ಬೆಂಗಳೂರು ಗ್ರಾಮಾಂತರದಲ್ಲಿ ಮಂಜುನಾಥ್ 5 ಲಕ್ಷ ಮತಗಳ ಅಂತರದಿಂದ ಗೆಲ್ತಾರೆ:-ಅಮಿತ್ ಶಾ ಭವಿಷ್ಯ
ಅಮಿತ್ ಶಾ ಅವರು ಡಿಕೆ ಬ್ರದರ್ಸ್ ಅವರ ಕೋಟೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭಾ ಚುನಾವಣಾ ಪ್ರಚಾರ ಆರಂಭಿಸಿದ್ದು, ಮೈತ್ರಿ ಅಭ್ಯರ್ಥಿ ಡಾ ಸಿಎನ್ ಮಂಜುನಾಥ್ ಪರವಾಗಿ ಇಂದು (ಏಪ್ರಿಲ್ 2) ಚನ್ನಪಟ್ಟಣದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಈ ವೇಳೆ ಮಾತನಾಡಿದ ಶಾ, ಮುಂಜುನಾಥ್ ಗೆಲುವಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ರಾಮನಗರ, (ಏಪ್ರಿಲ್ 02): ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾದ ಬೆನ್ನಲ್ಲೇ ಇದೇ ಮೊದಲ ಬಾರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಕರ್ನಾಟಕಕ್ಕೆ ಲಗ್ಗೆ ಇಟ್ಟಿದ್ದು, ರಾಜ್ಯದಲ್ಲಿ 28ಕ್ಕೂ 28 ಕಕ್ಷೇತ್ರಗಳಲ್ಲಿ ಗೆಲುವಿಗಾಗಿ ನಾಯಕರಿಗೆ ಕೆಲ ಸಲಹೆ ಸೂಚನೆಗಳು ನೀಡಿದ್ದಾರೆ. ಬಳಿಕ ಅಮಿತ್ ಶಾ ಅವರು ಡಿಕೆ ಬ್ರದರ್ಸ್ ಅವರ ಕೋಟೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭಾ ಚುನಾವಣಾ ಪ್ರಚಾರ ಆರಂಭಿಸಿದ್ದು, ಮೈತ್ರಿ ಅಭ್ಯರ್ಥಿ ಡಾ ಸಿಎನ್ ಮಂಜುನಾಥ್ ಪರವಾಗಿ ಇಂದು (ಏಪ್ರಿಲ್ 2) ಚನ್ನಪಟ್ಟಣದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ರೋಡ್ ಶೋ ವೇಳೆ ಕಾರ್ಯಕರ್ತರನ್ನುದ್ದೇಶಿ ಮಾತನಾಡಿದ ಅಮಿತ್ ಶಾ, ನಾನು ಕರ್ನಾಟಕದ ಜನರಿಗೆ ಮನವಿ ಮಾಡಲು ಬಂದಿದ್ದೇನೆ. ಕರ್ನಾಟಕದ 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ- ಜೆಡಿಎಸ್ ಖಾತೆಗೆ ನೀಡಿ. ತೆನೆ ಹೊತ್ತ ಮಹಿಳೆ ಹಾಗೂ ಕಮಲಕ್ಕೆ ವೋಟ್ ನೀಡಿದರೆ ನೀವು ಮೋದಿಗೆ ಶಕ್ತಿ ನೀಡಿದಂತೆ. ಈ ಬಾರಿ 400ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲುವ ಗುರಿ ಇದೆ. ಇನ್ನು ಡಾ.ಸಿ.ಎನ್ ಮಂಜುನಾಥ ಅವರು 5 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರೋಡ್ ಶೋ ವೇಳೆ ಮಾತನಾಡಿದ ಅಮಿತ್ ಶಾ, ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ಆರ್ಥಿಕತೆಯಲ್ಲಿ 11ರಲ್ಲಿದ್ದ ಭಾರತವನ್ನು 5ನೇ ಸ್ಥಾನಕ್ಕೆ ತಂದಿದ್ದಾರೆ. ಅದೇ ರೀತಿಯಾಗಿ ಈಗಲೂ ಅವರನ್ನು ಗೆಲ್ಲಿಸಿದರೆ 3ನೇ ಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಾರೆ. ಆ ನಿಟ್ಟಿನಲ್ಲಿ ಅವರು ಕಾರ್ಯೋನ್ಮುಖರಾಗಿದ್ದಾರೆ. ಮೋದಿ ಅವರು ಕಳೆದ ಹತ್ತು ವರ್ಷಗಳಲ್ಲಿ ದೇಶವನ್ನು ಸುರಕ್ಷಿತವಾಗಿ ಇಟ್ಟಿದ್ದಾರೆ. ಹೀಗಾಗಿ ದೇಶದ ಜನರು ಮೋದಿ ಪರವಾಗಿ ಇದ್ದಾರೆ. ಇಂದಿನ ರೋಡ್ ಶೋ ನೋಡಿದರೆ ನಮ್ಮ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಅವರು ಐದು ಲಕ್ಷ ಮತಗಳಿಂದ ಗೆಲುವು ಸಾಧಿಸುತ್ತಾರೆ ಎಂಬ ವಿಶ್ವಾಸ ನನಗೆ ಮೂಡಿದೆ. ಹೀಗಾಗಿ ರಾಜ್ಯದಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮನವಿ ಮಾಡಲು ಬಂದಿದ್ದೇನೆ. ನೀವು ಹಾಕುವ ಮತ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದರು.
ಇದನ್ನೂ ಓದಿ: Amit Shah Road Show : ಡಿಕೆ ಬ್ರದರ್ಸ್ ಕೋಟೆಯಲ್ಲಿ ಅಮಿತ್ ಶಾ ಭರ್ಜರಿ ರೋಡ್ ಶೋ, ಲೈವ್ನಲ್ಲಿ ನೋಡಿ
ದೇಶದ ಜನರು ಯಾವುದೇ ಉಗ್ರರ ದಾಳಿ ಇಲ್ಲದೆ ಸುರಕ್ಷಿತವಾಗಿ, ನೆಮ್ಮದಿಯಿಂದ ಬಾಳಬೇಕಾದರೆ ಮತ್ತು ದೇಶದ ಆರ್ಥಿಕತೆ ನಂಬರ್ 3ರ ಸ್ಥಾನಕ್ಕೇರಬೇಕಾದರೆ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನ ಮಂತ್ರಿ ಆಗಬೇಕು. ಹಾಗಾಗಿ ಈ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ನೀವು ನಮ್ಮ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಹೇಳಿದರು.
ಮೋದಿ ಇರುವುದರಿಂದ ದೇಶ ಸುರಕ್ಷಿತ
ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಗೊಳ್ಳುತ್ತಿವೆ. ಆದರೆ, ಕಾಂಗ್ರೆಸ್ ಎಸ್‌ಡಿಪಿಐ ಅನ್ನು ಸಮರ್ಥನೆ ಮಾಡಿಕೊಂಡು ಬರುತ್ತಿದೆ. ಹಾಗಾದರೆ, ಜನ ಎಷ್ಟು ಸುರಕ್ಷಿತವಾಗಿದ್ದಾರೆ ಎಂಬ ಪ್ರಶ್ನೆ ಬರುವುದಿಲ್ಲವೇ? ಆದರೆ, ದೇಶದಲ್ಲಿ ಈಗ ಆಡಳಿತ ನರೇಂದ್ರ ಮೋದಿ ಅವರ ಕೈಯಲ್ಲಿ ಇರುವುದರಿಂದ ಇಡೀ ದೇಶ ಸುರಕ್ಷಿತವಾಗಿದೆ. ರಾಜಕಾರಣದಲ್ಲಿ ನರೇಂದ್ರ ಮೋದಿಯವರು 23 ವರ್ಷಗಳಿಂದ ಮುಖ್ಯಮಂತ್ರಿ ಹಾಗೂ ಪ್ರಧಾನಿ ಆಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಆಗಿನಿಂದ ಇಲ್ಲಿಯವರೆಗೂ ಅವರ ಮೇಲೆ ಒಂದೇ ಒಂದು ಗುರುತರ ಆಪಾದನೆ ಇಲ್ಲ. ಅದೇ ಇನ್ನೊಂದೆಡೆ ಪ್ರತಿಪಕ್ಷಗಳ ಮೇಲೆ 12 ಲಕ್ಷ ಕೋಟಿ ರೂಪಾಯಿಗೂ ಅಧಿಕ ಭ್ರಷ್ಟಾಚಾರದ ಆರೋಪಗಳಿವೆ ಎಂದು ಅಮಿತ್ ಶಾ ವಾಗ್ದಾಳಿ ನಡೆಸಿದರು.
ರಾಜ್ಯದ 28ಕ್ಕೂ 28 ಕ್ಷೇತ್ರಗಳನ್ನು ನಮ್ಮ ಜೋಳಿಗೆಗೆ ಹಾಕಿ ಎಂದು ರಾಜ್ಯದ ಜನರಿಗೆ ಮನವಿ ಮಾಡಲು ಬಂದಿದ್ದೇನೆ. ತೆನೆ ಹೊತ್ತ ಮಹಿಳೆಗೆ ಕೊಡುವ ಮತವನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಮಲದ ಚಿಹ್ನೆಗೆ ಹಾಕಿ. ಇದಕ್ಕೆ ಹಾಕಿದರೂ ನೀವು ನರೇಂದ್ರ ಮೋದಿಯವರಿಗೆ ಮತ ಹಾಕಿದಂತಾಗುತ್ತದೆ. ಈ ಬಾರಿ 400ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಬೇಕು ಎಂದು ನರೇಂದ್ರ ಮೋದಿ ಅವರು ಗುರಿಯನ್ನು ಹಾಕಿಕೊಂಡಿದ್ದಾರೆ ಎಂದು ಅಮಿತ್ ಶಾ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.