ಕ್ರಿಕೆಟ್ ಲೋಕದಲ್ಲಿ ಸಚಿನ್ ತೆಂಡೂಲ್ಕರ್ ನಿರ್ಮಿಸಿರುವ ದಾಖಲೆಯನ್ನು ಮುರಿಯುವ ಮತ್ತೊಬ್ಬ ಬ್ಯಾಟ್ಸ್‌ಮನ್ ಯಾರು ಎಂಬ ಪ್ರಶ್ನೆಗೆ ಹಲವರಿಂದ ಬರುವ ಒಂದೇ ಒಂದು ಉತ್ತರವೆಂದರೆ ಅದು ವಿರಾಟ್ ಕೊಹ್ಲಿ. ಈಗಾಗಲೇ ಸಚಿನ್ ಅವರ ಹಲವು ದಾಖಲೆಗಳನ್ನು ಮುರಿದಿರುವ ವಿರಾಟ್ ಕೊಹ್ಲಿ, ಕ್ರಿಕೆಟ್ ದೇವರು ನಿರ್ಮಿಸಿರುವ ಶತಕಗಳ ಶತಕದ ದಾಖಲೆಯನ್ನು ಮುರಿಯುವ ಹಾದಿಯಲ್ಲಿದ್ದಾರೆ.
ಸಚಿನ್ ತೆಂಡೂಲ್ಕರ್ ತಮ್ಮ 24 ವರ್ಷಗಳ ವೃತ್ತಿ ಜೀವನದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಇದು ಅತಿ ಹೆಚ್ಚು ಶತಕಗಳು ಅಥವಾ ರನ್ ಆಗಿರಲಿ, ಕ್ರಿಕೆಟ್‌ನ ಬಹುತೇಕ ಎಲ್ಲಾ ದಾಖಲೆಗಳು ಸಚಿನ್ ಅವರ ಹೆಸರಿನಲ್ಲೇ ಇವೆ. ಭಾರತದ ಪರ 463 ಏಕದಿನ ಪಂದ್ಯಗಳನ್ನಾಡಿರುವ ಸಚಿನ್ 18426 ರನ್ ಗಳಿಸಿದ್ದರೆ, 200 ಟೆಸ್ಟ್ ಪಂದ್ಯಗಳಲ್ಲಿ 15921 ರನ್ ಗಳಿಸಿದ್ದಾರೆ. ಈ ಎರಡೂ ಮಾದರಿಗಳಲ್ಲಿ ಅವರು ಒಟ್ಟು 100 ಶತಕ ಮತ್ತು 164 ಅರ್ಧ ಶತಕಗಳನ್ನು ಸಚಿನ್ ಸಿಡಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಮುಂಬೈನಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಚಿನ್ ತಮ್ಮ ಈ ದಾಖಲೆಗಳನ್ನು ಯಾವುದೇ ಭಾರತೀಯ, ವಿಶೇಷವಾಗಿ ವಿರಾಟ್ ಕೊಹ್ಲಿ ಅಥವಾ ರೋಹಿತ್ ಶರ್ಮಾ ಮುರಿಯಬೇಕು ಎಂದು ಬಯಸಿದ್ದರು. ಸಚಿನ್ ಅವರ ಹೇಳಿಕೆಯಂತೆಯೇ ಕೊಹ್ಲಿ ದಾಖಲೆಗಳನ್ನು ಮುರಿಯುವ ಕೆಲಸದಲ್ಲಿ ನಿರತರಾಗಿದ್ದಾರೆ.
ಆದರೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಮಾತ್ರ ಇದಕ್ಕೆ ತದ್ವೀರುದ್ಧವಾದ ಹೇಳಿಕೆ ನೀಡಿದ್ದು, ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೋ ರೂಟ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಮಾಜಿ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇತ್ತೀಚೆಗಷ್ಟೇ ಐಸಿಸಿ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಪಾಂಟಿಂಗ್, ಜೋ ರೂಟ್ಗೆ, ಸಚಿನ್ ಅವರ ಟೆಸ್ಟ್ ರನ್‌ಗಳ ದಾಖಲೆಯ ಮುರಿಯಲು 3000 ರನ್‌ಗಳ ಅಗತ್ಯವಿದೆ. ಅವರು ಎಷ್ಟು ಟೆಸ್ಟ್ ಆಡುತ್ತಾರೆ ನೋಡೋಣ. ವರ್ಷಕ್ಕೆ 10 ರಿಂದ 14 ಟೆಸ್ಟ್‌ಗಳನ್ನು ಆಡಿದರೆ ಮತ್ತು ಪ್ರತಿ ವರ್ಷ 800 ರಿಂದ 1000 ರನ್ ಗಳಿಸಿದರೆ, ಅವರು ಮೂರ್ನಾಲ್ಕು ವರ್ಷಗಳಲ್ಲಿ ಸಚಿನ್ ಅವರ ದಾಖಲೆ ಮುರಿಯಲಿದ್ದಾರೆ ಎಂದಿದ್ದಾರೆ.
ರೂಟ್ ಇದುವರೆಗೆ 143 ಟೆಸ್ಟ್‌ಗಳಲ್ಲಿ 12027 ರನ್ ಗಳಿಸಿದ್ದಾರೆ. ಈ ಮೂಲಕ ರೂಟ್, ಶ್ರೀಲಂಕಾದ ಕುಮಾರ ಸಂಗಕ್ಕಾರ (12400 ರನ್) ಮತ್ತು ಅಲೆಸ್ಟೈರ್ ಕುಕ್ (12472 ರನ್) ಅವರನ್ನು ಹಿಂದಿಕ್ಕುವ ಸಮೀಪದಲ್ಲಿದ್ದಾರೆ. ಇನ್ನು ಸಚಿನ್ ತೆಂಡೂಲ್ಕರ್ ಆಡಿರುವ 200 ಟೆಸ್ಟ್‌ಗಳಲ್ಲಿ 15921 ರನ್ ಬಾರಿಸಿದ್ದರೆ, ರಿಕಿ ಪಾಂಟಿಂಗ್ 168 ಟೆಸ್ಟ್‌ಗಳಲ್ಲಿ 13378 ರನ್ ಸಿಡಿಸಿದ್ದು, ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
Published On - 5:16 pm, Fri, 16 August 24