಲ್ಕು ಫೋನ್‌ಗಳಲ್ಲಿ ಒಂದೇ ವಾಟ್ಸ್ಆ್ಯಪ್ ಖಾತೆಯನ್ನು ಬಳಸಬಹುದಾಗಿದೆ. ಅಂದರೆ ನೀವು ನಾಲ್ಕು ಫೋನ್‌ಗಳಲ್ಲಿ ಒಂದೇ ವಾಟ್ಸ್ಆ್ಯಪ್ ಖಾತೆಯನ್ನು ತೆರೆದಿಟ್ಟುಕೊಳ್ಳಬಹುದು.
ನಾಲ್ಕಕ್ಕಿಂತ ಅಧಿಕ ಸಾಧನಗಳಲ್ಲಿ ಒಂದೇ ಖಾತೆಯ ವಾಟ್ಸ್ಆ್ಯಪ್ ತೆರೆದಿಡಲು ಸಾಧ್ಯವಿಲ್ಲ. ಈ ಆಯ್ಕೆಯನ್ನು ವಾಟ್ಸ್ಆ್ಯಪ್ ಇನ್ನೂ ನೀಡಿಲ್ಲ. ಬಳಕೆದಾರ ಪ್ರಯತ್ನಿಸಲು ಮುಂದಾದರೂ ಖಾತೆ ಓಪನ್ ಆಗುವುದಿಲ್ಲ.
ಬೇರೆ ಫೋನ್ನಲ್ಲಿ ವಾಟ್ಸ್ಆ್ಯಪ್ ಖಾತೆ ಬಳಸಬೇಕಿದ್ದರೆ ಹೊಸದಾಗಿ ಇನ್ಸ್ಟಾಲ್ ಮಾಡಿಕೊಳ್ಳಬೇಕು. ನಂತರ ಖಾತೆ ಸೆಟಪ್ ಮಾಡುವಾಗ ಫೋನ್ ನಂಬರ್ ನಮೂದಿಸುವ ಬದಲು ‘ಅಸ್ತಿತ್ವದಲ್ಲಿರುವ ಖಾತೆ (Existing Account)’ ಆಯ್ಕೆಯನ್ನು ಆಯ್ದುಕೊಳ್ಳಬೇಕು.
ನಂತರ ಕ್ಯುಆರ್ ಕೋಡ್ ಕಾಣಿಸುತ್ತದೆ. ಆಗ ನೀವು ಈಗಾಗಲೇ ವಾಟ್ಸ್ಆ್ಯಪ್ ಖಾತೆ ಹೊಂದಿರುವ ಫೋನ್ನಿಂದ ಸ್ಕ್ಯಾನ್ ಮಾಡುವ ಮೂಲಕ ಲಾಗಿನ್ ಆಗಬಹುದು. ಈ ವಿಶೇಷ ಫೀಚರ್ iOS ಮತ್ತು Android ಸ್ಮಾರ್ಟ್ಫೋನ್ಗಳಲ್ಲಿ ಲಭ್ಯವಿದೆ.
ಎಲ್ಲಾದರು ವಾಟ್ಸ್ಆ್ಯಪ್ ಲಾಗಿನ್ ಆಗಿರುವ ಮೊಬೈಲ್ಫೋನ್ ದೀರ್ಘಕಾಲದವರೆಗೆ ನಿಷ್ಕ್ರಿಯವಾಗಿದ್ದರೆ, ಆ ನಂತರ ವಾಟ್ಸ್ಆ್ಯಪ್ ಲಾಗಿನ್ ಆಗಿರುವ ಎಲ್ಲ ಫೋನ್ಗಳಿಂದ ಸ್ವಯಂಚಾಲಿತವಾಗಿ ಲಾಗೌಟ್ ಆಗುತ್ತದೆ.
ಏಕ ಕಾಲಕ್ಕೆ ನಾಲ್ಕು ಫೋನ್‌ಗಳಲ್ಲಿ ವಾಟ್ಸ್ಆ್ಯಪ್ನ ಒಂದೇ ಖಾತೆ ಬಳಸುವ ಈ ಆಯ್ಕೆಯಿಂದ ಸಂದೇಶ ಕಳುಹಿಸುವ ಪ್ರಕ್ರಿಯೆ ಇನ್ನಷ್ಟು ಸುಲಭವಾಗುತ್ತದೆ. ಜೊತೆಗೆ ಸೈನ್ ಔಟ್ ಮಾಡದೆಯೇ ಬೇರೆ ಫೋನ್ನಿಂದ ಮೆಸೇಜ್ ಕಳುಹಿಸುವುದು, ಅರ್ಧಕ್ಕೆ ನಿಲ್ಲಿಸಿದ್ದ ಚಾಟ್ಗಳನ್ನು ಮುಂದುವರಿಸಲು ಅನುಕೂಲವಾಗಲಿದೆ ಎಂದು ಕಂಪನಿ ತಿಳಿಸಿದೆ.
ಈ ಆಯ್ಕೆಯಿಂದ ಉದ್ಯಮ ಸಂಸ್ಥೆಗಳಿಗೆ, ವ್ಯಾಪಾರಿಗಳಿಗೆ ಪ್ರಯೋಜನ ಪಡೆಯುತ್ತಿದ್ದಾರೆ. ಉದ್ಯಮ ಸಂಸ್ಥೆಗಳ ಉದ್ಯೋಗಿಗಳು ಒಂದೇ ಖಾತೆಯನ್ನು ನಾಲ್ಕು ಮೊಬೈಲ್ಗಳಲ್ಲಿ ಬಳಸುವ ಮೂಲಕ ಗ್ರಾಹಕರ ಜತೆ ಸಂವಹನ ನಡೆಸಲು ಅನುಕೂಲವಾಗಲಿದೆ.
Published On - 3:00 pm, Sat, 9 September 23