ಭಾರತದಲ್ಲಿ ಹೊಸ ಕಾರುಗಳ ಖರೀದಿ ಟ್ರೆಂಡ್ ಜೋರಾಗಿದ್ದು, ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಕಾರಗಳು ಮಾರುಕಟ್ಟೆ ಪ್ರವೇಶಿಸುವ ಸಿದ್ದತೆಯಲ್ಲಿವೆ. ಹೊಸ ಕಾರುಗಳಲ್ಲಿ ಪ್ರಮುಖ ಆವೃತ್ತಿಗಳು ಈ ತಿಂಗಳಾಂತ್ಯಕ್ಕೆ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದ್ದು, ಹೊಸ ಕಾರುಗಳಲ್ಲಿ ಸಾಮಾನ್ಯ ಮಾದರಿಗಳ ಜೊತೆಗೆ ಸಿಎನ್ ಜಿ ಹಾಗೂ ಎಲೆಕ್ಟ್ರಿಕ್ ಕಾರು ಮಾದರಿಗಳು ಬಿಡುಗಡೆಯಾಗುತ್ತಿವೆ.
ಈ ತಿಂಗಳಾಂತ್ಯಕ್ಕೆ ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ಫ್ರಾಂಕ್ಸ್ ಕಾರು ಪ್ರಮುಖ ಆವೃತ್ತಿಯಾಗಿದೆ. ಇದು ಈ ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿದ್ದು, ಹೊಸ ಕಾರು ಮಾದರಿಯು ಕಂಪ್ಯಾಕ್ಟ್ ಎಸ್ ಯುವಿ ವಿಭಾಗಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳಲಿದೆ. ಹೊಸ ಕಾರಿನಲ್ಲಿ ಕಂಪನಿಯು ಒನ್ ಲೀಟರ್ ಪೆಟ್ರೋಲ್ ಮತ್ತು 1.2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಿದೆ.
ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 8 ಲಕ್ಷದಿಂದ ರೂ. 10 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುವ ನೀರಿಕ್ಷೆಯಿದ್ದು, ಹೊಸ ಕಾರು ಟಾಟಾ ನೆಕ್ಸಾನ್ ಮತ್ತು ಮಹೀಂದ್ರಾ ಎಕ್ಸ್ ಯುವಿ ತ್ರಿ ಡಬಲ್ ಒ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.
ಬಿಡುಗಡೆಯಾಗಲಿರುವ ಹೊಸ ಕಾರುಗಳ ಪಟ್ಟಿಯಲ್ಲಿ ಸಿಟ್ರನ್ ನಿರ್ಮಾಣ ಇಸಿ3 ಕಾರು ಸಹ ಪ್ರಮುಖವಾಗಿದೆ. ಇದು ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಬಜೆಟ್ ಇವಿ ಕಾರು ಮಾದರಿಯಾಗಿದ್ದು, ಭರ್ಜರಿ ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿದೆ. ಹೊಸ ಕಾರು ಮಾದರಿಯು 29.2 ಕೆವಿಹೆಚ್ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿದ್ದು, ಇದು ಪ್ರತಿ ಚಾರ್ಜ್ ಗೆ ಗರಿಷ್ಠ 320 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ಖಾತ್ರಿಪಡಿಸಿದೆ.
ಇದರೊಂದಿಗೆ ಹೊಸ ಇವಿ ಕಾರು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 9 ಲಕ್ಷದಿಂದ ರೂ. 12 ಲಕ್ಷ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಟಾಟಾ ಟಿಯಾಗೋ ಇವಿ ಕಾರಿಗೆ ಇದು ಭರ್ಜರಿ ಪೈಪೋಟಿ ನೀಡಲಿದೆ.
ಹೊಸ ಕಾರುಗಳ ಪಟ್ಟಿಯಲ್ಲಿ ಟಾಟಾ ಮೋಟಾರ್ಸ್ ನಿರ್ಮಾಣದ ಪಂಚ್ ಇವಿ ಸಹ ಒಂದಾಗಿದೆ. ಸದ್ಯ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿರುವ ಪಂಚ್ ಕಾರು ಮುಂಬರುವ ದಿನಗಳಲ್ಲಿ CNG ಜೊತೆಗೆ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಯಾಗುವ ಸಿದ್ದತೆಯಲ್ಲಿದೆ.
ಹೊಸ ಪಂಚ್ ಇವಿ ಕಾರು ಟಿಯಾಗೋ ಇವಿ ಕಾರಿನಲ್ಲಿರುವಂತೆ ಬ್ಯಾಟರಿ ಪ್ಯಾಕ್ ಆಯ್ಕೆ ಪಡೆದುಕೊಳ್ಳಲಿದ್ದು, ಇದು ಪ್ರತಿ ಚಾರ್ಜ್ ಗೆ 280 ರಿಂದ 350 ಕಿ.ಮೀ ಮೈಲೇಜ್ ನೀಡಲಿದ್ದು, ಎಕ್ಸ್ ಶೋರೂಂ ಪ್ರಕಾರ ರೂ. 10 ಲಕ್ಷದಿಂದ ರೂ. 13 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಲಿದೆ.
ಫೆಬ್ರವರಿಯಲ್ಲಿ ಬಿಡುಗಡೆಯಾಗಲಿರುವ ಕಾರುಗಳ ಪಟ್ಟಿಯಲ್ಲಿ ಮತ್ತೊಂದು ಕಾರು ಮಾದರಿ ಅಂದ್ರೆ ಅದು ಮಾರುತಿ ಸುಜುಕಿ ಬ್ರೆಝಾ ಸಿಎನ್ ಜಿ. ಈ ಹೊಸ ಕಾರನ್ನ ಮಾರುತಿ ಸುಜುಕಿ ಕಂಪನಿಯು ಕಳೆದ ತಿಂಗಳು ನಡೆದಿದ್ದ ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿತ್ತು. ಇದೀಗ ಕಂಪನಿಯು ಹೊಸ ಕಾರನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸುತ್ತಿದ್ದು, ಹೊಸ ಕಾರು ಅತ್ಯುತ್ತಮ ಮೈಲೇಜ್ ನೀಡಲಿದ್ದು, ಹೊಸ ಕಾರು ಪೆಟ್ರೋಲ್ ಮಾದರಿಗಿಂತ ತುಸು ದುಬಾರಿಯಾಗಿರಲಿದೆ.
ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳ ಪಟ್ಟಿಯಲ್ಲಿ ಟೊಯೊಟಾ ಹೊಸ ಇನೋವಾ ಕ್ರಿಸ್ಟಾ ಕೂಡಾ ಒಂದಾಗಿದೆ. ಸದ್ಯ ಟೊಯೊಟಾ ಕಂಪನಿಯು ಹೊಸ ಇನೋವಾ ಹೈಕ್ರಾಸ್ ಬಿಡುಗಡೆ ಮಾಡಿದ್ದು, ಹೊಸ ಕಾರಿನ ಜೊತೆಗೆ ಈ ಹಿಂದಿನ ಇನೋವಾ ಕ್ರಿಸ್ಟಾ ಕಾರಿನ ಮಾರಾಟವನ್ನು ಸಹ ಮುಂದುವರಿಸಲು ನಿರ್ಧರಿಸಿದೆ.
ಹೊಸ ಇನೋವಾ ಹೈಕ್ರಾಸ್ ಕಾರನ್ನ ಪೆಟ್ರೋಲ್ ಮತ್ತು ಹೈಬ್ರಿಡ್ ನಲ್ಲಿ ಮಾರಾಟ ಮಾಡುತ್ತಿರುವ ಟೊಯೊಟಾ ಕಂಪನಿ ಹೊಸ ಇನೋವಾ ಕ್ರಿಸ್ಟಾ ಕಾರನ್ನ ನವೀಕೃತ 2.4 ಲೀಟರ್ ಡೀಸೆಲ್ ಎಂಜಿನ್ ನೊಂದಿಗೆ ಮರುಪರಿಚಯಿಸುತ್ತಿದೆ. ಹೊಸ ಇನೋವಾ ಕ್ರಿಸ್ಟಾ ಡೀಸೆಲ್ ಕಾರು ಈ ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿದ್ದು, ಇದರಲ್ಲೂ ಸಹ ಸಾಮಾನ್ಯ ಪೆಟ್ರೋಲ್ ಎಂಜಿನ್ ಆಯ್ಕೆ ಲಭ್ಯವಿರಲಿದೆ.
Published On - 6:58 pm, Sun, 5 February 23