- Kannada News Photo gallery Warren Buffett hold cash equal to half of India's Union Budget size, details in Kannada
ವಾರನ್ ಬಫೆ ಕೈಲಿರೋ ಕ್ಯಾಷ್ ಎಷ್ಟು ಗೊತ್ತಾ? ಭಾರತ ಸರ್ಕಾರದ ವಾರ್ಷಿಕ ಬಜೆಟ್ನ ಅರ್ಧ ಮೊತ್ತದ ನಗದು ಇಟ್ಟುಕೊಂಡಿದ್ದಾರೆ ಹೂಡಿಕೆ ಮಾಂತ್ರಿಕ
ವಾಷಿಂಗ್ಟನ್, ಆಗಸ್ಟ್ 16: ವಿಶ್ವದ ಅತೀ ಶ್ರೀಮಂತರಲ್ಲಿ ಒಬ್ಬರಾದ ವಾರನ್ ಬಫೆ ಮಾಲಕತ್ವದ ಬರ್ಕ್ಶೈರ್ ಹಾಥವೇ ಒಂದು ಟ್ರಿಲಿಯನ್ ಡಾಲರ್ಗೂ ಹೆಚ್ಚು ಮೊತ್ತದ ಹೂಡಿಕೆ ಆಸ್ತಿಗಳನ್ನು ಹೊಂದಿದೆ. ಕಳೆದ ಒಂದೆರಡು ವರ್ಷದಲ್ಲಿ ಅವರು ಆ್ಯಪಲ್ ಸೇರಿದಂತೆ ಬಹಳಷ್ಟು ಕಂಪನಿಗಳಲ್ಲಿನ ಷೇರುಪಾಲನ್ನು ಮಾರಿದ್ದಾರೆ. ಈಗ ಅವರ ಬಳಿ ಇರುವ ಕ್ಯಾಷ್ ಬರೋಬ್ಬರಿ 277 ಬಿಲಿಯನ್ ಡಾಲರ್.
Updated on: Aug 16, 2024 | 1:06 PM

ವಿಶ್ವದ ಅತಿದೊಡ್ಡ ಹೂಡಿಕೆದಾರರಲ್ಲಿ ಒಬ್ಬರೆನಿಸಿರುವ ವಾರನ್ ಬಫೆ ಅವರ ಬರ್ಕ್ಶೈರ್ ಹಾಥವೇ ಇತ್ತೀಚೆಗೆ ತನ್ನ ಪಾಲಿನ ಬಹಳಷ್ಟು ಷೇರುಗಳನ್ನು ಮಾರಿದೆ. ಇದೀಗ ಹಾಥವೇ ಬಳಿ ಕ್ಯಾಷ್ ಹಣ ದಂಡಿಯಾಗಿ ಸಂಗ್ರಹವಾಗಿದೆ. ಜೂನ್ ಅಂತ್ಯದ ಕ್ವಾರ್ಟರ್ನಲ್ಲಿ 276.9 ಬಿಲಿಯನ್ ಡಾಲರ್ನಷ್ಟು ನಗದು ಹಣವನ್ನು ಇಟ್ಟುಕೊಂಡಿದೆ. ಈ ಹಣವನ್ನು ಅದು ಸೂಕ್ತ ಕಾಲಕ್ಕೆ ಸೂಕ್ತ ಷೇರುಗಳಲ್ಲಿ ಹೂಡಿಕೆ ಮಾಡಲು ಕಾದು ಕೂತಂದಿದೆ.

276 ಬಿಲಿಯನ್ ಡಾಲರ್ ಎಂದರೆ ಸುಮಾರು 23 ಲಕ್ಷ ಕೋಟಿ ರೂಪಾಯಿ ಆಗುತ್ತದೆ. ಈ ಬಾರಿ ಭಾರತದ ಕೇಂದ್ರ ಬಜೆಟ್ ಗಾತ್ರ 46 ಲಕ್ಷ ಕೋಟಿ ರೂ. ಇದರ ಅರ್ಧದಷ್ಟು ಹಣವನ್ನು ವಾರನ್ ಬಫೆಟ್ ಇಟ್ಟುಕೊಂಡು ಕೂತಿದ್ದಾರೆ.

ಬರ್ಕ್ಶೈರ್ ಹಾಥವೇ ಸಂಸ್ಥೆ ಬಳಿ ಇರುವ ಒಟ್ಟಾರೆ ಆಸ್ತಿಮೌಲ್ಯ ಒಂದು ಟ್ರಿಲಿಯನ್ ಡಾಲರ್ಗೂ ಹೆಚ್ಚು. ತನ್ನ ಆಸ್ತಿಯಲ್ಲಿ ಶೇ. 25ರಷ್ಟು ಮೊತ್ತದ ಕ್ಯಾಷ್ ಅನ್ನು ಇಟ್ಟುಕೊಂಡಿದೆ. ಇಷ್ಟು ಪ್ರಮಾಣದ ನಗದನ್ನು ಸಂಸ್ಥೆ 2005ರ ಬಳಿಕ ಇದೇ ಮೊದಲ ಬಾರಿಗೆ ಹೊಂದಿರುವುದು.

ವಾರನ್ ಬಫೆ ಅವರು ಆ್ಯಪಲ್ ಕಂಪನಿಯಲ್ಲಿ ಸಾಕಷ್ಟು ಷೇರುಗಳನ್ನು ಹೊಂದಿದ್ದರು. ತನ್ನ ಅರ್ಧದಷ್ಟು ಷೇರುಗಳನ್ನು ಅವರು ಇತ್ತೀಚೆಗೆ ಬಿಕರಿ ಮಾಡಿದ್ದರು. ಅವರ ಈ ನಡೆ ಬಹಳ ಜನರಿಗೆ ಸೋಜಿತ ಎನಿಸಿದೆ. ಬ್ಯಾಂಕ್ ಆಫ್ ಅಮೆರಿಕದ ಸಾಕಷ್ಟು ಷೇರುಗಳನ್ನೂ ವಾರನ್ ಬಫೆ ಮಾರಿದ್ದಾರೆ.

ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಅಪಾಯ ಕಾಣುತ್ತಿದೆ. ಹೆಚ್ಚು ಕಾರ್ಪೊರೇಟ್ ತೆರಿಗೆಗಳನ್ನು ಹೇರಲಾಗುವ ಸಾಧ್ಯತೆ ಮುಂದಿನ ದಿನಗಳಲ್ಲಿ ಇದೆ. ಈ ಕಾರಣಕ್ಕೆ ಸಾಕಷ್ಟು ಷೇರುಗಳನ್ನು ಅವರು ಮಾರಿ ಹಣ ಇಟ್ಟುಕೊಂಡಿರಬಹುದು ಎನ್ನಲಾಗುತ್ತಿದೆ. ಬರ್ಕ್ಶೈರ್ ಹಾಥವೇ ಕಂಪನಿಯ ವಾರ್ಷಿಕ ಸಭೆಯಲ್ಲಿ ಅವರು ಈ ಬಗ್ಗೆ ಬಫೆ ಪರೋಕ್ಷವಾಗಿ ಸುಳಿವು ನೀಡಿದ್ದರು.

ಕೈಯಲ್ಲಿ ದಂಡಿ ಹಣ ಇಟ್ಟುಕೊಂಡಿರುವ ಬರ್ಕ್ಶೈರ್ ಸಂಸ್ಥೆ ಆತುರವಾಗಿ ಹೂಡಿಕೆ ಮಾಡದಿರಲು ನಿರ್ಧರಿಸಿದೆ. ಬಹಳ ಕಡಿಮೆ ರಿಸ್ಕ್ ಅಂತ ಅನಿಸಿ, ಸಾಕಷ್ಟು ರಿಟರ್ನ್ ಸಿಗಬಹುದು ಎನ್ನುವ ವಿಶ್ವಾಸ ಮೂಡಿದರೆ ಮಾತ್ರ ಅಂತಹ ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದಾಗಿ ವಾರನ್ ಬಫೆಟ್ ಎಜಿಎಂ ಸಭೆಯಲ್ಲಿ ಹೇಳೀದ್ದರು.




