
ಪರಸ್ಪರ ಇಷ್ಟಪಟ್ಟ ಯುವ ಜೋಡಿಗಳು ಮನೆಯವರನ್ನು ಒಪ್ಪಿಸಿ ಪ್ರೀತಿ ಪ್ರೇಮದ ಮುಂದಿನ ಹೆಜ್ಜೆ ಇಟ್ಟಿದ್ದಾರೆ. ಮೂರು ಗಂಟಿನ ಮೂಲಕ ಬದುಕಿನ ನಂಟು ಬೆಸೆದಿದ್ದಾರೆ. ಸಾಗರದಾಚೆಯ ಪ್ರೀತಿಗೆ ಭಾರತೀಯ ನೆಲದಲ್ಲಿ ಕಂಕಣ ಭಾಗ್ಯ ಕೂಡಿ ಬಂದಿದೆ. ಪ್ರೀತಿ ಪ್ರೇಮಗಳಿಗೆ ದೇಶ ಭಾಷೆಗಳ ಗಡಿಯಿಲ್ಲ, ಹೃದಯದ ಭಾಷೆಗೆ ಜಾತಿ ಧರ್ಮಗಳ ಗಡಿಯಿಲ್ಲ ಎನ್ನೋದು ಮತ್ತೆ ಸಾಬೀತಾಗಿದೆ.

ಇಂಗ್ಲೆಂಡ್ ಮೂಲದ ಜಾನ್ ಹಾಗೂ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಇಬ್ಬೀಡು ಗ್ರಾಮದ ಹೇಮಶ್ರೀ ಪಕ್ಕಾ ಹಿಂದೂ ಸಂಪ್ರದಾಯದಂತೆ ಕೈ ಹಿಡಿದಿದ್ದಾರೆ. ಕಳೆದ ಎರಡು ವರ್ಷಗಳಿಂದ ಇಂಗ್ಲೆಂಡ್ ನ ಲಿವರ್ ಪೋಲ್ನಲ್ಲಿ ನೆಲೆಸಿರುವ ಬೇಲೂರಿನ ಯುವತಿ ಹೇಮಶ್ರೀಗೆ ತನ್ನದೇ ಕಚೇರಿಯಲ್ಲಿ ಕೆಲಸ ಮಾಡುವ ಜಾನ್ ಜೊತೆಗೆ ಗೆಳೆತನವಾಗಿದೆ. ಗೆಳೆತನ ಪ್ರೀತಿಯಾಗಿ ಇಬ್ಬರೂ ಪರಸ್ಪರ ಇಷ್ಟಪಟ್ಟು ಮದುವೆಯಾಗುವ ತೀರ್ಮಾನ ಮಾಡಿದ್ದಾರೆ. ಆದ್ರೆ ಜಾತಿ ಬೇರೆ, ಧರ್ಮ ಬೇರೆ, ದೇಶ ಬೇರೆ ಭಾಷೆ ಬೇರೆ, ಮನೆಯವರು ಒಪ್ತಾರಾ ಇಲ್ಲವೋ ಎನ್ನೋ ಆತಂಕಕ್ಕೆ ತೆರೆ ಎಳೆದ ಹೆತ್ತವರು ಮಕ್ಕಳ ಆಸೆಗೆ ನೀರೆರೆದು ಹಿಂದೂ ಸಂಪ್ರದಾಯದಂತೆ ಕಂಕಣ ಭಾಗ್ಯ ಕರುಣಿಸಿದ್ದಾರೆ.

ಬೇಲೂರು ತಾಲ್ಲೂಕಿನ ಇಬ್ಬೀಡು ಗ್ರಾಮದ ವಿಜಯೇಂದ್ರ ಹಾಗು ಶಕುಂತಲ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಇಂಜಿನಿಯರಿಂಗ್ನಲ್ಲಿ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಪಡೆದಿದ್ದ ಹೇಮಶ್ರಿ ಕಳೆದ ಎರಡು ವರ್ಷಗಳಿಂದ ಇಂಗ್ಲೆಂಡ್ನ ಲಿವರ್ ಪೋಲ್ನಲ್ಲಿರುವ ಕಂಪನಿಯೊಂದರಲ್ಲಿ ಕೆಲಸಮಾಡಿಕೊಂಡಿದ್ದರು. ಇದೇ ಕಂಪನಿಯಲ್ಲಿ ಲೀಗಲ್ ಅಡ್ವೈಸರ್ ಆಗಿರುವ, ಇಂಗ್ಲೆಂಡ್ನ ಡೇವಿಡ್ ವಾಟ್ಸನ್ ಹಾಗು ಸೂಜಿ ವಾಟ್ಸನ್ ದಂಪತಿಯ ಪುತ್ರ ಜಾನ್ ಪರಸ್ಪರ ಪರಿಚಯವಾಗಿ ಗೆಳೆತನವಾಗಿದೆ. ಗೆಳೆಯನ ಪ್ರೀತಿಗೆ ತಿರುಗಿತ್ತು.

ಜಾನ್ ಕುಟುಂಬದವರು ಪಕ್ಕಾ ಹಿಂದೂ ಸಂಪ್ರದಾಯ ಶೈಲಿನಲ್ಲಿ ವಧು ವರರಿಗೆ ವಿವಾಹ ನೆರವೇರಿಸಿದ್ದಾರೆ. ಭಾರತೀಯ ಉಡುಗೆಯಲ್ಲಿ ಕಂಗೊಳಿಸಿದ್ದಾರೆ, ಮಾಂಗಲ್ಯ ಧಾರಣೆ, ಅಶ್ವಿನಿ ನಕ್ಷತ್ರ ದರ್ಶನ, ಸಪ್ತಪತಿ ಹೀಗೆ ಪಕ್ಕಾ ಭಾರತೀಯ ಶೈಲಿಯ ಹಿಂದೂ ಸಂಪ್ರದಾಯದ ಎಲ್ಲಾ ಆಚರಣೆಗಳ ಮೂಲಕ ಮದುವೆ ನೆರವೇರಿದೆ.

ಒಟ್ಟಿನಲ್ಲಿ, ದೇಶ ಯಾವುದಾದರೇನು? ಹೃದಯದಲ್ಲಿ ಪ್ರೀತಿ ಇದ್ದರೆ; ಭಾಷೆ ಯಾವುದಾದರೇನು, ಪರಸ್ಪರ ಸಹಬಾಳ್ವೆಯ ಹೊಂದಾಣಿಕೆ ಇದ್ದರೆ ಎಂಬಂತೆ ಒಂದಾಗಿರುವ ಸಪ್ತ ಸಾಗರದಾಚೆಯ ಜೋಡಿ ಹಕ್ಕಿಗಳ ಬದುಕು ಬಂಗಾರವಾಗಲಿ ಎಂಬುದೇ ಬಂಧುಬಳಗದವರ, ಎಲ್ಲರ ಹಾರೈಕೆ.