ಸದ್ಯ ಡ್ಯಾಮ್‌ನಲ್ಲಿ 77 ಟಿಎಂಸಿ ನೀರಿದ್ದು, ಕನಿಷ್ಠ 65 ಟಿಎಂಸಿ ನೀರು ಉಳಿಸಲು ಪ್ರಯತ್ನ ಮಾಡಲಾಗುತ್ತಿದೆ.ಇದಕ್ಕಾಗಿ 10 ಮೀಟರ್ ಉದ್ದದ ನಾಲ್ಕು ಅಡಿ ಅಗಲದ ಮೂರು ಗೇಟ್‌ಗಳನ್ನು ಡ್ಯಾಮ್ ಬಳಿ ತರಲಾಗಿದೆ. ಸಂಜೆವರೆಗೆ ಮತ್ತೆರಡು ಪ್ಲೇಟ್‌ಗಳು ಬರಲಿದ್ದು, 65 ಟನ್ ತೂಕವಿರುವ ಸ್ಟಾಪ್ ಲಾಗ್ ಗೇಟ್‌ಗಳನ್ನು ಅಳವಡಿಸಲಿದ್ದಾರೆ.
ಜಲಾಶಯದ ಮೇಲ್ಬಾಗಕ್ಕೆ ಗೇಟ್ ರವಾನಿಸಲಾಗುತ್ತಿದ್ದು, ಟ್ರಕ್‌ನಿಂದ ಪ್ಲೇಟ್‌ಗಳನ್ನು ಇಳಿಸುವಾಗ ಒಮ್ಮೆ ಬ್ಯಾಲೆನ್ಸ್ ತಪ್ಪಿತ್ತು. ಅದೃಷ್ಟವಶಾತ್ ಯಾವುದೇ ಸಮಸ್ಯೆಯಾಗಿಲ್ಲ. ನಂತರ ಕ್ರೇನ್ ಮೂಲಕ ಬೆಲ್ಟ್ ಹಾಕಿ ಕಬ್ಬಿಣ ಪೇಲ್ಟ್‌ಗಳನ್ನು ಜಲಾಶಯದ ಮೇಲ್ಭಾಗಕ್ಕೆ ಸಾಗಿಸಿದ್ದಾರೆ.
ಡ್ಯಾಮ್ ಸುರಕ್ಷತಾ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ಗೇಟ್ ಅಳವಡಿಕೆ ಕಾರ್ಯ ನಡೆಯುತ್ತಿದ್ದು, ನೂರಾರು ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದಾರೆ. ಬುಧವಾರ ಮಳೆ ಹಿನ್ನಲೆ ಗೇಟ್ ಅಳವಡಿಕೆಗೆ ಅಡ್ಡಿಯಾಗಿತ್ತು. ಇವತ್ತು ಮಳೆ ಬಿಡುವು ಕೊಟ್ಟಿದ್ದು, ಎಲ್ಲಾ ಪ್ಲೇಟ್‌ಗಳು ಬಂದ ನಂತ್ರ ಅಳವಡಿಕೆ ಶುರುವಾಗಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡ್ಯಾಮ್ ಸುರಕ್ಷತಾ ತಜ್ಞ ಕನ್ನಯ್ಯ ನಾಯ್ಡು, ನಾಳೆ ಶುಭ ಸುದ್ದಿ ಕೊಡುತ್ತೇನೆ ಎಂದಿದ್ದಾರೆ.
ಏತನ್ಮಧ್ಯೆ 19 ನೇ ಗೇಟ್ ಅಳವಡಿಕೆ ಕಾರ್ಯಾರಂಭವಾಗಿದ್ದು, ಜಿಂದಾಲ್ ಇಂಜಿನಿಯರ್ಸ್ಕ್ರೇನ್ ಮೂಲಕ ಸ್ಟಾಪ್ಲಾಗ್ ಗೇಟ್ ಎಲಿಮೆಂಟ್ ಎತ್ತಿದ್ದಾರೆ. ಕೆಲವೇ ಹೊತ್ತಲ್ಲಿ ಸ್ಟಾಪ್ ಲಾಗ್ ಎಲಿಮೆಂಟ್ ಅಳವಡಿಕೆ ಮಾಡಲಾಗುತ್ತದೆ. 5 ಎಲಿಮೆಂಟ್‌ಗಳ ಜೋಡಿಸಲು ಪ್ಲಾನ್ ಮಾಡಲಾಗಿದೆ. ತಲಾ ಒಂದು ಎಲಿಮೆಂಟ್ 25 ಟಿಎಂಸಿ ನೀರು ತಡೆಯುವ ಸಾಮರ್ಥ್ಯ ಹೊಂದಿದೆ. ಸದ್ಯ 80 ಕ್ಕೂ ಹೆಚ್ಚು ತಾಂತ್ರಿಕ ಸಿಬ್ಬಂದಿಯಿಂದ ಗೇಟ್ ಅಳವಡಿಕೆ ಕಾರ್ಯ ನಡೆಯುತ್ತಿದೆ.
ಅರ್ಧ ಡ್ಯಾಮ್ ಖಾಲಿ ಮಾಡಿ ಗೇಟ್ ಅಳವಡಿಸಲು ನಿರ್ದರಿಸಿದ್ದೆವು. ಆದರೆ, ಅದಕ್ಕೂ ಮುನ್ನವೇ ಗೇಟ್ ಅಳವಡಿಕೆ ಪ್ರಯತ್ನ ಮಾಡುತ್ತಿದ್ದೇವೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ಅದೇನೇ ಇರಲಿ, ಆದಷ್ಟು ಬೇಗ ಗೇಟ್ ಅಳವಡಿಕೆಯಾಗಲಿ. 65 ಟಿಎಂಸಿ ನೀರು ಉಳಿಯಲಿ ಅನ್ನೋದು ರೈತರ ಪ್ರಾರ್ಥನೆಯಾಗಿದೆ.