ತ್ರಿಮೂರ್ತಿ ಡಿಸಿಎಂ ಚರ್ಚೆ, ಕರ್ನಾಟಕ ಕಾಂಗ್ರೆಸ್ ನಾಯಕರಿಗೆ ಕೆಸಿ ವೇಣುಗೋಪಾಲ್ ಎಚ್ಚರಿಕೆ
ಕರ್ನಾಟಕ ಕಾಂಗ್ರೆಸ್ ಪಾಳೆಯದಲ್ಲಿ ನಡೆಯುತ್ತಿರುವ ಮೂರು ಡಿಸಿಎಂ ಕಾಳಗಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ಮುಂದಾಗಿದ್ದು, ಹೇಳಿಕೆಗಳು ಬಿಜೆಪಿಗೆ ಪ್ರಯತ್ನಕ್ಕೆ ಸಹಕಾರಿಯಾಗಲಿದ್ದು, ಪಕ್ಷಕ್ಕೆ ಅನಾನುಕೂಲ ಹಾಗೂ ಗೊಂದಲ ಮೂಡಿಸುವ ವಿಚಾರವನ್ನ ಪ್ರಸ್ತಾಪಿಸದಂತೆ ಸ್ವಪಕ್ಷದ ನಾಯಕರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು, ಸೆ.24: ಕರ್ನಾಟಕ ಕಾಂಗ್ರೆಸ್ ಪಾಳೆಯದಲ್ಲಿ ನಡೆಯುತ್ತಿರುವ ಮೂರು ಡಿಸಿಎಂ (DCM) ಕಾಳಗಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ಮುಂದಾಗಿದ್ದು, ಹೇಳಿಕೆಗಳು ಬಿಜೆಪಿಗೆ ಪ್ರಯತ್ನಕ್ಕೆ ಸಹಕಾರಿಯಾಗಲಿದ್ದು, ಪಕ್ಷಕ್ಕೆ ಅನಾನುಕೂಲ ಹಾಗೂ ಗೊಂದಲ ಮೂಡಿಸುವ ವಿಚಾರವನ್ನ ಪ್ರಸ್ತಾಪಿಸದಂತೆ ಸ್ವಪಕ್ಷದ ನಾಯಕರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ (K.C.Venugopal) ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಡಿಸಿಎಂ ಗಲಾಟೆ ಜೋರಾದ ಹಿನ್ನೆಲೆ ರಾಜ್ಯ ನಾಯಕರಿಗೆ ಪ್ರಕಟಣೆ ಮೂಲಕ ಖಡಕ್ ಸೂಚನೆ ನೀಡಿದ ವೇಣುಗೋಪಾಲ್, ಪಕ್ಷದ ವಿಚಾರವನ್ನ ಕೇವಲ ಪಕ್ಷದ ವೇದಿಕೆಯಲ್ಲಷ್ಟೇ ಪ್ರಸ್ತಾಪಿಸಲು ಸೂಚನೆ ನೀಡಿದ್ದಾರೆ. ಪಕ್ಷಕ್ಕೆ ಅನಾನುಕೂಲ ಹಾಗೂ ಗೊಂದಲ ಮೂಡಿಸುವ ವಿಚಾರವನ್ನ ಪ್ರಸ್ತಾಪಿಸದಂತೆ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿ ಯೋಜನೆ ಯಶಸ್ಸಿನ ಹಿನ್ನಲೆ ಬಿಜೆಪಿ ಹಾಗೂ ಸ್ಥಳಿಯ ಪಕ್ಷ ಹತಾಶವಾಗಿದೆ. ಈ ಹಿನ್ನಲೆ ಜನರಲ್ಲಿ ಗೊಂದಲ ಮೂಡಿಸುವ ಯತ್ನ ನಡೆಯುತ್ತಿದೆ. ಕೆಲ ಕಾಂಗ್ರೆಸ್ ನಾಯಕರ ಹೇಳಿಕೆಗಳು ಬಿಜೆಪಿಗೆ ಪ್ರಯತ್ನಕ್ಕೆ ಸಹಕಾರಿಯಾಗಲಿದೆ. ಇನ್ನು ಮುಂದೆ ಪಕ್ಷದ ಹಾಗೂ ಸರ್ಕಾರದ ವಿಷಯವನ್ನ ಪಕ್ಷದ ವೇದಿಕಯಲ್ಲಷ್ಟೇ ಪ್ರಸ್ತಾಪಿಸಬೇಕು ಎಂದಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಜೋರಾಯ್ತು ಡಿಸಿಎಂ ಕೂಗು; ರಾಜಣ್ಣ ಬಳಿಕ ರಾಯರೆಡ್ಡಿಯಿಂದ ಹುದ್ದೆಗೆ ಬೇಡಿಕೆ
ಸೂಚನೆಯನ್ನು ಉಲ್ಲಂಘಿಸಿದರೆ ಅಶಿಸ್ತು ಎಂದು ಭಾವಿಸಲಾಗುವುದು. ಮುಂದಿನ ದಿನಗಳಲ್ಲಿ ಈ ಬಗ್ಗೆ ಎಲ್ಲಾ ನಾಯಕರು ಕಾರ್ಯಕರ್ತರು ಈ ವಿಚಾರವನ್ನ ಗಮನದಲ್ಲಿಟ್ಟುಕೊಳ್ಳಬೇಕು ಎಂದ ಕೆಸಿ ವೇಣುಗೋಪಾಲ್ ಸ್ವಪಕ್ಷದ ನಾಯಕರಿಗೆ ಸೂಚಿಸಿದ್ದಾರೆ.
ಮೂರು ಡಿಸಿಎಂ ಹುದ್ದೆ ಆಯ್ಕೆ ಮುಗಿದ ಅಧ್ಯಾಯ
ಮೂರು ಡಿಸಿಎಂ ಹುದ್ದೆಗಳ ಆಯ್ಕೆ ಮಾಡಬೇಕು ಎಂದು ನೀಡಿದ ಹೇಳಿಕೆ ಮುಗಿದ ಅಧ್ಯಾಯ ಎಂದು ಸಹಕಾರ ಇಲಾಖೆ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ನನ್ನ ಭಾವನೆಯನ್ನು ಹೇಳಿದ್ದೇನೆ ಅಷ್ಟೇ ಎಂದರು.
ನನ್ನ ಹೇಳಿಕೆ ಬಗ್ಗೆ ಹೈಕಮಾಂಡ್ಗೆ ದೂರು ಕೊಟ್ಟಿರುವುದು ಗೊತ್ತಿಲ್ಲ. ಹೈಕಮಾಂಡ್ ಯಾವ ತೀರ್ಮಾನ ತೆಗೆದುಕೊಳ್ಳುತ್ತೋ ತೆಗೆದುಕೊಳ್ಳಲಿ. ಪದೇಪದೆ ಡಿಸಿಎಂ ಹುದ್ದೆ ವಿಚಾರವನ್ನು ನಾನು ಮಾತನಾಡುವುದಿಲ್ಲ ಎಂದರು.
ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಪ್ರತಿಪಕ್ಷಗಳ, ರೈತರ ಪ್ರತಿಭಟನೆ ಭುಗಿಲೆದ್ದಿರುವುದು ಕಾಂಗ್ರೆಸ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದರೆ, ಪಕ್ಷದ ಆಂತರಿಕ ಭಿನ್ನಾಭಿಪ್ರಾಯ ಹೆಚ್ಚುತ್ತಿರುವುದು ಮತ್ತೊಂದೆಡೆ ಸಂಕಟಕ್ಕೆ ಕಾರಣವಾಗಿದೆ. ಸಮುದಾಯವಾರು ಮೂವರು ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡಬೇಕೆಂದು ಕೆಎನ್ ರಾಜಣ್ಣ ಬೇಡಿಕೆ ಇಟ್ಟಿದ್ದರು.
ಇವರ ಬೆನ್ನಲ್ಲೇ ಶಾಸಕ ಬಸವರಾಜ ರಾಯರೆಡ್ಡಿ ಅವರು ಆರು ಡಿಸಿಎಂ ಹುದ್ದೆಗೆ ಬೇಡಿಕೆ ಇಟ್ಟಿದ್ದರು. ಎಲ್ಲ ಜಾತಿ-ಧರ್ಮಗಳು ಕಾಂಗ್ರೆಸ್ಗೆ ಬೆಂಬಲ ನೀಡಿವೆ. ಹೀಗಾಗಿ ಅಲ್ಪಸಂಖ್ಯಾತ, ಎಸ್ಸಿ, ಎಸ್ಟಿ, ಲಿಂಗಾಯತರಿಗೆ ಡಿಸಿಎಂ ಹುದ್ದೆ ನೀಡಿ ಎಂದು ಹೇಳಿಕೆ ನೀಡಿದ್ದರು.
ಹೇಳಿಕೇಳಿ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಪಟ್ಟ ಕೈತಪ್ಪಿ ಡಿಸಿಎಂ ಸ್ಥಾನ ದೊರಕಿತ್ತು. ಈ ವೇಳೆ ಎರಡನೇ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವಂತಿಲ್ಲ ಎಂದು ಡಿಕೆ ಶಿವಕುಮಾರ್ ಹೈಕಮಾಂಡ್ಗೆ ಷರತ್ತು ವಿಧಿಸಿದ್ದರು.
ಸ್ವಪಕ್ಷದ ನಾಯಕರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದ್ದ ಡಿಸಿಎಂ ಡಿಕೆ ಶಿವಕುಮಾರ್, ಇದಕ್ಕೆ ಮುಖ್ಯಮಂತ್ರಿಗಳೇ ಉತ್ತರ ಕೊಡಬೇಕು ಎಂದಿದ್ದರು. ಹೈಕಮಾಂಡ್ ಒಪ್ಪುವುದಾದರೆ ನನ್ನದೇನು ಅಭ್ಯಂತರ ಇಲ್ಲ ಎನ್ನುವ ಮೂಲಕ ಹೆಚ್ಚುವರಿ ಡಿಸಿಎಂ ವಾದದ ಪರವಾಗಿ ಪರೋಕ್ಷವಾಗಿ ಬ್ಯಾಟ್ ಬೀಸಿದ್ದರು.
ಸರ್ಕಾರದ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿರುವ ಡಿಕೆ ಶಿವಕುಮಾರ್ ನಡೆ ಕೆಲ ಹಿರಿಯ ನಾಯಕರಿಗೆ ಇಷ್ಟವಾಗಿಲ್ಲ. ಮುಂದೊಂದು ದಿನ ಡಿಕೆ ಶಿವಕುಮಾರ್ ಸಿಎಂ ಆದರೆ ಇತರೆ ನಾಯಕರ ಅಸ್ತಿತ್ವಕ್ಕೂ ಪ್ರಶ್ನೆ ಮೂಡಲಿದೆ. ಇದೇ ಕಾರಣಕ್ಕೆ ಹಾಲಿ ಡಿಸಿಎಂ ಜತೆ ಮೂವರು ಡಿಸಿಎಂ ಎಂಬ ದನಿ ಎದ್ದಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ