ಕಲಬುರಗಿ, ಜ.27: ಕಳೆದ ಲೋಕಸಭೆ ಚುನಾವಣೆಯಲ್ಲಿ (Lok Sabha Election) ಆದ ಸೋಲನ್ನು ಇದುವರೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಮತ್ತೆ ಮತ್ತೆ ಸೋಲಿನ ಕಹಿಯನ್ನು ನೆನಪಿಸಿಕೊಳ್ಳುತ್ತಿರುತ್ತಾರೆ. ಇಂದು ಕಲಬುರಗಿಯಲ್ಲಿ ಮಾತನಾಡಿದ ಅವರು, ಕಳೆದ ಸಲ ನಾನು ಸೋಲುತ್ತೇನೆಂದು ನಿರೀಕ್ಷೆ ಸಹ ಮಾಡಿರಲಿಲ್ಲ. ಆದರೆ ನಾನು ಸೋತೆ ಎಂದರು.
ಕಲಬುರಗಿಯಲ್ಲಿ ಸ್ಯಾಕ್ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಚುನಾವಣೆಯಲ್ಲಿ 11 ಸಲ ಗೆದ್ದಿದ್ದೆ. ಕಳೆದ ಸಲ ನಾನು ಸೋಲುತ್ತೇನೆಂದು ನಿರೀಕ್ಷೆ ಸಹ ಮಾಡಿರಲಿಲ್ಲ. ಆದರೆ ನಾನು ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತೆ ಎಂದು ಭಾಷಣದಲ್ಲಿ ಮತ್ತೆ ಮತ್ತೆ ತಮ್ಮ ಸೋಲಿನ ಕಹಿ ನೆನಪಿಸಿಕೊಂಡರು.
ಈ ಸಲ ಸರಿಯಿಲ್ಲ, ಚುನಾವಣೆಗೆ ಸ್ಪರ್ಧೆ ಬೇಡ ಎಂದು ಪತ್ನಿ ಹೇಳಿದ್ದರು. ಹೆಣ್ಮಕ್ಕಳ ಮಾತು ಕೇಳೋದು ಬೇಡ ಅಂತಾ ಚುನಾವಣೆಗೆ ಸ್ಪರ್ಧಿಸಿದ್ದೆ. ಆದರೆ ನಮ್ಮ ಸೀಟ್ ಕಳೆದುಕೊಂಡೆವು. ತಕ್ಷಣ ಸೋನಿಯಾ ಗಾಂಧಿ ಫೋನ್ ಮಾಡಿದ್ದರು. ನೀವು ಬೇಸರವಾಗಬೇಡಿ, ನಿಮ್ಮ ಸೇವೆ ಜನತೆಗೆ ಬೇಕಾಗಿದೆ ಎಂದಿದ್ದರು. ಅಲ್ಲದೆ, ತಕ್ಷಣ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿ ಅಂತ ಹೇಳಿದರು. ರಾಜ್ಯಸಭೆ ವಿಪಕ್ಷನಾಯಕನಾದೆ, ಈಗ ಎಐಸಿಸಿ ಅಧ್ಯಕ್ಷನಾಗಿದ್ದೇನೆ. ಆದರೂ ನಾನು ಗುರುಮಿಠಕಲ್, ಕಲಬುರಗಿ ಜನರನ್ನು ಎಂದೂ ಮರೆಯಲ್ಲ. ಇದು ನನ್ನ ಮೂಲ ಭೂಮಿ ಎಂದರು.
ಇದನ್ನೂ ಓದಿ: ರಾಜ್ಯ ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಮನಗಂಡೇ ವರಿಷ್ಟರು ಶೆಟ್ಟರ್ ರನ್ನು ವಾಪಸ್ಸು ಸೇರಿಸಿಕೊಂಡಿದ್ದಾರೆ: ಪ್ರಿಯಾಂಕ್ ಖರ್ಗೆ
ಎಲ್ಲರೂ ಜೀವನದಲ್ಲಿ ಕಷ್ಟ ಪಟ್ಟು ಶ್ರಮ ಹಾಕಬೇಕು. ನೀವು ಶ್ರಮ ಹಾಕಿದರೆ ಮಾತ್ರ ಯಶಸ್ಸು ಸಿಗುತ್ತದೆ. ನಾನು ಸಾಕಷ್ಟು ಕಷ್ಟಪಟ್ಟಿದ್ದೇನೆ. ಬಸವಣ್ಣನವರು ಹೇಳಿದಾಗೆ ಕೈಸರಾದರೆ ಬಾಯಿ ಮೋಸರಾಗುತ್ತದೆ. ಎಲ್ಲದಕ್ಕೂ ದೇವರು ಅಂದರೆ ಹೇಗೆ? ನೀವು ಕಷ್ಟ ಪಡಬೇಕು, ದೇವರು ವರ ಕೊಡುತ್ತಾನೆ. ಗಂಡ -ಹೆಂಡತಿ ಆಗದೇ ಗುಡಿ ಸುತ್ತಿದರೆ ಹೇಗೆ ಮಕ್ಕಳಾಗುತ್ತದೆ. ಈ ಮಾತನ್ನ ನಾನು ಹೇಳಿದ್ದಲ್ಲ. ಒಬ್ಬ ಸಂತರೇ ಹೇಳಿದ್ದಾರೆ, ಮೊದಲು ಗಂಡ ಹೆಂಡತಿಯಾಗಿ ಆ ಮೇಲೆ ದೇವರು ವರ ಕೊಡುತ್ತಾನೆ ಎಂದರು.
ನಮ್ಮದು ಇಲ್ಲಿ ಪ್ರವಾಸ ಇರಲಿಲ್ಲ. ಇವತ್ತು ನನ್ನದು ಉತ್ತರಖಾಂಡ ಪ್ರವಾಸ ಇತ್ತು. ಆದರೂ ಇಲ್ಲಿ ಅಭಿವೃದ್ಧಿ ಕೆಲಸ ಉದ್ಘಾಟನೆ ಇದೆ ಅಂತ ಬಂದಿದ್ದೇನೆ. ಕಲ್ಯಾಣ ಕರ್ನಾಟಕ ಭಾಗಕ್ಕೆ 371J ಕಾಯ್ದೆ ಜಾರಿ ಮಾಡಲು ಸಾಕಷ್ಟು ಶ್ರಮಪಟ್ಟಿದ್ದೇನೆ ಎಂದು ಹೇಳಿದ ಖರ್ಗೆ, ಈ ಕಾಯ್ದೆ ಪಾಸಗಾಲು ಎಲ್ಲ ಸಂಸತ್ ಸದಸ್ಯರ ಮನೆಗೆ ಹೋಗಿದ್ದೆ. ಎಲ್ಲರ ಮನೆ ಮನೆಗೆ ಹೋಗಿ ಒಪ್ಪಿಸಿದ್ದೆ. ಅದರಿಂದಾಗಿ ಆವತ್ತು ನಮಗೆ ಆರ್ಟಿಕಲ್ 371J ಸಿಕ್ಕಿತು ಎಂದರು.
ಆವತ್ತು ನಮ್ಮ ಹೈದ್ರಾಬಾದ್ ಕರ್ನಾಟದ ಎಲ್ಲಾ ಜಿಲ್ಲೆ ಸೇರಿ 100 ಮೆಡಿಕಲ್ ಸೀಟ್ ಸಿಗುತ್ತಿದ್ದವು. ಆದರೆ ಇಂದು 1100 ಸೀಟ್ ಸಿಗುತ್ತಿವೆ. ಇದಕ್ಕೆ ಕಾರಣ 371J ಕಾರಣ. ಇಷ್ಟೆಲ್ಲಾ ಮಾಡಿದರೂ ನಾವು ಪ್ರಚಾರ ತೆಗೆದುಕೊಳ್ಳಲಿಲ್ಲ. ಅದು ಪ್ರಚಾರನೂ ಆಗಿಲ್ಲ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ