ಉತ್ತರ ಕನ್ನಡದ ಕಾಡಿನಂಚಿನಲ್ಲಿ ಗೆಡ್ಡೆ ಗೆಣಸು ಮೇಳ, ಫೋಟೋಸ್ ನೋಡಿ
TV9 Web | Updated By: ವಿವೇಕ ಬಿರಾದಾರ
Updated on:
Jan 09, 2025 | 8:34 AM
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕು ಹಲವು ವಿಶೇಷತೆಗಳ ಆಗರವಾಗಿದೆ. ಔಷಧಿಯ ಗುಣ ಹೊಂದಿರುವ ಮತ್ತು ರುಚಿಕರವಾದ ನೂರಕ್ಕೂ ಹೆಚ್ಚು ಗೆಡ್ಡೆ-ಗೆಣಸುಗಳನ್ನು ಕಾಡಿನಂಚಿನಲ್ಲಿರುವ ಜಮೀನುಗಳಲ್ಲಿ ಬೆಳೆಯಲಾಗುತ್ತದೆ. ಜೋಯಿಡಾ ಭಾಗದಲ್ಲಿನ ಕುಣಬಿ ಸಮಾಜದವರೇ ಹೆಚ್ಚಾಗಿ ಬೆಳೆಯುವ ಈ ಗೆಡ್ಡೆ-ಗೆಣಸುಗಳ ಖಾದ್ಯ ತಯಾರಿಕಾ ವಿಧಾನ ಮತ್ತು ಅದರ ವಿಶೇಷತೆ ಕುರಿತ ಮಾಹಿತಿ ಇಲ್ಲಿದೆ.
1 / 7
ಜೋಯಿಡಾ ಅಂತರಾಷ್ಟ್ರಿಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಮುಂದಾಗಿದೆ. ಹೌದು, ಜೋಯಿಡಾ ಮಣ್ಣಿನಲ್ಲಿ ಎಲ್ಲಿಯೂ ಬೆಳೆಯಲಾಗದ, ಎಲ್ಲಿಯೂ ನೋಡಲಾಗದ ನೂರಕ್ಕೂ ಹೆಚ್ಚು ಬಗೆಯ ಗೆಡ್ಡೆ-ಗೆಣಸುಗಳನ್ನು ಬೆಳೆಯಲಾಗುತ್ತೆ. ಪ್ರತಿಯೊಂದು ಗೆಡ್ಡೆ-ಗೆಣಸು ಒಂದೊಂದು ವಿಶೇಷತೆ ಹೊಂದಿದ್ದು ಅವುಗಳಿಂದ ವಿವಿಧ ಬಗೆಯ ಖಾದ್ಯಗಳನ್ನು ಮಾಡಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದು ಗೆಡ್ಡೆ-ಗೆಣಸು ಮೇಳ.
2 / 7
ಜೋಯಿಡಾ ಪಟ್ಟಣದ ಕುಣಬಿ ಸಭಾ ಭವನದಲ್ಲಿ ಬುಧವಾರ ಗೆಡ್ಡೆ ಗೆಣಸು ಮೇಳ ಆಯೋಜನೆ ಮಾಡಲಾಗಿತ್ತು. ಪ್ರತೀ ವರ್ಷ ಸಂಕ್ರಾಂತಿ ಸಮಯದಲ್ಲಿ ದಿನ ನಡೆಯುವ ಈ ಮೇಳದಲ್ಲಿ ಮೂರರಿಂದ ಐದು ಕೆಜಿಗಿಂತ ಅಧಿಕ ತೂಗುವ ಗೆಡ್ಡೆಗಳ ರಾಶಿಯೇ ಕಾಣಬಹುದು. ವಿಭಿನ್ನ ಗಾತ್ರ, ವಿಭಿನ್ನ ರುಚಿಯ ಔಷಧಿಯ ಗುಣವುಳ್ಳ ಗೆಡ್ಡೆಗಳ ಸಂಗ್ರಹವೇ ಈ ಮೇಳದಲ್ಲಿ ಕಾಣ ಸಿಗುತ್ತವೆ.
3 / 7
ಅಲ್ಲದೇ, ಅವುಗಳಿಂದ ಮಾಡಲ್ಪಟ್ಟ ವಿವಿಧ ಬಗೆಯ ತಿಂಡಿ ತಿನಿಸುಗಳ ಸಂಗ್ರಹವೂ ಇಲ್ಲಿರುತ್ತದೆ. ಇಲ್ಲಿ ರೈತರಿಗೆ ಸ್ಪರ್ಧೆಗಳನ್ನು ಕೂಡಾ ಏರ್ಪಡಿಸಲಾಗುತ್ತದೆ. ಗೆಡ್ಡೆ ಪ್ರಬೇಧ ಮತ್ತು ಗಾತ್ರಕ್ಕೆ ಅನುಗುಣವಾಗಿ ಬಹುಮಾನ ನೀಡಲಾಗುತ್ತದೆ.
4 / 7
ಕಳೆದ 8-10 ವರ್ಷಗಳಿಂದ ಈ ಮೇಳ ಆಯೋಜಿಸಲಾಗುತ್ತಿದ್ದು, ಪ್ರಸ್ತುತ, ಜೋಯ್ಡಾದ ಈ ಗೆಡ್ಡೆಗಳು ಹೊರ ರಾಜ್ಯದಲ್ಲೂ ಸಾಕಷ್ಟು ಖ್ಯಾತಿ ಪಡೆದುಕೊಂಡಿವೆ. ಆದರೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆ ತರಲು, ಜಿಐ ಟ್ಯಾಗ್ ಮಾನ್ಯತೆ ನೀಡಲು ಪ್ರಯತ್ನ ನಡೆಯುತ್ತಿದೆ ಎಂದು ಶಾಸಕ ಆರ್.ವಿ ದೇಶಪಾಂಡೆ ತಿಳಿಸಿದರು.
5 / 7
ಮೇಳದಲ್ಲಿ ಕಾಡು ಮತ್ತು ಕಪ್ಪು ಮಣ್ಣಲ್ಲಿ ಬೆಳೆಯುವ ಗೆಡ್ಡೆಗಳ ಗುಚ್ಚವೇ ರಾರಾಜಿಸುತ್ತಿತ್ತು. ಬಿಳಿ ಕೋನ್ ಗೆಡ್ಡೆ, ಕೆಂಪ್ ಕೋನ್ ಗೆಡ್ಡೆ, ಅಂಬೆಹಳದ್ ಗೆಡ್ಡೆ, ಸೂರನಗೆಡ್ಡೆ, ದವೆಗೆಡ್ಡೆ, ಕಚ್ಚಿಪುಗೆಡ್ಡೆ, ಕುಸುಗೆಡ್ಡೆ, ವೈಕನ್ಗೆಡ್ಡೆ, ಒಕಾಟೆ ಗೆಡ್ಡೆ, ಚಿರಗೆಗೆಡ್ಡೆ, ಗುಟ್ಟುಗೆಡ್ಡೆ, ಕಾಯಿಮಡಿಗೆಡ್ಡೆ, ಜಾಡ್ಕಣಗೆಡ್ಡೆ, ಗೆಣಸುಗೆಡ್ಡೆ, ಮುಡ್ಲಿಗೆಡ್ಡೆ, ತಂಬಡೆ ಗೆಡ್ಡೆ, ದುಕ್ಕನ್ ಗೆಡ್ಡೆ, ಕೆಂಪು ಗೆಣಸು, ಹಸಿರು ಗೆಣಸು, ಕಪ್ ಗೆಣಸು, ಚಿರಕಾಟೆ ಗೆಡ್ಡೆ ಮುಂತಾದವುಗಳು ಸೇರಿ ಸುಮಾರು 150ಕ್ಕೂ ಅಧಿಕ ಜಾತಿಯ ಗೆಡ್ಡೆಗಳನ್ನು ಈ ಮೇಳದಲ್ಲಿ ಕಾಣಬಹುದಾಗಿತ್ತು.
6 / 7
ವಿಶೇಷವಾಗಿ ಕುಣಬಿ ಜನಾಂಗದ ಮಹಿಳೆಯರೇ ಬೆಳೆಯುವ ಬಗೆ ಬಗೆಯ ಗೆಡ್ಡೆಗಳು ಭರ್ಜರಿ ಮಾರಾಟವಾಗಿದ್ದು, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದಲೂ ಜನರು ಬಂದು ಇಲ್ಲಿಂದ ಗೆಡ್ಡೆ-ಗೆಣಸು ಖರೀದಿಸಿದರು. ಆದರೆ, ಇನ್ನಷ್ಟು ಪ್ರಚಾರ ಸಿಕ್ಕರೆ ಗೆಡ್ಡೆ-ಗೆಣಸು ಬೆಳೆಯುವ ರೈತರು ಆರ್ಥಿಕವಾಗಿ ಸಭಲವಾಗುತ್ತಾರೆ. ಅಲ್ಲದೆ ಜನರಿಗೆ ಒಳ್ಳೆಯ ಆಹಾರ ಪದಾರ್ಥ ಸಿಕ್ಕಂತಾಗುತ್ತದೆ.
7 / 7
ಒಟ್ಟಾರೆಯಾಗಿ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ಬೆಳೆಯುವ ಗೆಡ್ಡೆ ಗೆಣಸುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಇನ್ನಾದರೂ ಆರಂಭವಾಗಬೇಕಿದೆ. ಕನಿಷ್ಠಪಕ್ಷ ಪ್ರವಾಸಕ್ಕೆಂದು ಬರುವ ಪ್ರವಾಸಿಗರಿಗೆ ತಮ್ಮ ಹೊಂ ಸ್ಟೇ ಹಾಗೂ ರೆಸಾರ್ಟ್ಗಳಲ್ಲಿ ಗೆಡ್ಡೆಯಿಂದ ತಯಾರಿಸಿದ ಆಹಾರ ಪದಾರ್ಥ ಉಣ ಬಡಿಸಿದರೆ ಉಚಿತವಾಗಿ ಪ್ರಚಾರ ಸಿಗಬಹುದು. ಆದರೆ, ಈ ಕೆಲಸ ಸ್ಥಳಿಯರು ಇನ್ನಾದರೂ ಮಾಡಬೇಕಿದೆ.