Updated on: Mar 22, 2022 | 7:39 AM
ಯಶ್ ನಟನೆಯ ‘ಕೆಜಿಎಫ್ 2’ ಸಿನಿಮಾ ರಿಲೀಸ್ಗೆ ಕೌಂಟ್ಡೌನ್ ಶುರುವಾಗಿದೆ. ಸಿನಿಮಾ ಕಣ್ತುಂಬಿಕೊಳ್ಳೋಕೆ ಫ್ಯಾನ್ಸ್ ಕಾದಿದ್ದಾರೆ. ಈ ಸಿನಿಮಾದ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಯಬೇಕು ಎನ್ನುವ ನಿಟ್ಟಿನಲ್ಲಿ ಪ್ರಚಾರ ಮಾಡಲಾಗುತ್ತಿದೆ.
‘ಕೆಜಿಎಫ್’ ಸಿನಿಮಾ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಿತ್ತು. ಬಾಲಿವುಡ್ ಮಂದಿ ಕೂಡ ಈ ಚಿತ್ರವನ್ನು ಒಪ್ಪಿಕೊಂಡರು. ಹೀಗಾಗಿ, ಹಿಂದಿಯಲ್ಲಿ ಸಿನಿಮಾ 44 ಕೋಟಿ ರೂಪಾಯಿ ಗಳಿಕೆ ಮಾಡಿತು. ಕನ್ನಡದ ಸಿನಿಮಾ ಹಿಂದಿಯಲ್ಲಿ ಇಷ್ಟು ದೊಡ್ಡ ಮಟ್ಟದ ಗಳಿಕೆ ಮಾಡಿದ್ದು ಅದೇ ಮೊದಲು. ಈ ಕಾರಣಕ್ಕೆ ‘ಕೆಜಿಎಫ್ 2’ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.
ಇನ್ನು, ‘ಕೆಜಿಎಫ್ 2’ನಲ್ಲಿ ಬಾಲಿವುಡ್ನ ದಿಗ್ಗಜರಿದ್ದಾರೆ. ಖ್ಯಾತ ನಟ ಸಂಜಯ್ ದತ್ ಅವರು ಈ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ರವೀನಾ ಟಂಡನ್ ರಾಜಕಾರಣಿಯ ಪಾತ್ರ ಮಾಡುತ್ತಿದ್ದಾರೆ. ಹೀಗಾಗಿ, ‘ಕೆಜಿಎಫ್ 2’ಗೆ ಹಿಂದಿ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಬೇಡಿಕೆ ಸೃಷ್ಟಿ ಆಗುತ್ತಿದೆ.
ಪ್ರಶಾಂತ್ ನೀಲ್ ತಂಡ ನಿಧಾನವಾಗಿ ಪ್ರಚಾರ ಕಾರ್ಯ ಆರಂಭಿಸಿದೆ. ಮಹಾರಾಷ್ಟ್ರ ಸೇರಿ ಅನೇಕ ಕಡೆಗಳಲ್ಲಿ ಮೊದಲ ಹಂತದ ಪ್ರಚಾರ ಕಾರ್ಯ ಆರಂಭಗೊಂಡಿದೆ. ಈ ಸಿನಿಮಾದ ದೊಡ್ಡದೊಡ್ಡ ಪೋಸ್ಟರ್ಗಳನ್ನು ಎಲ್ಲ ಕಡೆಗಳಲ್ಲಿ ಅಂಟಿಸಲಾಗುತ್ತಿದೆ. ಮುಂಬೈನಲ್ಲಿ ಆರಂತಸ್ತಿನ ಮಾಲ್ ಮೇಲೆ ಯಶ್ ಪೋಸ್ಟರ್ ರಾರಾಜಿಸಿದೆ.
ಪೋಸ್ಟರ್ ಮೂಲಕ ಹವಾ ಸೃಷ್ಟಿ ಮಾಡಿದ್ದ ಈ ಸಿನಿಮಾದ ಲಿರಿಕಲ್ ಸಾಂಗ್ ಮಾರ್ಚ್ 21ರಂದು ರಿಲೀಸ್ ಆಗಿದೆ. ಈ ಹಾಡು 10 ಗಂಟೆಯಲ್ಲಿ ಐದು ಭಾಷೆಗಳಲ್ಲಿ 93 ಲಕ್ಷ ಬಾರಿ ವೀಕ್ಷಣೆ ಕಂಡಿದೆ.