ರೈತರ ಬದುಕು ಹಸನಾಗಲು ನೆರವಾಗುತ್ತಾ ಈ ಬಾರಿಯ ಬಜೆಟ್; ಏನಿವೆ ಕೃಷಿ ಕ್ಷೇತ್ರದ ನಿರೀಕ್ಷೆಗಳು?
ನವದೆಹಲಿ, ಜನವರಿ 22: ಫೆಬ್ರುವರಿ 1ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್ನಲ್ಲಿ ರೈತರು ಮತ್ತು ಕೃಷಿ ಕ್ಷೇತ್ರದಿಂದ ಬಹಳಷ್ಟು ನಿರೀಕ್ಷೆಗಳಿವೆ. ರೈತರ ಆದಾಯ ದ್ವಿಗುಣಗೊಳಿಸುವ ಸರ್ಕಾರದ ಭರವಸೆ ಇನ್ನೂ ನೆರವೇರಬೇಕಿದೆ. ಈ ನಿಟ್ಟಿನಲ್ಲಿ ಬಜೆಟ್ನಲ್ಲಿ ಸರ್ಕಾರ ಹೊಸ ಪ್ರಯೋಗ ಮಾಡುವ ಅಪೇಕ್ಷೆ ಇಟ್ಟುಕೊಳ್ಳಲಾಗಿದೆ. ರೈತರು ಬಜೆಟ್ನಿಂದ ಏನೇನು ನಿರೀಕ್ಷಿಸುತ್ತಾರೆ ಎನ್ನುವ ವಿವರ ಇಲ್ಲಿದೆ...
1 / 5
ಭಾರತದ ಆರ್ಥಿಕತೆಗೆ ಕೃಷಿಯೇ ಬೆನ್ನೆಲುಬು ಎಂದು ಹೇಳಲಾಗುತ್ತಿತ್ತು. ಆದರೆ, ಭಾರತದ ಆರ್ಥಿಕತೆ ಬೆಳೆದರೂ, ಕೃಷಿ ಕ್ಷೇತ್ರ ಬಹುತೇಕ ಸ್ವಾವಲಂಬನೆ ಸಾಧಿಸಿದರೂ ರೈತರ ಬದುಕು ಮಾತ್ರ ಹಸನಾಗಿಲ್ಲ. ದೇಶದ ಕಾರ್ಮಿಕ ಜನಸಂಖ್ಯೆಯ ಶೇ. 45ರಷ್ಟು ಜನರು ಕೃಷಿ ಕ್ಷೇತ್ರದಲ್ಲಿ ಇದ್ದಾರಾದರೂ ಈ ಕ್ಷೇತ್ರದಿಂದ ಜಿಡಿಪಿಗೆ ಆಗುತ್ತಿರುವ ಕೊಡುಗೆ ಶೇ. 15 ಮಾತ್ರ. ಆ ಮಟ್ಟಿಗೆ ಕೃಷಿಗಾರಿಕೆ ಲಾಭ ಕಾಣದ ಸೇವೆಯಂತಾಗಿದೆ.
2 / 5
ಸಾಕಷ್ಟು ಬೆಳೆಗಳು, ಸಬ್ಸಿಡಿಗಳು, ವಿವಿಧ ಯೋಜನೆಗಳು ಇವೆಲ್ಲವೂ ಕೃಷಿ ಕ್ಷೇತ್ರದ ಬಗ್ಗೆ ಮೇಲ್ನೋಟಕ್ಕೆ ಸಕಾರಾತ್ಮಕ ಭಾವನೆ ಮೂಡಿಸುತ್ತವೆ. ಆದರೆ, ವಾಸ್ತವವಾಗಿ, ರೈತರು ಮತ್ತು ಈ ಕ್ಷೇತ್ರದ ಮುಂದೆ ಸಾಕಷ್ಟು ಸಮಸ್ಯೆಗಳು, ಸವಾಲುಗಳು ಇವೆ. ಈ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಯಾವುದೇ ಸರ್ಕಾರಕ್ಕೂ ದೊಡ್ಡ ಸವಾಲಿನ ಸಂಗತಿಯೇ ಆಗಿರುತ್ತದೆ.
3 / 5
ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳನ್ನು ಮಾಡುತ್ತಿದೆ. 2024ರ ಬಜೆಟ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗಮನಹರಿಸುವ ಅವಶ್ಯಕತೆ ಇದೆ ಎಂದು ಹೆಸರಿಸಿದ ನಾಲ್ಕು ವರ್ಗಗಳಲ್ಲಿ ರೈತರೂ ಇದ್ದಾರೆ. ಇದೀಗ ಫೆಬ್ರುವರಿ 1ರಂದು 2025ರ ಕೇಂದ್ರ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್ ಅವರು ಕೃಷಿ ಕ್ಷೇತ್ರದಲ್ಲಿ ಗಮನಾರ್ಹ ಪರಿವರ್ತನೆ ತರಲು ಯಾವ ಹೊಸ ಕ್ರಮ ಅನುಸರಿಸುತ್ತಾರೆ ಎಂಬುದು ಪ್ರಶ್ನೆಯಾಗಿದೆ.
4 / 5
ಕೃಷಿ ಕ್ಷೇತ್ರದಲ್ಲಿ ಸದ್ಯದ ತಂತ್ರಜ್ಞಾನದಲ್ಲಿ ಹೆಚ್ಚಿನ ಮಟ್ಟದ ಆದಾಯ ಹೆಚ್ಚಳ ಸಾಧ್ಯತೆ ಕಡಿಮೆ ಇದೆ. ಸರ್ಕಾರ ಈ ಕ್ಷೇತ್ರದಲ್ಲಿರುವ ಜನರನ್ನು ಕೈಗಾರಿಕೆ ಇತ್ಯಾದಿ ಕಡೆ ಸೆಳೆಯಲು ಯತ್ನಿಸುತ್ತಿದೆ. ಇದರ ನಡುವೆ ಕೋವಿಡ್ ಬಳಿಕ ನಗರಭಾಗದಿಂದ ಜನರು ವಾಪಸ್ ಗ್ರಾಮೀಣ ಭಾಗದತ್ತ ವಲಸೆ ಹೋಗುವುದು ಹೆಚ್ಚಾಗಿದೆ. ನಗರದ ಕಾರ್ಮಿಕರು ತಂತಮ್ಮ ಊರಿಗೆ ಹೋಗಿ ಹೊಲದಲ್ಲಿ ದುಡಿಯುತ್ತಿದ್ದಾರೆ. ಇದು ರೈತರ ಆದಾಯ ಹೆಚ್ಚಳ ಮಾಡುವ ಸರ್ಕಾರದ ಪ್ರಯತ್ನ ಪೂರ್ಣ ಫಲ ಕೊಡದಂತೆ ಮಾಡುತ್ತಿದೆ.
5 / 5
ಕೃಷಿ ಕ್ಷೇತ್ರವು ಈ ಬಾರಿಯ ಬಜೆಟ್ನಲ್ಲಿ ಕೆಲ ಪ್ರಮುಖ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಶೇ. 1ರ ಬಡ್ಡಿದರದಲ್ಲಿ ಕೃಷಿ ಸಾಲ ಕೊಡಬೇಕು; ಪಿಎಂ ಕಿಸಾನ್ ಹಣವನ್ನು ಎರಡು ಪಟ್ಟು ಹೆಚ್ಚಿಸಬೇಕು; ಪಿಎಂ ಫಸಲ್ ಬಿಮಾ ಯೋಜನೆ ಅಡಿ ಎಲ್ಲಾ ಸಣ್ಣ ರೈತರಿಗೂ ಉಚಿತವಾಗಿ ಬೆಳೆ ವಿಮೆ ಒದಗಿಸಬೇಕು; ಕೃಷಿ ಯಂತ್ರೋಪಕರಣ, ರಸಗೊಬ್ಬರ, ಬೀಜಗಳಿಗೆ ಜಿಎಸ್ಟಿಯಿಂದ ವಿನಾಯಿತಿ ಕೊಡಬೇಕು ಎಂಬಿತ್ಯಾದಿ ಬೇಡಿಕೆಗಳಿವೆ.