Updated on: Nov 29, 2022 | 9:59 AM
ರಾಜ್ಯದ ಸುಪ್ರಸಿದ್ದ ಗಣಪತಿಗಳಲ್ಲಿ ಒಂದಾದ ತುಮಕೂರಿನ ಗೂಳೂರು ಮಹಾಗಣಪತಿಯ ವಿಸರ್ಜನಾ ಮಹೋತ್ಸವ ಅದ್ದೂರಿಯಾಗಿ ನೆರವೇರಿದೆ..ದೀಪಾವಳಿ ಹಬ್ಬದಂದು ಪ್ರತಿಷ್ಠಾಪನೆಗೊಳ್ಳುವ ಈ ಮಹಾಗಣಪತಿಗೆ ತನ್ನದೇ ಆದ ವಿಶಿಷ್ಟ ಇತಿಹಾಸ ಹೊಂದಿದೆ.
ವಿಶೇಷವಾಗಿ ಗೂಳೂರಿಗೆ ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸ್ತಾರೆ. ಭಕ್ತರ ನಾನಾ ಬೇಡಿಕೆಗಳನ್ನು ಈಡೇರಿಸುವ ಗೂಳೂರು ಗಣಪತಿಯನ್ನು ಹರಕೆ ಗಣಪತಿ ಎಂದು ಕೂಡ ಕರೆಯಲ್ಪಡುತ್ತೆ.
ಕಾರ್ತಿಕ ಮಾಸದ ದಿನದಂದು ಊರಿನ ಕೆರೆ ಬಳಿಯಿಂದ ಗಂಗೆ ಪೂಜೆ ಮಾಡಿ ಮಣ್ಣು ತರುವ 18 ಕೋಮಿನ ಜನರು ದೇವಾಲಯದಲ್ಲಿಯೇ ಗಣಪತಿ ಮೂರ್ತಿಯನ್ನು ತಯಾರಿಸಿ ಪ್ರತಿಷ್ಟಾಪಿಸಲಾಗುತ್ತದೆ.
ಬೃಗು ಮಹರ್ಷಿಯು ತಮ್ಮ ಕಾಶಿಯಾತ್ರೆ ಪರಿಯಟನೆ ಸಂದರ್ಭದಲ್ಲಿ ಗೂಳೂರಿಗೆ ಆಗಮಿಸಿದಾಗ ಚೌತಿಯ ದಿನದಂದು ಇಲ್ಲಿನ ಕೆರೆ ಬಳಿ ಅವರಿಗೆ ಗಣಪತಿಯ ಪ್ರೇರಣೆಯಾಗಿತ್ತಂತೆ. ಬಳಿಕ ಇದೇ ಜಾಗದಲ್ಲಿ ಕಾರ್ತಿಕ ಮಾಸದಲ್ಲಿ ತಪಸ್ಸು ಮಾಡಿ, ಕೆರೆ ಬಳಿಯಿಂದ ಮಣ್ಣು ತಂದು ಗಣಪತಿ ಮೂರ್ತಿಯ ಪ್ರತಿಷ್ಟಾಪನೆ ಮಾಡಿ ವ್ರತ ಆಚರಿಸಿದ್ದಾರೆ.
ಇದೇ ಆಚರಣೆಯನ್ನು ಮುಂದೆಯೂ ನಡೆಸಿಕೊಂಡು ಹೋಗುವಂತೆ ಊರಿನ 18 ಕೋಮಿನ ಜನರಿಗೆ ಹೇಳಿ ತಮ್ಮ ಕಾಶಿಯಾತ್ರೆ ಮುಂದುವರೆಸಿದ್ದರಂತೆ. ಅಂದಿನಿಂದ ಇಂದಿನವರೆಗೂ ಗೂಳೂರು ಗಣಪತಿಯ ಪ್ರತಿಷ್ಠಾಪನೆ ನಡೆಸಿಕೊಂಡು ಬರಲಾಗಿದೆ.
ಕಾರ್ತಿಕ ಮಾಸದ ಕೊನೆಯ ಶನಿವಾರ ಹಾಗೂ ಭಾನುವಾರದಂದು ಗೂಳೂರಿನಲ್ಲಿ ಜಾತ್ರಾ ಮಹೋತ್ಸವ ಏರ್ಪಡಿಸಿ, ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ಎರಡು ದಿನಗಳ ಕಾಲ ಅದ್ದೂರಿಯಾಗಿ ಮೆರವಣಿಗೆ ನಡೆಸಿ ವಿಸರ್ಜನೆ ಮಾಡಲಾಗುತ್ತದೆ.