ಮಂಗಳೂರು: ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಅವರನ್ನು ಬೆಂಗಳೂರಿನಿಂದ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಗೆ ರಸ್ತೆ ಮಾರ್ಗವಾಗಿ ಕರೆತಂದರೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರಿಗೆ ಸೆಲ್ಯೂಟ್ ಹೊಡೆಯುತ್ತೇನೆ ಎಂದು ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ (U.T.Khader) ಸವಾಲು ಹಾಕಿದ್ದಾರೆ. ಫೆಬ್ರವರಿ 11ರಂದು ಅಮಿತ್ ಶಾ ಅವರು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳುತ್ತಿದ್ದು, ಭರ್ಜರಿ ರೋಡ್ ಶೋ (Amit Shah Road Show) ನಡೆಸಲು ತಯಾರಿ ನಡೆಸಲಾಗುತ್ತಿದೆ. ಈ ಬಗ್ಗೆ ವ್ಯಂಗ್ಯವಾಡಿದ ಖಾದರ್, ರೋಡ್ ಶೋ ಮಾಡುವಾಗ ಅಮಿತ್ ಶಾ ಅವರು ರಸ್ತೆಯಲ್ಲಿರುವ ಗುಂಡಿಗಳನ್ನು ಲೆಕ್ಕ ಮಾಡಲಿ ಎಂದು ಟಾಂಗ್ ನೀಡಿದರು.
ಇನ್ನು, ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿ ಖಾದರ್, ಕೇಂದ್ರ ಬಜೆಟ್ನಲ್ಲಿ ಕರಾವಳಿಗೆ ಒಂದೇ ಒಂದು ಅನುದಾನ ಇಲ್ಲ. ಶಿರಾಡಿಗೆ ಸುರಂಗ ಮಾರ್ಗ ಅಂತಾ ಹಲವು ವರ್ಷಗಳಿಂದ ಹೇಳುತ್ತಿದ್ದಾರೆ. ಆದರೆ ಯಾವುದೇ ಬಜೆಟ್ನಲ್ಲಿ ಈ ಯೋಜನೆಗೆ ಹಣ ಇಟ್ಟಿಲ್ಲ. ರೈಲ್ವೇ ಪ್ರತ್ಯೇಕ ವಿಭಾಗ ಕೇಳಿದಾಗಲೂ ಸರ್ಕಾರದ ಸ್ಪಂದನೆ ಇಲ್ಲ. ಬಂದರು ಮತ್ತು ರಸ್ತೆಗೆ ಯಾವ ಅನುದಾನವನ್ನೂ ಸರ್ಕಾರ ನೀಡಿಲ್ಲ. ಶಿರಾಡಿ ಘಾಟ್ ಬಗ್ಗೆ ಸರ್ಕಾರ ಸ್ಪಷ್ಟವಾಗಿ ಜನರಿಗೆ ಹೇಳಲಿ. ಟನಲ್ ಬೇಡ, ರಸ್ತೆಗೆ ತೇಪೆ ಆದರೂ ಹಾಕಿ. ಅದೂ ಆಗಲ್ಲ ಅಂದರೆ ನಾವು ನಮ್ಮ ಅನುದಾನ ಬಳಸಿ ತೇಪೆ ಕಾರ್ಯ ಮಾಡುತ್ತೇವೆ ಎಂದರು.
ಇದನ್ನೂ ಓದಿ: ಹಿಂದುತ್ವ, ಮನುವಾದದ ವಿರೋಧಿ ಎಂದ ಸಿದ್ದರಾಮಯ್ಯ ಮೇಲೆ ಕೇಸರಿ, ಕುಂಕುಮಾಸ್ತ್ರ ಪ್ರಯೋಗಿಸಿದ ಸಚಿವ ಸಿಸಿ ಪಾಟೀಲ್
ತುಳು ಭಾಷೆಯನ್ನು ರಾಜ್ಯದ ಅಧೀಕೃತ ಭಾಷೆಯನ್ನಾಗಿ ಘೋಷಿಸುವ ವಿಚಾರವಾಗಿ ಮಾತನಾಡಿದ ಖಾದರ್, ಬಿಜೆಪಿ ಶಾಸಕರು ಅಧಿಕಾರಕ್ಕೆ ಬಂದು ನಾಲ್ಕುವರ್ಷಗಳಾದರೂ ಈವರೆಗೆ ಎರಡನೇ ರಾಜ್ಯ ಭಾಷೆಯನ್ನಾಗಿ ಮಾಡಲಿಲ್ಲ. ಈಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಜನರ ಆಕ್ರೋಶ ತಪ್ಪಿಸಲು ಮೋಸ ಮಾಡುತ್ತಿದ್ದಾರೆ. ಸರ್ಕಾರ ಅಧ್ಯಯನ ಸಮಿತಿ ಮಾಡಿರುವುದೇ ತುಳು ಭಾಷೆಗೆ ಮಾಡಿರುವ ಅವಮಾನ. ತುಳು ಭಾಷೆಗೆ ಅದರದ್ದೇ ಆದ ಇತಿಹಾಸವಿದೆ. ಈ ಭಾಷೆಯ ಅಧ್ಯಯನ ಮಾಡಿ ವರದಿ ಕೊಡುವ ಅವಶ್ಯಕತೆ ಏನಿತ್ತು? ಇದು ಜನರಿಗೆ ಮೋಸ ಮಾಡುವ ತಂತ್ರ ಆಗಿದೆ ಎಂದರು.
ರಾಜಕೀಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:01 pm, Mon, 6 February 23