
ಉತ್ತರ ಕರ್ನಾಟಕ ಭಾಗದ ಜಾತ್ರೆಗಳು ವಿಶೇಷವಾಗಿ ನಡೆಯುತ್ತವೆ. ಅದರಲ್ಲೂ ಹನುಮಂತ ದೇವರ ಹಾಲೋಕುಳಿಯ ಪದ್ದತಿ ವಿಭಿನ್ನವಾಗಿ ನಡೆಯುತ್ತದೆ. ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಶೇಗುಣಸಿ ಗ್ರಾಮದಲ್ಲಿ ಹನುಮಂತ ದೇವರ ಜಾತ್ರೆಯ ಪ್ರಯುಕ್ತ ಪ್ರತಿ ವರ್ಷದ ಸಂಪ್ರದಾಯದಂತೆ ಹಾಲೋಕುಳಿ ಸಂಭ್ರಮ ಮನೆ ಮಾಡಿತ್ತು.

ಸಾವಿರಾರು ಜನರ ಮದ್ಯೆ ನಡೆಯುವ ಹಾಲೋಕುಳಿ ಪದ್ದತಿ ಸಾಹಸಮಯ ಹಾಗೂ ಆಕರ್ಷಕವಾಗಿ ನಡೆಯುತ್ತದೆ. ಹನುಮಂತ ದೇವಸ್ಥಾನದ ಮುಂದೆ 50 ಅಡಿ ಎತ್ತರದ ಕಂಬವನ್ನು ನೆಡಲಾಗಿರುತ್ತದೆ. ಕಂಬದ ಮೇಲೆ ದೇವರ ಅಂಬಲಿ ಹಾಗೂ ಸಿಹಿ ಖಾದ್ಯಗಳನ್ನು ಇಟ್ಟುಕೊಂಡು ಪೂಜಾರಿಕೆ ಮಾಡುವವರು ಕುಳಿತಿರುತ್ತಾರೆ. ಕಂಬ ಏರದಂತೆ ತಡೆಯಲು ಎಣ್ಣೆ ತುಪ್ಪ ಅಂಬಲಿ ಸವರಿರುತ್ತಾರೆ. ಈ ಕಂಬವನ್ನು ಏರಿ ಮೇಲಿರುವ ದೇವರ ಅಂಬಲಿಯ ಗಡಿಗೆಯನ್ನು ಒಡೆಯಬೇಕು.

ಹೀಗೆ ಜಾರು ಕಂಬವನ್ನು ಏರಲು ಗ್ರಾಮದ ಯುವಕರ ಹಲವಾರು ತಂಡಗಳು ಭಾಗಿಯಾಗಿರುತ್ತವೆ. ಒಂದೊಂದು ತಂಡಗಳು ಪರಸ್ಪರ ಪೈಪೋಟಿಗೆ ಇಳಿದು ಜಾರುಕಂಬವನ್ನು ಏರಲು ಪ್ರಯತ್ನ ಮಾಡುವುದನ್ನು ನೋಡುವುದೇ ಒಂದು ಹಬ್ಬವಾಗಿರುತ್ತದೆ. ನೆರೆದ ಜನರು ಸಿಳ್ಳೆ ಕೇಕೆ ಹಾಕುವ ಮೂಲಕ ಹುರುದುಂಬಿಸುತ್ತಾರೆ.

ಹಾಲೋಕುಳಿ ಕಂಬ ಏರಲು ಒಂದು ತಂಡದವರು ಮಾನವ ಗೋಪುರ ಮಾಡಿ ಮೇಲೇರಲು ಮುಂದಾದಾಗ ಮತ್ತೊಂದು ತಂಡವರು ಅವರ ಮೇಲೆ ನೀರು ಎರಚಿ ತಡೆಯಬೇಕು. ನೀರು ಒಂದು ತಂಡ ಜಾರುಗಂಬವನ್ನು ಏರಲು ಒಬ್ಬರ ಮೇಲೆ ಒಬ್ಬರಂತೆ ಮಾನವ ಗೋಪುರ ನಿರ್ಮಾಣ ಮಾಡುತ್ತಾ, ಬಟ್ಟೆಯನ್ನು ಕಂಬಕ್ಕೆ ಕಟ್ಟುತ್ತಾ ಮೇಲೇರಲು ಪ್ರಯತ್ನಿಸುತ್ತಾರೆ.

ಆಗ ಎದುರಾಳಿ ತಂಡದವರು ರಭಸವಾಗಿ ಅವರ ಮೇಲೆ ನೀರು ಎರಚುತ್ತಾರೆ. ಇಷ್ಟೆಲ್ಲದರ ಮಧ್ತೆ ಜಾರು ಕಂಬವನ್ನು ಕಷ್ಟಪಟ್ಟು ಏರಿ ದೇವರ ಅಂಬಲಿ ಗಡಿಗೆಯನ್ನು ಒಡೆದ ತಂಡ ಜಯಶಾಲಿಯಯಾದಂತೆ. ನೂರಾರು ವರ್ಷಗಳಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದೆ.

ಜಾರುಗಂಬ ಏರಿ ಮೇಲಿರುವ ದೇವರ ಅಂಬಲಿಯ ಗಡಿಗೆಯನ್ನು ಒಡೆದ ಬಳಿಕ ಹಾಲೋಕುಳಿಗೆ ತೆರೆ ಬೀಳುತ್ತದೆ. ಈ ಸಡಗರ ಸಂಭ್ರಮ ವೀಕ್ಷಣೆ ಮಾಡಲು ಸುತ್ತಮುತ್ತಲ ಗ್ರಾಮಗಳ ಜನರು ಆಗಮಿಸಿದ್ದರು. ಜಾತ್ರೆಯ ಸಂಭ್ರಮ ಸಡಗರ ಗ್ರಾಮದಲ್ಲಿ ಮನೆ ಮಾಡಿತ್ತು.