ಹಿಂದುತ್ವ, ಮನುವಾದದ ವಿರೋಧಿ ಎಂದ ಸಿದ್ದರಾಮಯ್ಯ ಮೇಲೆ ಕೇಸರಿ, ಕುಂಕುಮಾಸ್ತ್ರ ಪ್ರಯೋಗಿಸಿದ ಸಚಿವ ಸಿಸಿ ಪಾಟೀಲ್
ನಾನು ಹಿಂದೂ ವಿರೋಧಿ ಅಲ್ಲ, ಹಿಂದುತ್ವ, ಮನುವಾದದ ವಿರೋಧಿ ಎಂದು ಹೇಳಿದ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ ಸಚಿವ ಸಿಸಿ ಪಾಟೀಲ್, ಕೇಸರಿ, ಕುಂಕುಮ ಮನುವಾದದ ಸಂಕೇತನ? ಕೇಸರಿ, ಕುಂಕುಮ ಕಂಡರೆ ಭಯ ಎಂದವರ್ಯಾರು ಎಂದು ಪ್ರಶ್ನಿಸಿದ್ದಾರೆ.
ಗದಗ: ನಾನು ಹಿಂದೂ ವಿರೋಧಿ ಅಲ್ಲ, ಹಿಂದುತ್ವ, ಮನುವಾದದ ವಿರೋಧಿ ಎಂದು ಹೇಳಿದ ಸಿದ್ದರಾಮಯ್ಯ (Siddaramaiah) ಅವರಿಗೆ ಟಾಂಗ್ ನೀಡಿದ ಸಚಿವ ಸಿ.ಸಿ ಪಾಟೀಲ್ (C.C.Patil), ಕೇಸರಿ, ಕುಂಕುಮ ಮನುವಾದದ ಸಂಕೇತನ? ಕೇಸರಿ, ಕುಂಕುಮ ಕಂಡರೆ ಭಯ ಎಂದವರ್ಯಾರು ಎಂದು ಪ್ರಶ್ನಿಸಿದ್ದಾರೆ. ಕೇಸರೀ ಕಂಡರೆ ಭಯ ಆಗತ್ತೆ ಕುಂಕುಮ ಕಂಡರೆ ಭಯ ಆಗತ್ತೆ ಅಂತಾ ಹೇಳಿದವರು ಅದೇ ಸಿಧ್ಧರಾಮಯ್ಯನವರು ತಾನೇ? ಕೇಸರಿ ಮತ್ತು ಕುಂಕುಮ ಹಿಂದು ಮತ್ತು ಹಿಂದುತ್ವದ ಸಂಕೇತವಾಗಿದೆ. ಚುನಾವಣೆಯಲ್ಲಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅಂದ ಹಾಗೆ ಕೊನೆ ಹಂತದ ಸರ್ವೆ ವರದಿ ಬರುತ್ತಿರುವುದರಿಂದ ಅವರು ಕುಗ್ಗಿದ್ದಾರೆ. ಕಾಂಗ್ರೆಸ್ 150-160 ಸ್ಥಾನ ಗೆಲ್ಲುವುದಿಲ್ಲ. ಅಷ್ಟು ಸ್ಥಾನ ಗೆದ್ದರೆ ನಾನು ರಾಜಕೀಯದಿಂದ ನಿವೃತ್ತಿ ಆಗುತ್ತೇನೆ ಎಂದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಮುಖ್ಯಮಂತ್ರಿ ಮಾಡಲು ಆರ್ಎಸ್ಎಸ್ ಹುನ್ನಾರ ಮಾಡುತ್ತಿದೆ ಎಂಬ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಪಾಟೀಲ್, ಜನರ ವಿಚಾರವನ್ನು ಬೇರೆ ಕಡೆ ಸೆಳೆಯುವ ಕಲೆ ಕುಮಾರಸ್ವಾಕಿಗೆ ಗೊತ್ತು. ಸತತ ನಾಲ್ಕು ಬಾರಿ ಪ್ರಹ್ಲಾದ್ ಜೋಶಿ ಚುನಾಯಿತರಾಗಿ ಸಾಧನೆ ಮೂಲಕ ಈ ಹಂತಕ್ಕೆ ಬಂದಿದ್ದಾರೆ. ಪ್ರತಿದಿನ ಪ್ರಧಾನಮಂತ್ರಿಗಳ ಜೊತೆಗೆ ಗೃಹ ಸಚಿವರ ಜೊತೆಗೆ ಪ್ರತಿಕ್ರಿಯಿಸುವಂತ ಹಂತಕ್ಕೆ ಬೆಳೆದು ನಿಂತಿದ್ದಾರೆ. ಅಂತಹ ಖಾತೆಗೆ ಬರಬೇಕಾದರೆ ಜಾತಿಯಿಂದ ಬರಲು ಸಾಧ್ಯವಿಲ್ಲ. ಜಾತಿಯಿಂದ ಬರುವುದು ಜೆಡಿಎಸ್ ಪಕ್ಷದಲ್ಲಿದೆ ಎಂದರು.
ಇದನ್ನೂ ಓದಿ: ಸುಮ್ಮ ಸುಮ್ಮನೆ ಹೆದರಿಸೋಕೆ ಬಂದರೆ ತೊಡೆ ತಟ್ಟೋದು ನನಗೆ ಗೊತ್ತಿದೆ: ಸಿದ್ದರಾಮಯ್ಯ
ನಮ್ಮ ಪಕ್ಷದಲ್ಲಿ ಸಾಮರ್ಥ್ಯನೇ ಮುಖ್ಯ ಎಂದ ಸಿ.ಸಿ.ಟಿ.ಪಾಟೀಲ್, ಕುಮಾರಸ್ವಾಮಿ ಮಾತಿಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ನಮ್ಮ ಪಕ್ಷದ ವಿಚಾರ ಬಿಟ್ಟು ಹಾಸನ ಟಿಕೆಟ್ ವಿಚಾರ ಬಗ್ಗೆ ಚಿಂಚಿಸಲಿ. ಜಾತಿ ಮೂಲವನ್ನು ಯಾರೂ ಕೆಣಕಬಾರದು. ನಾನೇನು ಪಂಚಮಸಾಲಿಯಲ್ಲಿ ಹುಟ್ಟಬೇಕು ಅಂತಾ ಬೇಡಿಕೊಂಡಿದ್ನಾ? ಕುಮಾರಸ್ವಾಮಿ ಒಕ್ಕಲಿಗ ಜಾತಿಯಲ್ಲಿ ಹುಟ್ಟಬೇಕು ಅಂತಾ ಬೇಡಿಕೊಂಡಿದ್ರಾ? ಪ್ರಲ್ಹಾದ್ ಜೋಶಿ ಒಬ್ಬ ದಕ್ಷ ಆಡಳಿತಗಾರ. ಅಭಿವೃಧ್ಧಿ ಕೆಲಸ ಮಾಡಿದ್ದಾರೆ, ಕಳಸಾ ಬಂಡೂರಿಗೆ ಕೆಲಸ ಮಾಡಿದ್ದಾರೆ ಎಂದರು.
ಅದ್ಧೂರಿಯಾಗಿ ಲಕ್ಕುಂಡಿ ಉತ್ಸವ ಆಚರಣೆ
ಫೆಬ್ರವರಿ 10ರಿಂದ ಮೂರು ದಿನಗಳ (ಫೆಬ್ರವರಿ 10ರಿಂದ ಫೆಬ್ರವರಿ 12) ಕಾಲ ಲಕ್ಕುಂಡಿ ಉತ್ಸವ ನಡೆಯಲಿದ್ದು, ಈ ಬಾರಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ ಎಂದು ಸಿ.ಸಿ.ಪಾಟೀಲ್ ಹೇಳಿದರು. ಉತ್ಸವಕ್ಕೆ ಮುಖ್ಯಮಂತ್ರಿಯವರು 1 ಕೋಟಿ ರೂ. ಅನುದಾನ ಕೊಟ್ಟಿದ್ದಾರೆ. ಫೆ.10ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲಕ್ಕುಂಡಿ ಉತ್ಸವವನ್ನು ಉದ್ಘಾಟನೆ ಮಾಡಲಿದ್ದಾರೆ. ವೀರರಾಣಿ ಕಿತ್ತೂರು ಚೆನ್ನಮ್ಮ ನಾಟಕ ಪ್ರದರ್ಶನ, ಸೇರಿದಂತೆ 25 ಕ್ಕೂ ಹೆಚ್ಚು ಕಲಾಪ್ರಕಾರಗಳು ನಡೆಯಲಿವೆ. ಕಾರ್ಯಕ್ರಮದಲ್ಲಿ ಸಚಿವರಾದ ಸುನೀಲ್ ಕುಮಾರ್, ಗೋವಿಂದ ಎಂ. ಕಾರಜೋಳ, ಬಿ.ಸಿ.ಪಾಟೀಲ್, ಭೈರತಿ ಬಸವರಾಜ್, ಶ್ರೀರಾಮುಲು ಭಾಗಿಯಾಗಲಿದ್ದಾರೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:24 pm, Mon, 6 February 23