
ವಿರಾಟ್ ಕೊಹ್ಲಿ ಶನಿವಾರ ಭಾರತ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಸೋಲಿನ ಬೆನ್ನಲ್ಲೇ ಕೊಹ್ಲಿ ನಾಯಕತ್ವ ತೊರೆಯಲು ನಿರ್ಧರಿಸಿದ್ದರು. ಇದೀಗ ಕೊಹ್ಲಿ ಯಾವುದೇ ಫಾರ್ಮಾಟ್ನಲ್ಲಿ ಟೀಮ್ ಇಂಡಿಯಾದ ನಾಯಕರಲ್ಲ. ಅಂದರೆ ಕೇವಲ ಮೂರು ತಿಂಗಳಲ್ಲಿ ವಿರಾಟ್ ಕೊಹ್ಲಿ ನಾಲ್ಕು ತಂಡಗಳ ನಾಯಕತ್ವವನ್ನು ತೊರೆದಿರುವುದು ವಿಶೇಷ.

ಕೊಹ್ಲಿ 2013 ರಿಂದ IPL ತಂಡದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿದ್ದರು, ಆದರೆ IPL-2021 ರ ನಡುವೆ ಅವರು ಈ ತಂಡದ ನಾಯಕತ್ವವನ್ನು ತೊರೆಯಲು ನಿರ್ಧರಿಸಿದರು. ಅದರಂತೆ ಅಕ್ಟೋಬರ್ 11 ರಂದು ಕೊಹ್ಲಿ RCB ನಾಯಕನಾಗಿ ತಮ್ಮ ಕೊನೆಯ ಪಂದ್ಯವನ್ನು ಆಡಿದರು.

ಅಕ್ಟೋಬರ್-ನವೆಂಬರ್‌ನಲ್ಲಿ ನಡೆದ ಐಸಿಸಿ ಟಿ 20 ವಿಶ್ವಕಪ್‌ಗೆ ಮುನ್ನ ಕೊಹ್ಲಿ ಟಿ20 ತಂಡದ ನಾಯಕತ್ವವನ್ನು ತೊರೆಯುವುದಾಗಿ ಹೇಳಿದ್ದರು. ಟಿ20 ವಿಶ್ವಕಪ್ನಲ್ಲಿ ಲೀಗ್ ಹಂತದಲ್ಲೇ ಟೀಮ್ ಇಂಡಿಯಾ ಹೊರಬೀಳುತ್ತಿದ್ದಂತೆ ಕೊಹ್ಲಿ ಕೂಡ ರಾಜೀನಾಮೆ ನೀಡಿದರು.

ಇದಾದ ಬಳಿಕ ರೋಹಿತ್ ಶರ್ಮಾ ಟಿ20 ತಂಡದ ನಾಯಕರಾಗಿದ್ದರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿಯನ್ನು ಏಕದಿನ ತಂಡದ ನಾಯಕತ್ವದಿಂದ ಬಿಸಿಸಿಐ ಡಿಸೆಂಬರ್ನಲ್ಲಿ ಕೆಳಗಿಳಿಸಿತ್ತು. ಅಲ್ಲದೆ ರೋಹಿತ್ ಶರ್ಮಾರನ್ನು ಹೊಸ ನಾಯಕನಾಗಿ ಘೋಷಿಸಿತು. ಇದಾಗ್ಯೂ ಕೊಹ್ಲಿ ಟೆಸ್ಟ್ ತಂಡದ ನಾಯಕರಾಗಿ ಮುಂದುವರೆದಿದ್ದರು.

ಹೊಸ ವರ್ಷದಲ್ಲಿ ಹೊಸ ಆರಂಭ ಎಂಬಂತೆ ದಕ್ಷಿಣ ಆಫ್ರಿಕಾದಲ್ಲಿ ಟೀಮ್ ಇಂಡಿಯಾವನ್ನು ಚಾಂಪಿಯನ್ ಪಟ್ಟಕ್ಕೇರಿಸಲು ಕೊಹ್ಲಿ ಪಣತೊಟ್ಟಿದ್ದರು. ಆದರೆ ಮೊದಲ ಪಂದ್ಯ ಗೆದ್ದ ಟೀಮ್ ಇಂಡಿಯಾ, ಆ ಬಳಿಕ 2 ಪಂದ್ಯಗಳಲ್ಲಿ ಸೋಲನುಭವಿಸಿತು. ಇದರ ಬೆನ್ನಲ್ಲೇ ಇದೀಗ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವಕ್ಕೂ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಅಂದರೆ ಕಳೆದ 30 ತಿಂಗಳುಗಳ ಅವಧಿಯಲ್ಲಿ ಕೊಹ್ಲಿ 4 ತಂಡಗಳ ನಾಯಕತ್ವವನ್ನೂ ತ್ಯಜಿಸಿದ್ದಾರೆ.