
ಕತಾರ್ ವಿಶ್ವಕಪ್ ಅಂತಿಮ ಹಂತಕ್ಕೆ ಬಂದಿದೆ. ವಿಶ್ವಕಪ್‌ನೊಂದಿಗೆ ಯಾರು ಮನೆಗೆ ಮರಳುತ್ತಾರೆ ಎಂಬುದನ್ನು ಇನ್ನು ಕೆಲವೇ ಗಂಟೆಗಳಲ್ಲಿ ನಿರ್ಧರಿಸಲಾಗುತ್ತದೆ. ಈ ಚಾಂಪಿಯನ್ ಪಟ್ಟಕ್ಕಾಗಿ ಫ್ರಾನ್ಸ್ ಹಾಗೂ ಅರ್ಜೇಂಟಿನಾ ತಂಡಗಳು ಭಾನುವಾರ ಸೆಣಸಲಿವೆ.

ವಿಶ್ವಕಪ್ ಅಂತ್ಯ ಸನಿಹವಾಗುತ್ತಿದ್ದಂತೆ ಈ ಟೂರ್ನಿಯ ಎರಡು ಪ್ರತಿಷ್ಠಿತ ಪ್ರಶಸ್ತಿಗಳು ಯಾರಿಗೆ ಸಲ್ಲುತ್ತವೆ ಎಂಬ ಕುತೂಹಲ ಈಗಾಗಲೇ ಶುರುವಾಗಿದೆ. ವಾಸ್ತವವಾಗಿ, ವಿಶ್ವಕಪ್‌ನಲ್ಲಿ ಹೆಚ್ಚು ಗೋಲು ಗಳಿಸಿದ ವ್ಯಕ್ತಿಗೆ ಗೋಲ್ಡನ್ ಬೂಟ್ ಮತ್ತು ಈ ಆವೃತ್ತಿಯ ಅತ್ಯುತ್ತಮ ಆಟಗಾರನಿಗೆ ಗೋಲ್ಡನ್ ಬಾಲ್ ಪ್ರಶಸ್ತಿಯನ್ನು ನೀಡಲಾಗುತ್ತದೆ. ಕತಾರ್ ವಿಶ್ವಕಪ್‌ನಲ್ಲಿ ಗೋಲ್ಡನ್ ಬೂಟ್ ಮತ್ತು ಗೋಲ್ಡನ್ ಬಾಲ್ ಪ್ರಶಸ್ತಿಯನ್ನು ಯಾರು ಗೆಲ್ಲಬಹುದು ಎಂಬುದಕ್ಕೆ ಇಷ್ಟರಲ್ಲೇ ಉ್ತತರ ಸಿಗಲಿದೆ. ಆದರೆ ಅದಕ್ಕೂ ಮುನ್ನ ಸಂಭಾವ್ಯ ಸ್ಪರ್ಧಿಗಳು ಯಾರು ಎಂಬುದನ್ನು ನೋಡೋಣ.

ಫ್ರಾನ್ಸ್‌ನ ಸೂಪರ್‌ಸ್ಟಾರ್ ಕೈಲಿಯನ್ ಎಂಬಪ್ಪೆ ಮತ್ತು ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ಗೋಲ್ಡನ್ ಬೂಟ್ ರೇಸ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಈ ವಿಶ್ವಕಪ್‌ನಲ್ಲಿ ಇಬ್ಬರೂ ಒಟ್ಟು 5 ಗೋಲುಗಳನ್ನು ಹೊಡೆದಿದ್ದಾರೆ.

ಗೋಲ್ಡನ್ ಬೂಟ್ ಹೋರಾಟದಲ್ಲಿ ಅರ್ಜೆಂಟೀನಾದ ಜೂಲಿಯನ್ ಅಲ್ವಾರೆಜ್ ಮತ್ತು ಫ್ರಾನ್ಸ್‌ನ ಒಲಿವಿಯರ್ ಗಿರೌಡ್ ಎರಡನೇ ಸ್ಥಾನದಲ್ಲಿದ್ದಾರೆ. ಇಲ್ಲಿಯವರೆಗೆ ಇಬ್ಬರೂ ತಲಾ 4 ಗೋಲು ಗಳಿಸಿದ್ದಾರೆ.

ಪ್ರದರ್ಶನದ ದೃಷ್ಟಿಯಿಂದ ನಿರ್ಣಯಿಸಿದರೆ, ಮೆಸ್ಸಿಯನ್ನು ಗೋಲ್ಡನ್ ಬಾಲ್ ಸ್ವೀಕರಿಸುವವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇರಿಸಬಹುದು. ಕತಾರ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಅವರ ಪ್ರದರ್ಶನವು ಅತ್ಯುತ್ತಮವಾಗಿತ್ತು. ತಾವೂ ಗೋಲು ಗಳಿಸುವುದರೊಂದಿಗೆ, ಮೂರು ಗೋಲುಗಳಿಗೆ ಅಸಿಸ್ಟ್ ಕೂಡ ಮಾಡಿದ್ದಾರೆ.

ಮೆಸ್ಸಿ ನಂತರ ಫ್ರಾನ್ಸ್‌ನ ಸ್ಟಾರ್ ಫುಟ್ಬಾಲ್ ಆಟಗಾರ ಕೈಲಿಯನ್ ಎಂಬಪ್ಪೆ ಅಮೋಘ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಫ್ರಾನ್ಸ್ ತಂಡವನ್ನು ಫೈನಲ್ಗೆ ತಲುಪಿಸುವಲ್ಲಿ ಅವರ ಪಾತ್ರ ನಿಜಕ್ಕೂ ಶ್ಲಾಘನೀಯ.

ಮೆಸ್ಸಿ ಮತ್ತು ಎಂಬಪ್ಪೆ ನಂತರ, ಫ್ರಾನ್ಸ್‌ನ ಅಂಟೋಯಾ ಗ್ರೀಜ್‌ಮನ್ ಗೋಲ್ಡನ್ ಬಾಲ್‌ನ ಸಂಭಾವ್ಯ ಹೋಲ್ಡರ್ ಆಗಬಹುದು. ಪಂದ್ಯಾವಳಿಯುದ್ದಕ್ಕೂ ಅವರು ಫ್ರೆಂಚ್ ಮಿಡ್‌ಫೀಲ್ಡ್ ಅನ್ನು ಉತ್ತಮ ಕೌಶಲ್ಯದಿಂದ ನಿಭಾಯಿಸಿದರು. ಅಗತ್ಯವಿದ್ದಾಗ ರಕ್ಷಣೆಗೂ ಸಹಾಯ ಮಾಡಿದರು.

ಮೊರೊಕ್ಕೊ ಮತ್ತು ಕ್ರೊವೇಷಿಯಾ ತಂಡಗಳು ಫೈನಲ್ ತಲುಪಲು ವಿಫಲವಾದರೂ, ಲೂಕಾ ಮೊಡ್ರಿಕ್ ಮತ್ತು ಸೋಫಿಯಾನೆ ಅಮರವತ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಈ ಇಬ್ಬರೂ ಕೂಡ ಗೋಲ್ಡನ್ ಬಾಲ್ ಪ್ರಶಸ್ತಿ ರೇಸ್‌ನಲ್ಲಿ ಸ್ಥಾನ ಪಡೆದಿದ್ದಾರೆ.