- Kannada News Photo gallery Year Ender 2025: From Pahalgam to the White House A Year of Pain, Hope, and Triumph in Pictures
Year Ender 2025: ಪಹಲ್ಗಾಮ್ನಿಂದ ಶ್ವೇತ ಭವನದವರೆಗೆ 2025ರಲ್ಲಿ ಪ್ರಪಂಚದಲ್ಲಿ ಏನೇನಾಯ್ತು?
2025ರಲ್ಲಿ ಭಯ, ನೋವು, ಗೆಲುವು ಹಾಗೂ ಭರವಸೆಯ ಮಿಶ್ರಣವಾಗಿತ್ತು. ಭಾರತೀಯರ ಪಾಲಿಗೆ ಕಹಿ ವರ್ಷವೇ ಆಗಿತ್ತು. ಪಹಲ್ಗಾಮ್ ದಾಳಿ, ಏರ್ ಇಂಡಿಯಾ ಅಪಘಾತಗಳು ಆಘಾತ ತಂದರೆ ಭಾರತ ಮೂಲದ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಹಾರಿ ಭಾರತಕ್ಕೆ ಹೆಮ್ಮೆ ತಂದಿದ್ದರು. ಭಾರತ ಸೇರಿ ಪ್ರಪಂಚಾದ್ಯಂತ 2025ರಲ್ಲಿ ನಡೆದ ಪ್ರಮುಖ ಘಟನೆಗಳ ಕುರಿತ ಒಂದಿಷ್ಟು ಮಾಹಿತಿ ಇಲ್ಲಿದೆ.
Updated on: Dec 08, 2025 | 9:47 AM

ಏಪ್ರಿಲ್ 22 ರಂದು, ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿರುವ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡಿದ್ದರು. ಉಗ್ರರು ಪ್ರವಾಸಿಗರ ಬಳಿ ಅವರ ಧರ್ಮವನ್ನು ಕೇಳಿ ಗುಂಡು ಹಾರಿಸಿದ್ದರು. ಈ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದರು. ಹಿಮಾಂಶಿ ನರ್ವಾಲ್ ಅವರು ತಮ್ಮ ಪತಿ ಮತ್ತು ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಮೃತ ದೇಹದ ಬಳಿ ಕುಳಿತಿದ್ದ ಚಿತ್ರವು ಅತ್ಯಂತ ನೋವುಂಟು ಮಾಡಿತ್ತು. ದಾಳಿಗೆ ಪ್ರತಿಕ್ರಿಯೆಯಾಗಿ, ಭಾರತವು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತು. ಈ ಕಾರ್ಯಾಚರಣೆಯ ಪ್ರಮುಖ ಅಂಶವೆಂದರೆ ಮಿಲಿಟರಿಯ ಬ್ರೀಫಿಂಗ್‌ಗಳನ್ನು ಇಬ್ಬರು ಮಹಿಳಾ ಅಧಿಕಾರಿಗಳು ಮಾಡಿದ್ದರು. ಸೇನಾ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಾಯುಪಡೆಯ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್. ಅವರು ಹಲವಾರು ಜಂಟಿ ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದರು.

ಭಾರತೀಯ ವಾಯುಪಡೆಯ ಪರೀಕ್ಷಾ ಪೈಲಟ್ ಶುಭಾಂಶು ಶುಕ್ಲಾ ಅವರು ಆಕ್ಸಿಯಮ್ ಮಿಷನ್ 4 ರ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ( ISS) ಹಾರಿದರು . 1984 ರಲ್ಲಿ ರಾಕೇಶ್ ಶರ್ಮಾ ನಂತರ ಬಾಹ್ಯಾಕಾಶಕ್ಕೆ ಹಾರಿದ ಎರಡನೇ ಭಾರತೀಯ ಎನ್ನುವ ಹೆಮ್ಮೆಗೆ ಪಾತ್ರರಾದರು. ಇದು ಇಡೀ ರಾಷ್ಟ್ರಕ್ಕೆ ಹೆಮ್ಮೆಯ ಕ್ಷಣವಾಗಿತ್ತು.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಮಾರ್ಚ್ 1 ರಂದು ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದರು. ಸಾಮಾನ್ಯ ಸಭೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಟ್ರಂಪ್ ಹಾಗೂ ಝೆಲೆನ್ಸ್ಕಿ ನಡುವೆ ಘರ್ಷಣೆ ಏರ್ಪಟ್ಟಿತ್ತು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಲೇಕನ್ ರಿಲೇ ಆಕ್ಟ್ ಗೆ ಸಹಿಹಾಕಿದ ಬಳಿಕ ಅಕ್ರಮ ವಲಸಿಗರನ್ನು ವಿಮಾನಕ್ಕೆ ತುಂಬಿ ಆಯಾ ರಾಷ್ಟ್ರಗಳಿಗೆ ಕಳುಹಿಸಲು ಪ್ರಾರಂಭಿಸಿದ್ದರು. ಅಮೆರಿಕ 15 ಲಕ್ಷ ಅಕ್ರಮ ವಲಸಿಗರನ್ನು ಪಟ್ಟಿ ಮಾಡಿದ್ದು, ಇದರಲ್ಲಿ ಭಾರತೀಯರೇ 20,407 ಮಂದಿ ಇದ್ದರು. ಏಜೆಂಟುಗಳ ಮಾತುಗಳನ್ನು ನಂಬಿ, ಡಾಂಕಿ ಮಾರ್ಗದ ಮೂಲಕ ಅಮೆರಿಕವನ್ನು ಹಿಂಬಾಗಿಲಿನಿಂದ ಪ್ರವೇಶಿಸಿದವರು. ಇವರಾರ ಬಳಿಯೂ ಸೂಕ್ತ ದಾಖಲೆಗಳಿಲ್ಲ. ವಿಮಾನಗಳಲ್ಲಿ, ಕೆಲವೊಮ್ಮೆ ಹಡಗುಗಳ ಕಂಟೈನರ್‌ಗಳಲ್ಲಿ ಕುಳಿತು ಪ್ರಯಾಣಿಸಿದವರಾಗಿದ್ದರು.

ನವೆಂಬರ್‌ನಲ್ಲಿ, ಹಾಂಗ್ ಕಾಂಗ್‌ನ ದೊಡ್ಡ ವಸತಿ ಸಂಕೀರ್ಣವೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 159 ಜನರು ಸಾವನ್ನಪ್ಪಿದ್ದರು. 2,000 ಫ್ಲಾಟ್‌ಗಳಲ್ಲಿ ಸುಮಾರು 4,600 ಜನರು ವಾಸಿಸುತ್ತಿದ್ದರು. ನವೀಕರಣದ ಸಮಯದಲ್ಲಿ ಅಳವಡಿಸಲಾದ ಗ್ರಿಲ್‌ಗಳು ಅಗ್ನಿ ಸುರಕ್ಷತಾ ಮಾನದಂಡಗಳನ್ನು ಪೂರೈಸಲಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ.

ಜೂನ್ 12 ರಂದು, ಏರ್ ಇಂಡಿಯಾ ಫ್ಲೈಟ್ 171 ಅಹಮದಾಬಾದ್‌ನಿಂದ ಲಂಡನ್‌ಗೆ ಟೇಕ್ ಆಫ್ ಆದ 32 ಸೆಕೆಂಡುಗಳಲ್ಲಿ ಅಪಘಾತಕ್ಕೀಡಾಯಿತು. 242 ಪ್ರಯಾಣಿಕರು ಮತ್ತು ಸಿಬ್ಬಂದಿಯಲ್ಲಿ ಒಬ್ಬ ಪ್ರಯಾಣಿಕ ಮಾತ್ರ ಬದುಕುಳಿದಿದ್ದರು. ವಿಮಾನವು ವೈದ್ಯಕೀಯ ಕಾಲೇಜು ಹಾಸ್ಟೆಲ್ ಬ್ಲಾಕ್‌ಗೆ ಡಿಕ್ಕಿ ಹೊಡೆದು 19 ಜನರು ಸಾವನ್ನಪ್ಪಿದ್ದರು ಮತ್ತು 67 ಜನರು ಗಾಯಗೊಂಡಿದ್ದರು.

ಗಾಜಾದಲ್ಲಿ ನಿರಂತರ ದಾಳಿಗಳು ಮತ್ತು ಸಹಾಯ ಸ್ಥಗಿತಗೊಂಡಿದ್ದರಿಂದ 2025 ರಲ್ಲಿ ತೀವ್ರ ಹಸಿವು ಮತ್ತು ಸಂಕಷ್ಟ ಉಂಟಾಯಿತು. 2023 ರಲ್ಲಿ ಪ್ರಾರಂಭವಾದ ಇಸ್ರೇಲ್-ಹಮಾಸ್ ಯುದ್ಧವು ಈ ವರ್ಷ ಗಾಜಾದ ಜನರಿಗೆ ವಿನಾಶವನ್ನು ತಂದಿತು.

ಸೆಪ್ಟೆಂಬರ್‌ನಲ್ಲಿ ನೇಪಾಳದಲ್ಲಿ ಸಾಮಾಜಿಕ ಮಾಧ್ಯಮ ನಿಷೇಧದ ನಂತರ, ಯುವಕರು, ವಿಶೇಷವಾಗಿ ಜೆನ್ ಝಿ , ಭ್ರಷ್ಟಾಚಾರದ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಪ್ರತಿಭಟಿಸಿದರು. ಹಿಂಸಾಚಾರ ಹೆಚ್ಚಾಯಿತು, ಇದರ ಪರಿಣಾಮವಾಗಿ 76 ಜನರು ಸಾವನ್ನಪ್ಪಿದರು. ಪ್ರಧಾನಿ ಕೆ.ಪಿ. ಓಲಿ ಶರ್ಮಾ ಸೆಪ್ಟೆಂಬರ್ 9 ರಂದು ರಾಜೀನಾಮೆ ನೀಡಿದರು ಮತ್ತು ಮೂರು ದಿನಗಳ ನಂತರ ಸುಶೀಲಾ ಕರ್ಕಿ ಮಧ್ಯಂತರ ಪ್ರಧಾನಿಯಾದರು.




