ಬಂಡಾಯ ಇರುವ 4 ಲೋಕಸಭಾ ಕ್ಷೇತ್ರಗಳ ಬಿಜೆಪಿ ನಾಯಕರಿಗೆ ಗೆಲುವಿನ ಗುರಿ ಕೊಟ್ಟ ಅಮಿತ್ ಶಾ!
ಲೋಕಸಭಾ ಚುನಾವಣೆ ಘೋಷಣೆ ಬಳಿಕ ಮೊದಲ ಬಾರಿಗೆ ಕೇಂದ್ರ ಗೃಹ ಸಚಿವ, ಚುನಾವಣಾ ಚಾಣಕ್ಯ ಅಮಿತ್ ಶಾ ಅವರು ಪ್ರವೇಶ ಮಾಡಿದ್ದು, ಇಂದು(ಏಪ್ರಿಲ್ 02) ಬೆಂಗಳೂರಿನಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಾಯಕರ ಜೊತೆ ಸರಣಿ ಸಭೆಗಳನ್ನು ಮಾಡಿದರು. ಈ ವೇಳೆ ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರಗಳನ್ನ ಗೆಲ್ಲುವ ಸಲುವಾಗಿ ‘ದೋಸ್ತಿ’ಗಳಿಗೆ ಬೂಸ್ಟ್ ನೀಡಿದ್ದಾರೆ. ಅಲ್ಲದೇ ಬಂಡಾಯ ಇರುವ ಕ್ಷೇತ್ರಗಳ ನಾಯಕರ ಜೊತೆಯೂ ಶಾ ಸಭೆ ಮಾಡಿ ಕೆಲ ಟಾಸ್ಕ್ ಕೊಟ್ಟಿದ್ದಾರೆ.
ಬೆಂಗಳೂರು, (ಏಪ್ರಿಲ್ 02): ಲೋಕಸಭೆ ಚುನಾವಣೆ ಗೆಲ್ಲುವುದಕ್ಕಾಗಿ ರಣತಂತ್ರ ರೂಪಿಸಲು ಬೆಂಗಳೂರಿಗೆ ಬಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah), ಇಂದು (ಏಪ್ರಿಲ್) ಖಾಸಗಿ ಹೋಟೆಲ್ನಲ್ಲಿ ಬಿಜೆಪಿ-ಜೆಡಿಎಸ್ ನಾಯಕರ ಜತೆ ಸಭೆ ನಡೆಸಿದರು. ಇದೇ ವೇಳೆ ರಾಜ್ಯ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಅವರು ಒಂದಷ್ಟು ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಅಲ್ಲದೇ ಬಂಡಾಯ ಇರುವ ಕ್ಷೇತ್ರ ನಾಯಕರ ಜೊತೆಗೂ ಅಮಿತ್ ಶಾ ಸಭೆ ಮಾಡಿದ್ದು, ಎಲ್ಲರೂ ಒಟ್ಟಾಗಿ ಚುನಾವಣೆಯಲ್ಲಿ ಕೆಲಸ ಮಾಡಬೇಕೆಂದು ಬಂಡಾಯ ನಾಯಕರಿಗೆ ಖಡಕ್ ಸೂಚನೆ ನೀಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಇದ್ದ ಬಂಡಾಯವನ್ನು ಅಮಿತ್ ಶಾ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗೆಲುವಿನ ಗುರಿ ನೀಡಿದ ಶಾ
ದಾವಣಗೆರೆ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಸೇರಿದಂತೆ ಒಟ್ಟು 4 ಕ್ಷೇತ್ರಗಳ ಕೋರ್ ಕಮಿಟಿ ಸದಸ್ಯರ ಜೊತೆ ಅಮಿತ್ ಶಾ ಸಭೆ ಮಾಡಿದ್ದು, ಈ ವೇಳೆ ಬಂಡಾಯ ಎದ್ದಿರುವ ನಾಯಕರುಗಳಿಗೆ ಎಲ್ಲರೂ ಒಟ್ಟಾಗಿ ಚುನಾವಣೆಯಲ್ಲಿ ಕೆಲಸ ಮಾಡಬೇಕೆಂದು ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಅಲ್ಲದೇ 4 ಕ್ಷೇತ್ರಗಳಲ್ಲೂ 2 ಲಕ್ಷ ಮತಗಳ ಅಂತರದ ಗೆಲ್ಲಬೇಕು ಎಂದು ನಾಯಕರುಗಳಿಗೆ ಶಾ ಗೆಲುವಿನ ಗುರಿ ನೀಡಿದ್ದಾರೆ.
ಇದನ್ನೂ ಓದಿ: ಮುಂದಿನ ರಾಜಕೀಯ ನಡೆ ಘೋಷಿಸುವ ಬಗ್ಗೆ ಅಭಿಮಾನಿಗಳೊಂದು ಸಂದೇಶ ರವಾನಿಸಿದ ಸುಮಲತಾ!
ಇನ್ನು ಈ ನಾಲ್ಕು ಕ್ಷೇತ್ರಗಳ ಸಭೆಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಬಗ್ಗೆ ಬಿಸಿ-ಬಿಸಿ ಚರ್ಚೆ ನಡೆದಿದೆ. ಕ್ಷೇತ್ರದ ಮುಖಂಡರಿಂದ ಸಹಕಾರ ಇಲ್ಲದಿರುವ ಬಗ್ಗೆ ದಾವನಗೆರೆ ಸಂಸದ ಸಿದ್ದೇಶ್ವರ್, ಅಮಿತ್ ಶಾ ಮುಂದೆ ಪ್ರಸ್ತಾಪಿಸಿದ್ದಾರೆ. ಇದಕ್ಕೆ ಮಾಜಿ ಸಚಿವ ರೇಣುಕಾಚಾರ್ಯ ಮತ್ತು ಇತರ ಮುಖಂಡರು ಆಕ್ಷೇಪಿಸುವ ರೀತಿಯಲ್ಲಿ ಮಾತನಾಡಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಅಮಿತ್ ಶಾ, ನಾಯಕರ ಪರಿಸ್ಥಿತಿ ತಿಳಿಗೊಳಿಸಿ ಕೆಲ ಖಡಕ್ ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ದಾವಣಗೆರೆ, ಚಿಕ್ಕಬಳ್ಳಾಪುರ ನಾಯಕರಿಗೆ ಶಾ ಹೇಳಿದ್ದೇನು?
ಬಿಜೆಪಿಯ ಅಭ್ಯರ್ಥಿಗಳು ಮಧ್ಯಾಹ್ನ 1 ಗಂಟೆಯೊಳಗೆ ಮತ ಹಾಕಬೇಕು. ಜೆಡಿಎಸ್ನವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮತ ಹಾಕಿಸಿ ತಿಳಿ ಹೇಳಿದರು. ಇನ್ನು ಇದೇ ವೇಳೆ ಸಂಸದ ಸಿದ್ದೇಶ್ವರ್, ದಾವಣಗೆರೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಹಕಾರ ಇಲ್ಲದ ಬಗ್ಗೆ ಶಾ ಮುಂದೆ ಹೇಳಿದರು. ಇದಕ್ಕೆ ಪ್ರತಿಯಾಗಿ ಬಂಡಾಯ ನಾಯಕ ಎಂಪಿ ರೇಣುಕಾಚಾರ್ಯ ಪ್ರತಿಕ್ರಿಯಿಸಿ, ನಾನು 3 ಬಾರಿ ಶಾಸಕ, ಒಂದು ಸಲ ಮಂತ್ರಿ ಎಂದರು. ಬಳಿಕ ಶಾ, ಅದು ಗೊತ್ತಿದೆ. ನೀವು ಕೆಲಸ ಮಾಡಿ ಎಂದು ಹೇಳಿದರು.
ಇನ್ನು ಇದೇ ವೇಳೆ ಹರಪ್ಪನಹಳ್ಳಿ ಮಂಡಲ ಅಧ್ಯಕ್ಷರ ಬದಲಾವಣೆ ಬಗ್ಗೆ ಕರುಣಾಕರ ರೆಡ್ಡಿ ಪ್ರಸ್ತಾಪ ಮಾಡಿದ್ದು, ಇದಕ್ಕೆ ಅಮಿತ್ ಶಾ, ಸಣ್ಣ ವಿಷಯವನ್ನು ಯಾಕೆ ದೊಡ್ಡದು ಮಾಡುತ್ತೀರಿ ಎಂದರು. ಅಲ್ಲದೇ ಈ ವೇಳೆ ಚುನಾವಣೆಯಲ್ಲಿ ಕೆಲಸ ಮಾಡುವಂತೆ ಕರುಣಾಕರ ರೆಡ್ಡಿ, ರೇಣುಕಾಚಾರ್ಯ, ಮಾಡಾಳು ವಿರೂಪಾಕ್ಷಪ್ಪಗೆ ಸೂಚನೆ ನೀಡಿದರು. ಚಿಕ್ಕಬಳ್ಳಾಪುರದಲ್ಲಿ ಕೆಲಸ ಮಾಡುವಂತೆ S.R.ವಿಶ್ವನಾಥ್ ಅವರಿಗೂ ಸಹ ಶಾ ಸೂಚನೆ ನೀಡಿದ್ದು, ಮೋದಿಗೋಸ್ಕರ ಕೆಲಸ ಮಾಡುವುದಾಗಿ ವಿಶ್ವನಾಥ್ ಭರವಸೆ ನೀಡಿದರು.
ಚಿತ್ರದುರ್ಗ ನಾಯಕರಿಗೆ ಶಾ ಕೊಟ್ಟ ಸಲಹೆ ಏನು?
ಕ್ಷೇತ್ರದಲ್ಲಿ ಜೆಡಿಎಸ್ ಮತ ಬೇರೆ ಕಡೆ ಹೋಗದಂತೆ ನೋಡಿಕೊಳ್ಳಿ. ಜೊತೆಗೆ ಜೆಡಿಎಸ್ ಕಾರ್ಯಕರ್ತರ ಜೊತೆಯಾಗಿ ಎಲ್ಲರೂ ಕೆಲಸ ಮಾಡಿ. ನಿಮ್ಮ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಮುನ್ನ, ಮತದಾನದ ವೇಳೆ ಮತ ಎಣಿಕೆವರೆಗೂ ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಸಭೆಯಲ್ಲಿ ಚಿತ್ರದುರ್ಗ ಬಿಜೆಪಿ ನಾಯಕರಿಗೆ ಶಾ ಸೂಚನೆ ನೀಡಿದ್ದಾರೆ.
ಅಮಿತ್ ಶಾ ಸೂಚನೆಯಂತೆ ಬಂಡಾಯ ನಾಯಕರು ಸಹ ಮೋದಿ ಮತ್ತು ದೇಶಕ್ಕಾಗಿ ಈ ಚುನಾವಣೆಯಲ್ಲಿ ಪಕ್ಷದ ಪರ ಕೆಲಸ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ ಬಿಜೆಪಿಯಲ್ಲಿ ಉದ್ಭವಿಸಿದ್ದ ಬಂಡಾಯ ಶಮನವಾದಂತಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ